Home ಜಿಲ್ಲೆ ಮೈಸೂರು ನಿರಂತರ ಅಧ್ಯಯನದಿಂದ ಯಶಸ್ಸು ನಮ್ಮದಾಗುತ್ತದೆ: ನಾಗದೇವ್

ನಿರಂತರ ಅಧ್ಯಯನದಿಂದ ಯಶಸ್ಸು ನಮ್ಮದಾಗುತ್ತದೆ: ನಾಗದೇವ್

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.27-
ನಿರಂತರ ಅಧ್ಯಯನ ಹಾಗೂ ಉಪನ್ಯಾಸಕರ ಮಾರ್ಗದರ್ಶನದಿಂದ ಜೆಇಇಯಂತಹ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ ಎಂದು ಮಲೆಯೂರಿನ ಎಂ.ಜಿ. ನಾಗದೇವ್ ತಿಳಿಸಿದರು.


ಜೆಇಇ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರಾಂಕ್ ಪಡೆದಿರುವ ಎಂ.ಜಿ. ನಾಗದೇವ್ ಅವರು ತಾಲೂಕಿನ ಮಲೆಯೂರಿನ ಸ್ವಗೃಹದಲ್ಲಿ ದುಗ್ಗಹಟ್ಟಿ ರಾಜೇಶ್ ಗೆಳೆಯರ ಬಳಗ, ಚಾಮರಾಜನಗರ ಬಸವ ಕೇಂದ್ರ ಹಾಗೂ ಗೂಳಿ ಗ್ರೂಪ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬಾಲ್ಯದಿಂದಲೂ ನನಗೆ ಏನನ್ನಾದರೂ ಸಾಧಿಸಬೇಕೆಂಬ ಛಲ ಇತ್ತು. ಇದಕ್ಕೆ ಪೂರಕವಾಗಿ ನನ್ನ ತಂದೆ ತಾಯಿ ಗುರುಗಳು ಮಾರ್ಗದರ್ಶನ ನೀಡಿದರು ಅದು ಇಂದು ಸಾರ್ಥಕವಾಗಿದೆ ಎಂದರು. ಮುಂದೆ ದೇಶದ ಪ್ರಸಿದ್ಧ ಐಐಟಿಯಲ್ಲಿ ಶಿಕ್ಷಣ ಮುಂದುವರಿಸಿ ಒಳ್ಳೆಯ ಜ್ಞಾನ ಸಂಪಾದಿಸಿ ಉದ್ಯೋಗದ ಜೊತೆ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕೆಂದರು.


ದಾನಿಗಳಾದ ದುಗ್ಗಹಟ್ಟಿ ರಾಜೇಶ್ ಮಾತನಾಡಿ, ಎಂ.ಜಿ. ನಾಗದೇವ ಪ್ರತಿಷ್ಠಿತ ಜೆಎಸ್‍ಎಸ್ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿರುವ ಮಲೆಯೂರು ಗ್ರಾಮದ ಎಂ.ಡಿ. ಗುರುಸ್ವಾಮಿ ಮತ್ತು ಎ.ಸಿ. ನೇತ್ರಾವತಿಯವರ ಸುಪುತ್ರನಾಗಿದ್ದಾನೆ. ಜೆಇಇ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರಾಂಕ್ ಪಡೆದಿರುವ ಈತ ತನ್ನ ಶಿಕ್ಷಣವನ್ನು ಮೈಸೂರು ಹಾಗೂ ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದು ಇತ್ತೀಚಿಗೆ ನಡೆದ ಸಿಇಟಿ ಪರೀಕ್ಷೆಯಲ್ಲೂ 28ನೇ ರಾಂಕ್ ಪಡೆದಿದ್ದಾನೆ. ಮುಂದಿನ ದಿನಗಳಲ್ಲೂ ಕಠಿಣ ಶ್ರಮ ವಹಿಸಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದರು.
ಚಾಮರಾಜನಗರದ ಎಂಸಿಎಸ್ ಪ್ರೌಢಶಾಲಾ ಮುಖ್ಯ ಶಿಕ್ಷಕ ಹೆಗ್ಗವಾಡಿಪುರ ಮಹದೇವಸ್ವಾಮಿ ಮಾತನಾಡಿ, ಯುವಕರು ಶ್ರದ್ಧೆ ಛಲ ಪರಿಶ್ರಮ ರೂಢಿಸಿಕೊಂಡು ಗುರಿಯತ್ತ ಸಾಗಿದರೆ ಅಸಾಧ್ಯವಾದುದನ್ನೂ ಸಾಧಿಸಬಹುದಾಗಿದೆ ಎಂದು ಅಭಿಪ್ರಾಯ ಪಟ್ಟರು.
ಅವರು ತಾಲೂಕಿನ ಮಲೆಯೂರು ಗ್ರಾಮದ ಜೆಇಇ ಮೇನ್ಸ್‍ನ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದು ಜಿಲ್ಲೆಯ ಕೀರ್ತಿ ಎತ್ತಿ ಹಿಡಿದಿದ್ದಾರೆ. ಯುವಕರು ವಿದ್ಯಾರ್ಥಿ ದೆಸೆಯಲ್ಲಿ ಏಕಾಗ್ರತೆ ಬೆಳೆಸಿಕೊಂಡು ಗುರಿಯತ್ತ ಸಾಗಿದರೆ ಏನನ್ನಾದರೂ ಸಾಧಿಸಬಹುದು ಪರಿಶ್ರಮಪಟ್ಟು ಗುರಿಯೆಡೆಗೆ ಸಾಗಲು ಛಲ ಹೊಂದಿದ್ದರೆ ಸಾಧಕರಾಗಬಹುದು ಎಂದರು.


ಹಿರಿಯ ಸಹಕಾರಿ ಧುರೀಣ ಕೋಡಿಮೋಳೆ ರಾಜಶೇಖರ್ ಮಾತನಾಡಿ, ಶಿಕ್ಷಣ ಇಂದು ಸ್ಪರ್ಧಾತ್ಮಕವಾಗಿದ್ದು ಉದ್ಯೋಗ ಕೇಂದ್ರೀಕೃತವಾಗುತ್ತಿದೆ. ಹೀಗಾಗಿ ಪರಿಶ್ರಮವೇ ವಿದ್ಯಾರ್ಥಿ ಯಶಸ್ಸಿನ ಗುಟ್ಟಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನ ಹೆಮ್ಮೆಯ ಪುತ್ರ ನಾಗದೇವ ಜೆಇಇ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದು ತಾಲೂಕು ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಸರು ತಂದಿದ್ದಾನೆ ಈತನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು. ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಪರ್ಧಾತ್ಮಕ ಪರೀಕೆ ಎದುರಿಸಿ ರಾಷ್ಟ್ರದಲ್ಲಿ ಉನ್ನತ ಸ್ಥಾನ ಗಳಿಸಲಿ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಅವರ ಭವಿಷ್ಯಕ್ಕೆ ಮಾರ್ಗದರ್ಶನ ನೀಡುವಂತೆ ಸಲಹೆ ನೀಡಿದರು.
ಸುತ್ತೂರು ಶಾಲೆಯಲ್ಲಿ ಶಿಕ್ಷಕಿಯಾಗಿರುವ ತಾಯಿ ಎ.ಸಿ. ನೇತಾವತಿ ಮಾತನಾಡಿ, ನಮ್ಮ ಪುತ್ರ ಮೊಬೈಲ್ ಮತ್ತು ಟಿವಿಯಿಂದ ದೂರವಿದ್ದು, ಕೆಲ ಕಾಲ ಹೈಸ್ಕೂಲ್ ಹಂತದಲ್ಲಿ ಕ್ರೀಡಾ ಚಟುವಟಿಕೆಗಳಲ್ಲೂ ಭಾಗವಹಿಸುತ್ತಾ ಉತ್ತಮ ಅಂಕಗಳಿಸುತ್ತಿದ್ದ. ಪಿಯುಸಿ ಹಂತದಲ್ಲಿ ಸಂಪೂರ್ಣ ಓದಿನ ಕಡೆ ಗಮನಹರಿಸಿದ್ದರಿಂದ ಜೆಇಇ ಪರೀಕ್ಷೆಯಲ್ಲಿ ರಾಷ್ಟ್ರದ ಗಮನ ಸೆಳೆಯುವ ಸಾಧನೆ ಮಾಡಿದ್ದಾನೆ ಎಂದರು.


ಈ ಸಂದರ್ಭದಲ್ಲಿ ನಾಗದೇವ್ ತಂದೆ ಎಂ.ಡಿ. ಗುರುಸ್ವಾಮಿ, ಬಸವ ಕೇಂದ್ರದ ಅಧ್ಯಕ್ಷ ಎನ್‍ರಿಚ್ ಮಹದೇವಸ್ವಾಮಿ, ದಾನಿಗಳಾದ ದುಗ್ಗಹಟ್ಟಿ ರಾಜೇಶ್, ಜಿಲ್ಲಾಭಿವೃದ್ದಿ ಹೋರಾಟ ಸಮಿತಿ ಅಧ್ಯಕ್ಷ ಕೆ.ವೀರಭದ್ರಸ್ವಾಮಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ದೇವರಾಜು ಕಪ್ಪಸೋಗೆ, ಪತ್ರಕರ್ತ ಗೂಳೀಪುರ ನಂದೀಶ್, ಸೋಮವಾರಪೇಟೆ ಗೌ.ಸೋಮಣ್ಣ, ಲಕ್ಷ್ಮಿಪುರ ಮುಖ್ಯ ಶಿಕ್ಷಕ ಮೂಕಳ್ಳಿ ಬಸವಣ್ಣ, ವಿಸಿ ಹೊಸೂರು ನಟೇಶ್, ಬೆಂಡರವಾಡಿ ಮಹೇಶ್ ಪಟೇಲ್, ಗೂಳೀಪುರ ಬಾಬು, ಸೇರಿದಂತೆ ಇತರರು ಹಾಜರಿದ್ದರು.