
ಚಾಮರಾಜನಗರ,ಜೂ.೨೭-ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯ ವ್ಯಾಪ್ತಿಯ ಚಿರಕನಹಳ್ಳಿ ಗ್ರಾಮದ ಹೊರ ವಲಯದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಸುಮಾರು ೯ ವರ್ಷದ ಹೆಣ್ಣು ಹುಲಿ ಬಿದ್ದಿದ್ದು,ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿರಕನಹಳ್ಳಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿ ಓಡಾಟ ಕಂಡುಬಂದ ಹಿನ್ನೆಲೆಯಲ್ಲಿ ರೈತರು ಹಾಗೂ ಸ್ಥಳೀಯರ ಒತ್ತಾಯದ ಮೇರೆಗೆ ಪೋತರಾಜು ಎಂಬುವವರ ಜಮೀನಿನಲ್ಲಿ ಅರಣ್ಯ ಇಲಾಖೆ ಬೋನ್ ಇರಿಸಿತ್ತು. ಆ ಬೋನಿಗೆ ಹೆಣ್ಣು ಹುಲಿ ಬಿದ್ದಿದೆ.
ಕೆಲ ದಿನಗಳ ಹಿಂದೆ ಹುಲಿ ಹಸು ಭೇಟೆಯಾಡಿ ಕೊಂದು ಹಾಕಿತ್ತು. ಇದೀಗ ಹುಲಿ ಬೋನಿಗೆ ಬಿದ್ದಿರುವುದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಮಾಹಿತಿ ಅರಿತ ಕುಂದಕೆರೆ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಲಿಯ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಅರಣ್ಯ ಇಲಾಖೆಯ ನಿಯಮಾನುಸಾರ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜೂನ್ ಮೊದಲ ವಾರದಲ್ಲಿ ಎರಡು ಊರಲ್ಲಿ ಎರಡು ಚಿರತೆಯನ್ನು ಸೆರೆ ಹಿಡಿದಿರುವ ಘಟನೆ ಹನೂರು ತಾಲೂಕು ಹಾಗೂ ಚಾಮರಾಜನಗರ ತಾಲೂಕಿನಲ್ಲಿ ವರದಿಯಾಗಿತ್ತು. ಚಿರತೆ ಸೆರೆಯಿಂದ ಗ್ರಾಮಸ್ಥರು ನಿರಾಳರಾಗಿದ್ದರು.
ಹೊನ್ನಹಳ್ಳಿ ಬಳಿ ಸೆರೆ:
ಜಾನುವಾರುಗಳ ಮೇಲೆ ದಾಳಿ ಮಾಡಿ ರೈತರಿಗೆ ಆತಂಕ ಹುಟ್ಟಿಸಿದ್ದ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸಿಕ್ಕಿ ಬಿದ್ದಿತ್ತು. ಸೆರೆಸಿಕ್ಕ ಚಿರತೆಯು ೫ ವರ್ಷ ಪ್ರಾಯದ ಗಂಡು ಚಿರತೆಯಾಗಿದ್ದು, ಕಳೆದ ಹಲವು ದಿನಗಳಿಂದ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿತ್ತು. ಈ ಹಿನ್ನೆಲೆ ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಚಾಮರಾಜನಗರ ಬಫರ್? ವಲಯ ಅರಣ್ಯ ಸಿಬ್ಬಂದಿ ಆಯಕಟ್ಟಿನ ಸ್ಥಳಗಳಲ್ಲಿ ಕೊಟ್ಟಿಗೆ ಮಾದರಿ ಬೋನಿಟ್ಟಿದ್ದರು. ಆಹಾರದಾಸೆಗೆ ಬಂದ ಚಿರತೆ ಬೋನಿಗೆ ಸೆರೆಯಾಗಿದೆ. ಸೆರೆಸಿಕ್ಕ ಚಿರತೆ ಆರೋಗ್ಯ ಸ್ಥಿರವಾಗಿದ್ದು ದಟ್ಟಾರಣ್ಯಕ್ಕೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದರು.























