
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.27: ತಾಲೂಕು ಒಕ್ಕಲಿಗರ ವೇದಿಕೆಯ ವತಿಯಿಂದ ಜುಲೈ 01 ರ ಬುಧವಾರ ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಸಮುದಾಯ ಭವನದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ 517 ನೇ ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು ತಾಲೂಕಿನ ಸಮಸ್ತ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಶಾಸಕ ಹೆಚ್.ಟಿ.ಮಂಜು ಮನವಿ ಮಾಡಿದ್ದಾರೆ.
ಪಟ್ಟಣದ ಬಸವೇಶ್ವರ ನಗರದಲ್ಲಿರುವ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಒಕ್ಕಲಿಗರ ವೇದಿಕೆಯ ಸದಸ್ಯರು ನೀಡಿದ ಆಹ್ವಾನ ಪತ್ರಿಕೆಯನ್ನು ಸ್ವೀಕರಿಸಿ ಮಾತನಾಡಿದ ಅವರು ತಾಲೂಕು ಒಕ್ಕಲಿಗರ ವೇದಿಕೆಯಿಂದ ಇದೇ ಪ್ರಥಮವಾಗಿ ಕೆಂಪೇಗೌಡರ ಜಯಂತಿಯನ್ನು ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಆಚರಿಸಲಾಗುತ್ತಿದೆ. ಇದು ಸಂತಸದ ವಿಚಾರ. ನಾಡಪ್ರಭು ಕೆಂಪೇಗೌಡರು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದರೂ ತಮ್ಮ ಆಡಳಿತದ ಅವಧಿಯಲ್ಲಿ ಸರ್ವ ಸಮೂಹಗಳ ಅಭಿವೃದ್ದಿಗೆ ಶ್ರಮಿಸಿದವರು. ಸರ್ವ ಸಮಾಜಗಳ ಹಿತದಲ್ಲಿಯೇ ನಾಡಿನ ಹಿತ ಅಡಗಿದೆ ಎನ್ನುವುದನ್ನು ಅರಿತು ಕೆಂಪೇಗೌಡರು ಎಲ್ಲಾ ಸಮುದಾಯಗಳಿಗೂ ಅನುಕೂಲವಾಗುವಂತೆ ಹಲವು ಪೇಟೆಗಳನ್ನು ನಿರ್ಮಿಸಿ ನಾಡಿನ ಜನರ ಪ್ರೀತಿ ಗೌರವಕ್ಕೆ ಭಾಜನರಾಗಿದ್ದಾರೆ.
ಒಕ್ಕಲಿಗರ ವೇದಿಕೆಯ ವತಿಯಿಂದ ಆಚರಿಸುತ್ತಿರುವ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಶ್ರೀಗಳು, ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಡಾ.ನಿಶ್ಚಲಾನಂದನಾಥ ಶ್ರೀಗಳು, ಡಾ.ನಂಜಾವಧೂತ ಶ್ರೀಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಕ್ಷೇತ್ರದ ಶಾಸಕನಾದ ನಾನು ಅಧ್ಯಕ್ಷತೆ ವಹಿಸಲಿದ್ದು ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಮಲ್ಲೇಶ್ವರಂ ಕ್ಷೇತ್ರದ ಶಾಸಕರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹಾಗೂ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಆಗಮಿಸುತ್ತಿದ್ದಾರೆ. ಮಾಜಿ ಸಚಿವರುಗಳಾದ ಎನ್.ಚಲುವರಾಯಸ್ವಾಮಿ, ಸಿ.ಎಸ್.ಪುಟ್ಟರಾಜು, ಕೆ.ಸಿ.ನಾರಾಯಣಗೌಡ ಹಾಗೂ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಒಗ್ಗೂಡಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಮಾಜ ಸೇವಕರುಗಳಾದ ಬೂಕನಕೆರೆ ವಿಜಯ ರಾಮೇಗೌಡರು, ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಬೆಂಗಳೂರಿನ ಅರಿಶಿನಕುಂಟೆ ರಾಮಕೃಷ್ಣೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರುಗಳಾದ ನೆಲ್ಲಿಗೆರೆ ಬಾಲು, ಅಶೋಕ್ ಜಯರಾಂ ಮತ್ತು ಚಂದ್ರಶೇಖರ್ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಕಾರ್ಯಕ್ರಮದ ಮಿನುಗು ತಾರೆಗಳಾಗಿ ಚಲನಚಿತ್ರ ನಿರ್ದೇಶಕ ಜೋಗಿ ಪ್ರೇಮ್, ಕೆ.ಆರ್.ಪೇಟೆ ಶಿವರಾಜ್ ಮತ್ತು ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಕಾವ್ಯಶೈವ ಆಗಮಿಸುತ್ತಿದ್ದಾರೆ. ಇವರೊಂದಿಗೆ ಕ್ಷೇತ್ರದ ಎಲ್ಲಾ ಮಾಜಿ ಶಾಸಕರುಗಳು ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಹಾಗೂ ಮುಖಂಡರು ಆಗಮಿಸುತ್ತಿದ್ದಾರೆ. ವಿವಿಧ ಜಾನಪದ ತಂಡಗಳ ಕಲಾ ಪ್ರದರ್ಶನದೊಂದಿಗೆ ಪಟ್ಟಣದ ಪ್ರವಾಸಿ ಮಂದರ ವೃತ್ತದಿಂದ ಕೆಂಪೇಗೌಡರ ಬಾವಚಿತ್ರದ ಬೃಹತ್ ಮೆರವಣಿಗೆ ನಡೆಯಲಿದೆ. ಬುಧವಾರ ಬೆಳಿಗ್ಗೆ 09 ಘಂಟೆಗೆ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಶಾಸಕ ಹೆಚ್.ಟಿ.ಮಂಜು ಮನವಿ ಮಾಡಿದರು.
ತಾಲೂಕು ಒಕ್ಕಲಿಗರ ವೇದಿಕೆಯ ಅಧ್ಯಕ್ಷ ಮೆಣಸ ಕುಮಾರಗೌಡ, ಕಾರ್ಯದರ್ಶಿ ಗೌರೀಶ್, ವಡಕಹಳ್ಳಿ ಮಂಜೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್ ಸೇರಿದಂತೆ ಹಲವರಿದ್ದರು.























