ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು, ತರಬೇತಿ ಮತ್ತು ಉದ್ಯೋಗ ನಿಯೋಜನಾ ಘಟಕ ಹಾಗೂ ಸ್ನಾತಕೋತ್ತರ ಗಣಕ ವಿಜ್ಞಾನ ವಿಭಾಗದ ಆಶ್ರಯದಲ್ಲಿ, ನಾಸ್ಕಾಂ ಫೌಂಡೇಶನ್ ಮತ್ತು ಐಬಿಎಂ ಸ್ಕಿಲ್ಬಿಲ್ಡ್ ಸಹಯೋಗದಲ್ಲಿ “ಗೆಟಿಂಗ್ ಸ್ಟಾರ್ಟೆಡ್ ವಿತ್ ಎಐ” ವಿಷಯದ ಪ್ರಮಾಣಪತ್ರ ಬೂಟ್ ಕ್ಯಾಂಪ್ ಗೆ ಮಂಗಳವಾರ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮವು ಡಿಜಿಟಲ್ ಭವಿಷ್ಯಕ್ಕಾಗಿ ಭಾರತದ ಯುವಜನತೆಯನ್ನು ಸಬಲಗೊಳಿಸುವ ಯೋಜನೆಯಡಿ ಆಯೋಜಿಸಲ್ಪಟ್ಟಿದ್ದು, ಯುವಜನತೆಯನ್ನು ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಸಜ್ಜುಗೊಳಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅವರ ಪದವಿಯ ಪಠ್ಯ ವಿಷಯಗಳ ಜೊತೆಗೆ ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಗೆ ಹೊಂದಿಕೊಳ್ಳುವ ಜ್ಞಾನ, ಕೌಶಲ್ಯ ಮತ್ತು ಚಿಂತನಶಕ್ತಿಯನ್ನು ನೀಡಲಾಗುತ್ತಿದೆ. ಈ ರೀತಿಯ ಉದ್ಯಮ ಶೈಕ್ಷಣಿಕ ಸಹಭಾಗಿತ್ವಗಳು ವಾಸ್ತವಿಕ ಕಲಿಕಾ ಅನುಭವಗಳನ್ನು ಒದಗಿಸುವ ಮೂಲಕ ಅವರ ವೃತ್ತಿಪರ ಸಾಮರ್ಥ್ಯವನ್ನು ವೃದ್ಧಿಸುತ್ತವೆ. ಎಲ್ಲಾ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದೇ ನಮ್ಮ ಸಂಸ್ಥೆಯ ಗುರಿಯಾಗಿದೆ ಎಂದು ಹೇಳಿದರು.
ನಾಸ್ಕಾಂ ಫೌಂಡೇಶನ್ನ ಕೋರ್ಸ್ ಕನ್ಸಲ್ಟೆಂಟ್ ಪುನೀತ್ ಎಸ್ ಮಾತನಾಡಿ, ವಿದ್ಯಾರ್ಥಿಗಳು ಆರಂಭಿಕ ಹಂತದಲ್ಲಿಯೇ ಎಐ ಕುರಿತು ಜ್ಞಾನ ಮತ್ತು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಕೃತಕ ಬುದ್ಧಿಮತ್ತೆಯು ಜಗತ್ತಿನಲ್ಲಿ ಮಹತ್ತರ ಪರಿವರ್ತನೆಗಳನ್ನು ಉಂಟುಮಾಡುತ್ತಿರುವ ಪ್ರಾಮಾಣಿಕತೆ, ಸಹಾನುಭೂತಿ, ಪರಸ್ಪರ ಗೌರವ, ಜವಾಬ್ದಾರಿತನ ಮತ್ತು ನೈತಿಕ ನಿರ್ಧಾರ ಸಾಮರ್ಥ್ಯದಂತಹ ಮಾನವೀಯ ಮೌಲ್ಯಗಳು ಹಾಗೂ ಸದ್ಗುಣಗಳು ಎಂದಿಗೂ ತಮ್ಮ ಮಹತ್ವವನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಿದರು. ಇವರೊಂದಿಗೆ ನಾಸ್ಕಾಂ ಫೌಂಡೇಶನ್ನ ಕೋರ್ಸ್ ಕನ್ಸಲ್ಟೆಂಟ್ ಕಿಶೋರ್ ಕೆ. ಎಸ್. ಅವರು ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿಯನ್ನು ನಡೆಸಿಕೊಟ್ಟರು.
ಪ್ರಥಮ ಬಿಸಿಎ ಪದವಿ ವಿದ್ಯಾರ್ಥಿನಿ ಕಾವೇರಮ್ಮ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಕಂಪ್ಯೂಟರ್ ಸಯನ್ಸ್ ಹಾಗೂ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗಗಳ ಡೀನ್ ಡಾ. ವಿನಯಚಂದ್ರ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಕಾಲೇಜಿನ ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ಅಧಿಕಾರಿ ಡಾ. ಗೀತಾ ಪೂರ್ಣಿಮಾ ಕೆ ವಂದಿಸಿದರು. ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಷ್ಮಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.
ಉಪಪ್ರಾಂಶುಪಾಲರಾದ ಡಾ. ವಿಜಯಕುಮಾರ್ ಎಂ, ಐಕ್ಯೂಎಸಿ ಸಂಯೋಜಕರಾದ ಡಾ. ಎಡ್ವಿನ್ ಎಸ್. ಡಿಸೋಜಾ, ಹಾಗೂ ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ಅಧಿಕಾರಿ ಅಭಿಷೇಕ್ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನ್ಯಾಸ್ಕಾಂ ಫೌಂಡೇಶನ್ನ ಸಾಮಾಜಿಕ ನಾವೀನ್ಯತೆ ಮತ್ತು ಸಿಎಸ್‌ಆರ್ ಕಾರ್ಯಕ್ರಮಗಳ ಹಿರಿಯ ವ್ಯವಸ್ಥಾಪಕರಾದ ಅಜಯ್ ಶಂಕರ್ ಹಾಗೂ ನ್ಯಾಸ್ಕಾಂ ಫೌಂಡೇಶನ್ನ ಸಿಎಸ್‌ಆರ್ ವೃತ್ತಿಪರರಾದ ರಶ್ಮಿ ಲೋಹಾನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


































