
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ:ಜು.03:- ಮಾದಕ ವಸ್ತು ಸೇವನೆಯಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸುವಂತೆ ಬೆಟ್ಟದಪುರದ ಎಸ್‍ಎಂಎಸ್ ವಿದ್ಯಾಸಂಸ್ಥೆ ಅಧ್ಯಕ್ಷರಾದ ಬಿ.ವಿ ಮಂಜುನಾಥ್ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಟ್ಟದಪುರ ಯೋಜನಾ ಕಚೇರಿ ವತಿಯಿಂದ ಬೆಟ್ಟದಪುರದ ಎಸ್‍ಎಂಎಸ್ ವಿದ್ಯಾಸಂಸ್ಥೆಯಲ್ಲಿ ನಡೆದ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ಹಾನಿಕರಕವಾಗಿದ್ದು ಕೆಲ ಸಂದರ್ಭ ಸಾವು ಸಹ ಸಂಭವಿಸುತ್ತದೆ ನಾವೆಲ್ಲರೂ ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಬೆಟ್ಟದಪುರ ಪೆÇಲೀಸ್ ಠಾಣೆ ಎಎಸ್‍ಐ ಮಂಜುನಾಥ್ ಅವರು ಮಾತನಾಡಿ ಮಾದಕ ವಸ್ತುಗಳ ಮಾರಾಟ ಕಾನೂನು ಬಾಹಿರವಾಗಿದ್ದು ಅಂತಹವರ ವಿರುದ್ಧ ದೂರು ಬಂದ ವೇಳೆ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಟ್ಟು ಮಾರಾಟ ಮಾಡುವವರು ಹಾಗೂ ಸೇವನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಅಪ್ರಾಪ್ತ ವಯಸ್ಸಿನವರು ಈಚಿನ ದಿನಗಳಲ್ಲಿ ಹೆಚ್ಚಾಗಿ ಮಾದಕ ವಸ್ತು ಸೇವನೆ ಚಟಕೆ ಬೀಳುತ್ತಿರುವುದು ಆಘಾತಕಾರಿ ವಿಷಯವಾಗಿದ್ದು ನಾವೆಲ್ಲರೂ ಜಾಗೃತರಾಗಿ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕರಿಸಬೇಕು ಎಂದರು.
ಜನಜಾಗೃತಿ ವೇದಿಕೆ ಉಪಾಧ್ಯಕ್ಷರಾದ ಬಿ.ಜೆ ದೇವರಾಜ್ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಕಲಿಕೆಗೆ ಹೆಚ್ಚು ಒತ್ತು ನೀಡಿ ಕೆಟ್ಟ ಹವ್ಯಾಸಗಳಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸಬೇಕು ಎಂದರು.
ಬೆಟ್ಟದಪುರ ವಲಯ ಯೋಜನಾಧಿಕಾರಿ ಶೇಖರ್ ಗೌಡ ಅವರು ಮಾತನಾಡಿ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮ ಅವರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಸಂಸ್ಥೆಯಿಂದ ಸಂಪನ್ಮೂಲ ವ್ಯಕ್ತಿಗಳ ಮುಖಾಂತರ ಮಾದಕ ವಸ್ತು ವಿರೋಧಿ ಜಾಗೃತಿ ಮೂಡಿಸಲಾಗುತ್ತಿದೆ, ಅಂತರಾಷ್ಟ್ರೀಯ ಮಾದಕ ವಿರೋಧಿ ದಿನಾಚರಣೆ ಅಂಗವಾಗಿ ರಾಜ್ಯದ 1065 ಶಾಲಾ ಕಾಲೇಜುಗಳಲ್ಲಿ ಆನ್ಲೈನ್ ಮುಖಾಂತರ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸೇವನೆಯಿಂದ ದೂರವಿರುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಈ ಸಂದರ್ಭ ಒಕ್ಕೂಟ ಅಧ್ಯಕ್ಷರಾದ ರೂಪ, ಕೊನೆಯ ಮೇಲ್ವಿಚಾರಕಿ ಸುನಿತಾ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ಹಾಗೂ ಎಸ್‍ಎಂಎಸ್ ವಿದ್ಯಾಸಂಸ್ಥೆ, ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.


























