Home ಜಿಲ್ಲೆ ಮಂಗಳೂರು ಬಜ್ಪೆ: ಮನೆಯ ಅಂಗಳದಲ್ಲಿ ಮಲಗಿದ್ದ ನಾಯಿಯನ್ನು ಹೊತ್ತೊಯ್ದ ಚಿರತೆ

ಬಜ್ಪೆ: ಮನೆಯ ಅಂಗಳದಲ್ಲಿ ಮಲಗಿದ್ದ ನಾಯಿಯನ್ನು ಹೊತ್ತೊಯ್ದ ಚಿರತೆ

ಮಂಗಳೂರು: ಮನೆಯಂಗಳಕ್ಕೆ ನುಗ್ಗಿದ ಚಿರತೆಯೊಂದು ಅಲ್ಲೇ ಮಲಗಿದ್ದ ನಾಯಿಯನ್ನು ಕ್ಷಣಾರ್ಧದಲ್ಲಿ ಹೊತ್ತೊಯ್ದ ಘಟನೆ ಮಂಗಳೂರು ಸಮೀಪದ ಬಜ್ಪೆ ಪೆರ್ಮುದೆಯಲ್ಲಿ ನಡೆದಿದೆ.
ಇಲ್ಲಿನ ದಿವಂಗತ ನೋಣಯ್ಯ ಪೂಜಾರಿ ಎಂಬವರ ಮನೆಯ ಅಂಗಳದಲ್ಲಿ ಆಗಸ್ಟ್ ೯ರಂದು ತಡರಾತ್ರಿ ೧೧.೪೧ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ನಿಶ್ಶಬ್ದವಾಗಿ ಕಳ್ಳಬೆಕ್ಕಿನಂತೆ ಅಂಗಳಕ್ಕೆ ಕಾಲಿಟ್ಟ ಚಿರತೆ, ಗಢ ನಿದ್ರೆಯಲ್ಲಿದ್ದ ಶ್ವಾನದ ಮೇಲೆ ಏಕಾಏಕಿ ಎರಗಿ ಕುತ್ತಿಗೆಯನ್ನು ಹಿಡಿದು ಕತ್ತಲಲ್ಲಿ ಮಾಯವಾಗಿದೆ.
ಚಿರತೆಯ ಈ ದಾಳಿಯ ಸಂಪೂರ್ಣ ಭೀಕರ ದೃಶ್ಯವು ಮನೆಯ ಅಂಗಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಡರಾತ್ರಿ ನಾಯಿಯ ಆಕ್ರಂದನ ಕೇಳಿ ಮನೆಯವರು ಹೊರಬಂದು ನೋಡುವಷ್ಟರಲ್ಲಿ ಚಿರತೆ ನಾಯಿಯೊಂದಿಗೆ ಪರಾರಿಯಾಗಿತ್ತು.
ಪೆರ್ಮುದೆ ಮತ್ತು ಸುತ್ತಮುತ್ತಲಿನ ವಸತಿ ಪ್ರದೇಶಗಳಲ್ಲಿ ಚಿರತೆ ಸಂಚಾರ ಹೆಚ್ಚಾಗಿರುವುದು ಸ್ಥಳೀಯರಲ್ಲಿ ತೀವ್ರ ಭೀತಿಗೆ ಕಾರಣವಾಗಿದೆ. ರಾತ್ರಿ ವೇಳೆ ಮನೆಯಿಂದ ಹೊರಬರಲು ಜನ ಹೆದರುವಂತಾಗಿದೆ.