
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು. 9 :- ಮಳೆಯಾಶ್ರಿತ ಪ್ರದೇಶದಲ್ಲಿ ಸಕಾಲದಲ್ಲಿ ಮಳೆ ಬಾರದೆ ಕೈಕೊಟ್ಟರೆ ಬರದ ಛಾಯೆ ಮೂಡುತ್ತದೆ ಇದರಿಂದ ರೈತರು ಗುಳೇ ಕಡೆ ಹೋಗುತ್ತಿದ್ದೂ ಇದನ್ನು ತಪ್ಪಿಸುವ ಮುಖ್ಯ ಉದ್ದೇಶ ಹಾಗೂ ಬರದ ನಾಡಿನಲ್ಲಿ ಬರ ನೀಗಿಸಲು ಸರ್ಕಾರದ ಗಂಗಾಕಲ್ಯಾಣ ಯೋಜನೆ ಸಹಕಾರಿಯಾಗಿದೆ ಇದನ್ನು ರೈತರು ಸದುಪಯೋಗ ಪಡೆದುಕೊಂಡು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಶಾಸಕ ಡಾ ಶ್ರೀನಿವಾಸ ಕ್ಷೇತ್ರದ ರೈತರಿಗೆ ಕಿವಿಮಾತು ಹೇಳಿದರು.
ಅವರು ತಾಲೂಕಿನ ನರಸಿಂಹಗಿರಿ ಗ್ರಾಮದಲ್ಲಿ ಬುಧವಾರ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಹಾಗೂ 2025-26 ನೇ ಸಾಲಿನ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ ಕೊಳವೆ ಬಾವಿ ಕೊರೆದ ನೀರಾವರಿ ವತಿಯಿಂದ ಎಸ್ಸಿಪಿ / ಟಿಎಸ್ಪಿ ಅನುದಾನ ಅಡಿಯಲ್ಲಿ ಕ್ಷೇತ್ರದಲ್ಲಿನ ಅರ್ಹ 26 ಜನ ರೈತ ಫಲಾನುಭವಿಗಳಿಗೆ ಪಂಪ್ ಸೆಟ್ ಮತ್ತು ಪೂರಕ ಸಾಮಾಗ್ರಿಗಳನ್ನು ವಿತರಣೆ ಮಾಡಿ ಮಾತನಾಡುತ್ತ ಈಗಾಗಲೇ ಕೂಡ್ಲಿಗಿ ಕ್ಷೇತ್ರದಲ್ಲಿ ಕೆರೆನೀರು ತುಂಬಿಸುವ ಮಹತ್ವಕಾಂಕ್ಷಿ ಯೋಜನೆ ಪೂರ್ಣಗೊಂಡು ಲೋಕಾರ್ಪಣೆಗೊಂಡಿದ್ದು ಕೆರೆಗಳಿಗೆ ನೀರು ತುಂಬಿದರೆ ಅಂತರ್ಜಲ ಮಟ್ಟ ಹೆಚ್ಚುತ್ತದೆ ಹೊಲಕ್ಕೆ ನೀರು ಬರಬೇಕೆಂದರೆ ಗಂಗಾಕಲ್ಯಾಣದಂತಹ ಯೋಜನೆ ಬಹಳಷ್ಟು ರೈತರ ಜೀವನಕ್ಕೆ ಸಂಜೀವಿನಿಯಂತಾಗಿದೆ ಈ ಯೋಜನೆಯಿಂದ ಬರಪೀಡಿತ ಪ್ರದೇಶಕ್ಕೆ ಅಂತ್ಯ ಹಾಡಲು, ಗುಳೇ ಹೋಗುವುದನ್ನು ತಪ್ಪಿಸಲು, ಮಾನವ ಅಭಿವೃದ್ಧಿಗೆ ಒತ್ತು ನೀಡಲು ಸರ್ಕಾರದ ಉನ್ನತ ಮಟ್ಟದಲ್ಲಿ ನಮ್ಮ ಭಾಗದ ರೈತರ ಬಡತನ ನೀಗಿಸಲು ಗಂಗಾ ಕಲ್ಯಾಣವನ್ನು ಒದಗಿಸಿಕೊಟ್ಟಿರುವಂತದ್ದು ತಂತಸ ತಂದಿದೆ ಎಂದರು. ಹಾಗೆಯೇ, ರೈತರು ಪಂಪ್ ಸೆಟ್ ಮತ್ತು ಪೂರಕ ಸಾಮಗ್ರಿಗಳನ್ನು ಒಳ್ಳೆಯ ರೀತಿಯಲ್ಲಿ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು. ನಮ್ಮಲ್ಲಿನ ರೈತರು ಪೋಡಿ -ಪೌತಿ, ಮಾಡಿಸಿಕೊಳ್ಳಬೇಕು. ಆ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದರು.ಅಲ್ಲದೆ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಹೆಚ್ಚಿನ ಪ್ರಮಾಣದಲ್ಲಿ ಗಂಗಾ ಕಲ್ಯಾಣದ ಸೌಲಭ್ಯಗಳನ್ನು ಪ್ರಾದೇಶಿಕ ಮತ್ತು ಸಾಮುದಾಯಿಕವಾಗಿ ಒದಗಿಸಿಕೊಡಲಾಗುವುದು ಎಂದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ತಿಳಿಸಿದರು.
ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಎಇಇ ಮಂಜುನಾಥ ಜವಳಿ, ಎಇ ಪರಮೇಶ್ವರಪ್ಪ, ರಮೇಶ, ರಂಗನಾಥ ವಿ ಹೆಚ್, ಜೆ ಇ ಶಬ್ಬೀರ್, ಶರಣಬಸಪ್ಪ, ಮತ್ತು ಸಿಬ್ಬಂದಿ ವರ್ಗ, ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕ ಹಾಗೂ ಶಾಸಕರ ಸಹೋದರ ತಮ್ಮಣ್ಣ ಎನ್ ಟಿ, ಕೂಡ್ಲಿಗಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಕೂಡ್ಲಿಗಿ ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಣ್ಣ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಶಶಿಧರಸ್ವಾಮಿ, ತಾಂ ಪಂ ಮಾಜಿ ಸದಸ್ಯ ಮಂಜುನಾಥ, ಹಾಗೂ ರಂಗಪ್ಪ, ಎಪಿಎಂಸಿ ಉಪಾಧ್ಯಕ್ಷ ಮಹಾದೇವಣ್ಣ, ಮುಖಂಡರಾದ ಬುಡ್ಡಾರೆಡ್ಡಿ, ರಹಮತ್, ಟೈಲರ್ ನಾಗರಾಜ, ಚಂದ್ರಣ್ಣ, ಉಪ್ಪಾರ ವೆಂಕಟೇಶ, ಬಂಗಾಳಿ ಓಬಯ್ಯ, ಹರವದಿ ಈರಣ್ಣ, ಇತರೆ ಫಲಾನುಭವಿಗಳು, ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.


































