Home ಜಿಲ್ಲೆ ಮಂಗಳೂರು : ಕೌಟುಂಬಿಕ ಕಲಹ ಹಿನ್ನೆಲೆ – ಇಬ್ಬರು ಮಕ್ಕಳನ್ನು ಬಾವಿಗೆ ಎಸೆದ ಮಹಿಳೆ, ಒಂದು ಮಗು...

: ಕೌಟುಂಬಿಕ ಕಲಹ ಹಿನ್ನೆಲೆ – ಇಬ್ಬರು ಮಕ್ಕಳನ್ನು ಬಾವಿಗೆ ಎಸೆದ ಮಹಿಳೆ, ಒಂದು ಮಗು ಸಾವು

ಪುತ್ತೂರು-ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಇಬ್ಬರು ಪುಟ್ಟ ಮಕ್ಕಳನ್ನು ಬಾವಿಗೆ ಎಸೆದಿರುವ ಆರೋಪದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ನೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ಮೂರು ವರ್ಷದ ಮಗು ಮೃತಪಟ್ಟಿದ್ದು, ಮತ್ತೊಂದು ಮಗು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸ್ ಹಾಗೂ ಸ್ಥಳೀಯ ಮೂಲಗಳ ಪ್ರಕಾರ, ಸಿನಾನ್ (೩೨) ಮತ್ತು ಅವರ ಪತ್ನಿ ನೂರುನ್ನೀಸಾ (೨೮) ನಡುವೆ ಮೊಬೈಲ್ ಫೋನ್ ಕರೆ ವಿಚಾರವಾಗಿ ದಾಂಪತ್ಯ ಕಲಹ ಉಂಟಾಗಿತ್ತು ಎನ್ನಲಾಗಿದೆ. ಈ ವೇಳೆ ಕೋಪಗೊಂಡ ನೂರುನ್ನೀಸಾ, ತನ್ನ ಸುಮಾರು ಮೂರುವರೆ ವರ್ಷದ ಮಗುವಿನ ಜೊತೆಗೆ ತನ್ನ ಅತ್ತಿಗೆಯ ಸುಮಾರು ಮೂರು ವರ್ಷದ ಮಗುವನ್ನೂ ಹಿಡಿದುಕೊಂಡು, ಸಮೀಪದ ಆಳವಾದ ಬಾವಿಗೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಗಮನಕ್ಕೆ ಬರುತ್ತಿದ್ದಂತೆ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ, ಬಾವಿಯಿಂದ ಮಕ್ಕಳನ್ನು ಹೊರತೆಗೆದು ರಕ್ಷಿಸುವ ಕಾರ್ಯಾಚರಣೆ ನಡೆಸಿದರು. ಆದರೆ ಅತ್ತಿಗೆಯ ಮಗು ಮೃತಪಟ್ಟಿರುವುದು ದೃಢಪಟ್ಟಿದೆ. ನೂರುನ್ನೀಸಾ ಅವರ ಸ್ವಂತ ಮಗು ಬಾವಿಯಿಂದ ಹೊರತೆಗೆದ ಬಳಿಕ ಜೀವಂತವಾಗಿದ್ದರೂ ಗಂಭೀರ ಸ್ಥಿತಿಯಲ್ಲಿತ್ತು. ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪರಾಧ ಸಂಖ್ಯೆ ೧೨೧/೨೦೨೬ರ ಅಡಿಯಲ್ಲಿ ತನಿಖೆ ಮುಂದುವರಿಸಿದ್ದಾರೆ. ಆರೋಪಿ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ನಿಖರ ಕಾರಣ, ಕುಟುಂಬ ಕಲಹದ ಹಿನ್ನೆಲೆ ಹಾಗೂ ಮಕ್ಕಳನ್ನು ಬಾವಿಗೆ ಎಸೆದಿರುವ ಆರೋಪಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಪೊಲೀಸರು ತನಿಖೆ ಮೂಲಕ ಪರಿಶೀಲಿಸುತ್ತಿದ್ದಾರೆ.