
ನವೆಂಬರ್ 27ಕ್ಕೆ ಚಿತ್ರಮಂದಿರಗಳಲ್ಲಿ
ನಗುವಿನ ಮೂಲಕ ಪ್ರೇಕ್ಷಕರ ಮನ ಗೆಲ್ಲುವ ವಿಶ್ವಾಸದೊಂದಿಗೆ ನಟ ಕೋಮಲ್ ಕುಮಾರ್ ಅಭಿನಯದ ‘ರಿಲ್ಯಾಕ್ಸ್’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಸೋನಲ್ ಮೊಂತೆರೊ ನಾಯಕಿಯಾಗಿ ನಟಿಸಿದ್ದು, ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂಬಟಿ ಮಧುಮೋಹನ್ ಕೃಷ್ಣ ನಿರ್ಮಾಣದ ಈ ಚಿತ್ರಕ್ಕೆ ಶ್ರೀನಿವಾಸ್ ಮಂಡ್ಯ ನಿರ್ದೇಶನವಿದೆ. ಮುರಳಿಕೃಷ್ಣ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರವು ನವೆಂಬರ್ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಬಿಡುಗಡೆ ಪೂರ್ವಭಾವಿಯಾಗಿ ನಡೆದ ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ಭಾ.ಮ. ಹರೀಶ್ ಮತ್ತು ಚಿಂಗಾರಿ ಮಹದೇವ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಚಿತ್ರದ ನಿರ್ಮಾಣದ ಅನುಭವ ಹಂಚಿಕೊಂಡ ನಿರ್ಮಾಪಕ ಅಂಬಟಿ ಮಧುಮೋಹನ್ ಕೃಷ್ಣ, ಚಿತ್ರೀಕರಣದ ಶೇಕಡಾ 25ರಷ್ಟು ಭಾಗ ಪೂರ್ಣಗೊಂಡ ಬಳಿಕ ಸಿನಿಮಾ ವೀಕ್ಷಿಸಿ ಕೋಮಲ್ ಅವರ ಪಾತ್ರ ಇಷ್ಟವಾದ ಕಾರಣ ಚಿತ್ರವನ್ನು ತಮ್ಮ ಕೈಗೆತ್ತಿಕೊಂಡಿದ್ದಾಗಿ ತಿಳಿಸಿದರು. ಬಡ ಕುಟುಂಬದ ನಾಯಕ ಮತ್ತು ಶ್ರೀಮಂತ ಕುಟುಂಬದ ನಾಯಕಿಯ ನಡುವಿನ ಕಥೆಯಲ್ಲಿ ಅಪ್ಪ-ಮಗನ ಬಾಂಧವ್ಯದ ಸನ್ನಿವೇಶಗಳು ವಿಶೇಷವಾಗಿ ಮೂಡಿಬಂದಿವೆ. ಉತ್ತಮ ಚಿತ್ರ ನಿರ್ಮಿಸಿದ ತೃಪ್ತಿ ಇದೆ ಎಂದು ಹೇಳಿದರು.
ನಿರ್ದೇಶಕ ಶ್ರೀನಿವಾಸ್ ಮಂಡ್ಯ, ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡುವ ಉದ್ದೇಶದಿಂದ ಚಿತ್ರ ರೂಪಿಸಲಾಗಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ತಮ್ಮದೇ ಶೈಲಿಯ ಹಾಸ್ಯದ ಮೂಲಕ ಮಾತನಾಡಿದ ಕೋಮಲ್, ಈ ಚಿತ್ರ ತಮ್ಮ ವೃತ್ತಿಜೀವನಕ್ಕೆ ಉತ್ತಮ ಮೈಲೇಜ್ ನೀಡುವ ವಿಶ್ವಾಸ ವ್ಯಕ್ತಪಡಿಸಿದರು. ಈ ಹಿಂದೆ ದಿನೇಶ್ ಬಾಬು ಅವರೊಂದಿಗೆ ಕೇವಲ ಎಂಟೂವರೆ ದಿನಗಳಲ್ಲಿ 38 ಲಕ್ಷ ರೂಪಾಯಿ ವೆಚ್ಚದಲ್ಲಿ ‘ಮಿಸ್ಟರ್ ಗರಗಸ’ ಚಿತ್ರ ನಿರ್ಮಿಸಿ ಯಶಸ್ಸು ಕಂಡಿದ್ದನ್ನು ಸ್ಮರಿಸಿದರು. ‘ರಿಲ್ಯಾಕ್ಸ್’ ಚಿತ್ರವನ್ನು ಒಬ್ಬರೇ ಕುಳಿತು ನೋಡಿದರೆ ನಗು ಬರುತ್ತದೆ, ಸ್ನೇಹಿತರೊಂದಿಗೆ ನೋಡಿದರೆ ಬಿದ್ದು ಬಿದ್ದು ನಗುತ್ತೀರಿ ಎಂಬ ತಮ್ಮ ಎಂದಿನ ಹಾಸ್ಯಭರಿತ ಮಾತುಗಳೊಂದಿಗೆ ಪ್ರೇಕ್ಷಕರನ್ನು ಚಿತ್ರ ವೀಕ್ಷಿಸಲು ಆಹ್ವಾನಿಸಿದರು. ನಾಯಕಿ ಸೋನಲ್ ಮೊಂತೆರೊ ಕೂಡ ಚಿತ್ರಕ್ಕೆ ಪ್ರೇಕ್ಷಕರು ಮತ್ತು ಚಿತ್ರರಂಗದವರ ಬೆಂಬಲ ಕೋರಿದರು.
ರಾಕೇಶ್ ಸಿ. ತಿಲಕ್ ಛಾಯಾಗ್ರಹಣ, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ ಹಾಗೂ ಅರವಿಂದ್ ರಾಜ್ ಸಂಕಲನ ಚಿತ್ರಕ್ಕಿದೆ. ನಂದು ಹಿನ್ನೆಲೆ ಸಂಗೀತ ನೀಡಿದ್ದು, ಯೋಗಾನಂದ್ ಸಾಹಸ ನಿರ್ದೇಶನ ಮಾಡಿದ್ದಾರೆ. ಕಲೈ ಮತ್ತು ಮುರಳಿ ನೃತ್ಯ ನಿರ್ದೇಶನದ ಜವಾಬ್ದಾರಿ ನಿರ್ವಹಿಸಿದ್ದಾರೆ.



















