Home Uncategorized ಹಸಿರು ಮಾರ್ಗ ಮೆಟ್ರೋ ಸಂಚಾರ ಸ್ಥಗಿತ; ಪ್ರಯಾಣಿಕರ ಪರದಾಟ

ಹಸಿರು ಮಾರ್ಗ ಮೆಟ್ರೋ ಸಂಚಾರ ಸ್ಥಗಿತ; ಪ್ರಯಾಣಿಕರ ಪರದಾಟ

ಬೆಂಗಳೂರು:ಜು.೨೧- ನಗರದ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಮಂಗಳವಾರ ಬೆಳಿಗ್ಗೆ ವಿದ್ಯುತ್ ವ್ಯತ್ಯಯ ಉಂಟಾದ ಪರಿಣಾಮ ಮೆಟ್ರೋ ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿ, ಸಾವಿರಾರು ಪ್ರಯಾಣಿಕರು ಪರದಾಡುವಂತಾಯಿತು.


ಬೆಳಿಗ್ಗೆ ಸುಮಾರು ೮ ಗಂಟೆಯಿಂದ ಹಸಿರು ಮಾರ್ಗದ ಮೆಟ್ರೋ ಸೇವೆ ಅಸ್ತವ್ಯಸ್ತಗೊಂಡಿತು. ವಿದ್ಯುತ್ ಸಮಸ್ಯೆಯಿಂದ ಯಶವಂತಪುರ, ನಾಗಸಂದ್ರ ನಡುವಿನ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೇ ವೇಳೆ ಸಿಲ್ಕ್ ಇನ್‌ಸ್ಟಿಟ್ಯೂಟ್, ಯಶವಂತಪುರ ನಡುವೆ ಮಾತ್ರ ಶಾರ್ಟ್ ಲೂಪ್ ಮೆಟ್ರೋ ಸೇವೆಯನ್ನು ನಡೆಸಲಾಯಿತು.


ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಕಚೇರಿ ಹಾಗೂ ಇತರ ಕೆಲಸಗಳಿಗೆ ತೆರಳುತ್ತಿದ್ದ ಪ್ರಯಾಣಿಕರು ನಿಲ್ದಾಣಗಳ ಹೊರಗೆ ಬಸ್, ಆಟೋ ಮತ್ತು ಕ್ಯಾಬ್‌ಗಳಿಗಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಬೆಳಗಿನ ಗರಿಷ್ಠ ಸಂಚಾರ ಸಮಯದಲ್ಲೇ ಸಮಸ್ಯೆ ಎದುರಾದ ಕಾರಣ ಪ್ರಯಾಣಿಕರು ತೀವ್ರ ಅನಾನುಕೂಲ ಅನುಭವಿಸಿದರು.


ಘಟನೆ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಮೆಟ್ರೋ ರೈಲು ನಿಗಮ (ಃಒಖಅಐ), ವಿದ್ಯುತ್ ಪೂರೈಕೆಯಲ್ಲಿ ಉಂಟಾದ ತಾಂತ್ರಿಕ ಸಮಸ್ಯೆ ಪರಿಹರಿಸಲು ತಾಂತ್ರಿಕ ತಂಡಗಳನ್ನು ತಕ್ಷಣ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ತಿಳಿಸಿತು. ಸೇವೆ ಪುನರಾರಂಭಕ್ಕೆ ಸುಮಾರು ೩೦ ರಿಂದ ೪೦ ನಿಮಿಷಗಳ ಸಮಯ ಬೇಕಾಗುತ್ತದೆ ಎಂದು ಆರಂಭದಲ್ಲಿ ತಿಳಿಸಲಾಗಿತ್ತು.


ನಂತರ ತಾಂತ್ರಿಕ ದೋಷವನ್ನು ಸರಿಪಡಿಸಿ ವಿದ್ಯುತ್ ಪೂರೈಕೆಯನ್ನು ಮರುಸ್ಥಾಪಿಸಿದ ಬಳಿಕ ಹಸಿರು ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರವನ್ನು ಹಂತ ಹಂತವಾಗಿ ಪುನರಾರಂಭಿಸಲಾಯಿತು. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಬಿಎಂಆರ್‌ಸಿಎಲ್ ವಿಷಾದ ವ್ಯಕ್ತಪಡಿಸಿದ್ದು, ಸೇವೆ ಸಹಜ ಸ್ಥಿತಿಗೆ ಮರಳಿದೆ ಎಂದು ತಿಳಿಸಿದೆ.