
ಸಂಜೆವಾಣಿ ವಾರ್ತೆ
ಕುರುಗೋಡು, ಮೇ.27: ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ಪ್ರಸ್ತುತ ಒಂದೇ ವಾಹನ ಲಭ್ಯವಿದ್ದು, ಏಕಕಾಲಕ್ಕೆ ಹಲವು ಕಡೆ ಅಗ್ನಿ ಅವಘಡ ಸಂಭವಿಸಿದರೆ ಸಿಬ್ಬಂದಿ ಪರದಾಡುವಂತಾಗಿದೆ.
ಈ ಹಿಂದೆ ಇಲ್ಲಿ ಎರಡು ವಾಹನಗಳಿದ್ದವು. ಆದರೆ, ಒಂದು ವಾಹನವು 15 ವರ್ಷಗಳ ಸೇವೆ ಪೂರೈಸಿದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆಯೇ ಅದನ್ನು ಸ್ಥಗಿತಗೊಳಿಸಲಾಗಿದೆ. ಕುರುಗೋಡು ತಾಲ್ಲೂಕಿನ 33 ಹಳ್ಳಿಗಳು, 25 ಕ್ಯಾಂಪ್ಗಳು ಸೇರಿದಂತೆ ನೆರೆಯ ಸಿರಿಗೇರಿ, ಕಂಪ್ಲಿ, ಎಮ್ಮಿಗನೂರು ಹಾಗೂ ಬಳ್ಳಾಪುರ ಭಾಗದ ಹಳ್ಳಿಗಳು ಅಗ್ನಿ ಅವಘಡಗಳ ಸಮಯದಲ್ಲಿ ಇದೇ ಠಾಣೆಯನ್ನು ಅವಲಂಬಿಸಿವೆ.
ಅನಾಹುತಕ್ಕೆ ಆಹ್ವಾನ: ಬೇಸಿಗೆಯ ತೀವ್ರತೆಯಿಂದಾಗಿ ಈ ಭಾಗದಲ್ಲಿ ಗುಡಿಸಲು, ಹುಲ್ಲಿನ ಬಣವೆ ಹಾಗೂ ಅಪಘಾತದ ಘಟನೆಗಳು ಹೆಚ್ಚುತ್ತಿವೆ. ಒಂದೇ ದಿನ ಎರಡು ಕಡೆ ಬೆಂಕಿ ಕಾಣಿಸಿಕೊಂಡರೆ ಸಕಾಲಕ್ಕೆ ರಕ್ಷಣಾ ಕಾರ್ಯಾಚರಣೆ ನಡೆಸುವುದು ಕಷ್ಟಸಾಧ್ಯ. ಇಂತಹ ಸಂದರ್ಭದಲ್ಲಿ 30 ರಿಂದ 50 ಕಿ.ಮೀ. ದೂರದ ಬಳ್ಳಾರಿ ಅಥವಾ ಸಿರುಗುಪ್ಪದಿಂದ ವಾಹನಗಳು ಬರುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆಗೆ ಆಸ್ತಿಪಾಸ್ತಿಗಳು ಭಸ್ಮವಾಗುತ್ತಿವೆ.
ಹೆಚ್ಚಿದ ಅವಘಡಗಳು: ಇತ್ತೀಚೆಗೆ ಪಟ್ಟಣದ ಮನೆಯೊಂದರಲ್ಲಿ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಾಗ, ಅಗ್ನಿಶಾಮಕ ವಾಹನ ಅಲ್ಲಿಗೆ ತೆರಳಿತ್ತು. ಅದೇ ಸಮಯದಲ್ಲಿ ಸೋಮಲಾಪುರ ಗ್ರಾಮದಲ್ಲಿ ಬಣವೆಗೆ ಬೆಂಕಿ ಬಿದ್ದಿತ್ತು. ಒಂದೇ ವಾಹನವಿರುವುದರಿಂದ ಎರಡೂ ಕಡೆ ಸಕಾಲಕ್ಕೆ ಸ್ಪಂದಿಸಲು ಸಾಧ್ಯವಾಗಲಿಲ್ಲ. ವಾರ್ಷಿಕ ಸರಾಸರಿ 100ಕ್ಕೂ ಹೆಚ್ಚು ಅಗ್ನಿ ಅವಘಡಗಳು ನಡೆಯುತ್ತಿದ್ದರೂ ಇಲಾಖೆ ಮತ್ತೊಂದು ವಾಹನ ನೀಡದಿರುವುದಕ್ಕೆ ರೈತ ಮುಖಂಡ ಗುರಳ್ಳಿ ರಾಜ ಬೇಸರ ವ್ಯಕ್ತಪಡಿಸಿದ್ದಾರೆ.
ಸಿಬ್ಬಂದಿ ಕೊರತೆ: ಠಾಣೆಯಲ್ಲಿ 26 ಸಿಬ್ಬಂದಿ ಇರಬೇಕಾದ ಕಡೆ 21 ಜನರಿದ್ದಾರೆ, 5 ಹುದ್ದೆಗಳು ಖಾಲಿಯಿವೆ. ಅಲ್ಲದೆ, ಸಿಬ್ಬಂದಿಗೆ ವಸತಿ ಗೃಹ ನಿರ್ಮಿಸಲು ಈವರೆಗೂ ಸರ್ಕಾರಿ ಜಾಗ ಗುರುತಿಸದಿರುವುದು ಸಿಬ್ಬಂದಿಯ ಕೊರಗಿಗೆ ಕಾರಣವಾಗಿದೆ.
2005ರಲ್ಲಿ ಆರಂಭಗೊಂಡ ಅಗ್ನಿಶಾಮಕ ಠಾಣೆ: 2005ರಲ್ಲಿ ನಾರಾ ಸೂರ್ಯನಾರಾಯಣ ರೆಡ್ಡಿ ಅವರು ಕುರುಗೋಡು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಅವಧಿಯಲ್ಲಿ ಎಪಿಎಂಸಿ ಉಪ ಮಾರುಕಟ್ಟೆಯ ಒಂದು ಶೆಡ್ನಲ್ಲಿ ಅಗ್ನಿಶಾಮಕ ಠಾಣೆ ಆರಂಭಗೊಂಡಿತ್ತು.
2010ರಲ್ಲಿ ಜಿ.ಜನಾರ್ಧನರೆಡ್ಡಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಟಿ.ಎಚ್. ಸುರೇಶ್ ಬಾಬು ಅವರು ಶಾಸಕರಾಗಿದ್ದ ಅವಧಿಯಲ್ಲಿ ಬಳ್ಳಾರಿ ರಸ್ತೆಯಲ್ಲಿ ನಿರ್ಮಾಣವಾದ ನೂತನ ಸುಸಜ್ಜಿತ ಕಟ್ಟಡಕ್ಕೆ ಅಗ್ನಿಶಾಮಕ ಠಾಣೆಯಲ್ಲಿ ಸ್ಥಳಾಂತರಿಸಲಾಯಿತು. ಠಾಣೆಗೆ ಸುಸಜ್ಜಿತ ಕಟ್ಟಡವಿದೆ. ಆದರೆ ಠಾಣೆಯ ಆವರಣದಲ್ಲಿ ವಸತಿಗೃಹಗಳಿಲ್ಲದೇ ಇರುವುದು ಸಿಬ್ಬಂದಿಗೆ ಸಮಸ್ಯೆಯಾಗಿದೆ.























