
ಸಂಜೆವಾಣಿ ವಾರ್ತೆ
ಹೊಸಪೇಟೆ. ಅ.೨೯ ರಾಜ್ಯದಲ್ಲಿ ಚುನಾವಣಾ ಅಯೋಗದ ನೇತೃತ್ವದಲ್ಲಿ ನಡೆಯುತ್ತಿರುವ ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ವಿರೋಧಿಸಿ ಸೆ.೧ ರಂದು ಬೆಂಗಳೂರಿನ ಚುನಾವಣಾ ಆಯೋಗದ ಕಛೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ತಿಳಿಸಿದರು.
ಸ್ಥಳೀಯ ಪತ್ರಿಕಾ ಭವನದಲ್ಲಿಂದು ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಎಸ್.ಐ.ಅರ್ ಪ್ರಕ್ರಿಯೆಯೇ ಆ ವೈಜ್ಞಾನಿಕವಾಗಿದೆ. ಈ ಕುರಿತು ಹಲವಾರು ಬಾರಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದರೂ, ಆಯೋಗದಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿನ್ನಲೆಯಲ್ಲಿ ಸೆ.೧ ರಂದು ಕರ್ನಾಟಕ ನಾಗರಿಕ ಸಂಘಟನೆಗಳ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾಕ್೯ನಲ್ಲಿ ಪ್ರತಿಭಟನೆ ನಡೆಸಿ ನಂತರ ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ತರಾತುರಿ ಎಸ್.ಐ.ಆರ್ ಪ್ರಕ್ರಿಯೆ ಯಿಂದಾಗಿ ಈಗಾಗಲೇ ಎರಡು ಬಾರಿ ಮುಂದೂಡಿಕೆ ಆಗಿದೆ. ಬಿಎಲ್ಒ ಗಳಿಗೆ ಸರಿಯಾದ ತರಬೇತಿ ನೀಡದ ಹಿನ್ನಲೆಯಲ್ಲಿ ರಾಜ್ಯದಲ್ಲಿ ೪೩ ಲಕ್ಷಕ್ಕೂ ಅಧಿಕ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಪಾರದರ್ಶಕ ವಲ್ಲದ , ಜನಸ್ನೇಹಿ ಅಲ್ಲದ ಈ ಪ್ರಕ್ರಿಯೆ ವಿರೋಧಿಸಿ ನಡೆಯುವ ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದರು.
ಚುನಾವಣಾ ಆಯೋಗ ಮತದಾರರನ್ನು ಘನತೆಯಿಂದ ನಡೆಸಿಕೊಳ್ಳಬೇಕು. ಪ್ರಕ್ರಿಯೆಯನ್ನು ಪಾರದರ್ಶಕ ಮತ್ತು ಜನಸ್ನೇಹಿಯಾಗಿ ನಡೆಸಬೇಕು. ಯಾವೊಬ್ಬ ಮತದಾರರನ್ನು ಸಕಾರಣವಿಲ್ಲದೆ ಮತದಾರರ ಪಟ್ಟಿಯಿಂದ ಕೈಬಿಡಬಾರದು. ಡಿಲೀಟ್ ಮಾಡಲಾಗಿರುವ ಕನಿಷ್ಠ ೬೦ ಲಕ್ಷ ಮತದಾರರು ಸೇರ್ಪಡೆ ಗೊಳ್ಳಲು ಅವಕಾಶ ನೀಡಬೇಕು. ಗ್ರಾಮ ಸಭೆ ಹಾಗೂ ವಾರ್ಡು ಸಭೆಗಳನ್ನು ಕಡ್ಡಾಯವಾಗಿ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸಬೇಕು. ಆಕ್ಷೇಪಣೆ ಹಾಗೂ ಅಪೀಲು ಅವಧಿಯನ್ನು ಆರು ತಿಂಗಳ ಕಾಲ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಮುಖಂಡ ಎ.ಕರುಣಾನಿಧಿ ಮಾತನಾಡಿ, ಮತದಾರರ ಪಟ್ಟಿ ಕಾನೂನು ಮಾನ್ಯತೆ ಹೊಂದಿರುವ ಪಟ್ಟಿ ಆಗಿರುವುದರಿಂದ ಚುನಾವಣಾ ಅಯೋಗ ತಮಗೆ ಇಷ್ಟ ಬಂದ ಹಾಗೆ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಕಾನೂನುನಲ್ಲಿ ಅವಕಾಶವಿಲ್ಲ. ಆದರೆ ಚುನಾವಣಾ ಆಯೋಗ ನಡೆಸುತ್ತಿರುವುದು ಏಕಪಕ್ಷೀಯವಾಗಿ ನಿರ್ಧಾರವಾಗಿದೆ. ಇದನ್ನು ನಾಗರೀಕ ಸಂಘಟನೆ ಗಳ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದರು.
ಸಾಹಿತಿ ಪೀರ್ ಭಾಷ ಮಾತನಾಡಿ, ಚುನಾವಣಾ ಆಯೋಗ ಸ್ವತಂತ್ರ ವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅದು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಸೋಮಶೇಖರ್ ಬಣ್ಣದಮನೆ, ಸೈಯದ್ ನಾಜೀಮುದ್ದೀನ್, ಉಮಾಮಹೇಶ್ವರ್, ಮಹಮದ್ ಜಾಫರ್, ಕುಮಾರ ಸಮತಳ, ರವಿಕುಮಾರ್ ತಂಬ್ರಳ್ಳಿ ಇದ್ದರು.































