Home ಜಿಲ್ಲೆ ಇನ್ನರ್ ವೀಲ್ ಕ್ಲಬ್ ನಿಂದ ಸ್ವಚ್ಛತಾ ಅಭಿಯಾನ: ಪರಿಸರ ಸಂರಕ್ಷಣೆ ಜಾಥಾ

ಇನ್ನರ್ ವೀಲ್ ಕ್ಲಬ್ ನಿಂದ ಸ್ವಚ್ಛತಾ ಅಭಿಯಾನ: ಪರಿಸರ ಸಂರಕ್ಷಣೆ ಜಾಥಾ

ಸಂಜೆವಾಣಿ ವಾರ್ತೆ

ಹೊಸಪೇಟೆ: ನಗರದ ನೆಹರೂ ಕಾಲೋನಿಯಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಕಸ ನಿರ್ವಹಣೆ, ಸ್ವಚ್ಛತಾ ಜಾಗೃತಿ ಹಾಗೂ ಬೆಂಚ್ ಉದ್ಘಾಟನೆ ಕಾರ್ಯಕ್ರಮ ಶನಿವಾರ ಜರುಗಿತು.

ಪೌರಾಯುಕ್ತ ಎರಗುಡಿ ಶಿವಕುಮಾರ, 31ನೇ ವಾರ್ಡಿನ ನಗರಸಭಾ ಸದಸ್ಯ ತಾರಿಹಳ್ಳಿ ಜಂಬುನಾಥ ಮತ್ತು ಇನ್ನರ್ ವಿಲ್ ಅಧ್ಯಕ್ಷೆ ರಾಜೇಶ್ವರಿ ಅವರು ಗಿಡ ನೆಡುವ ಮೂಲಕ  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ಎರಗುಡಿ ಶಿವಕುಮಾರ್, ನಗರದ ಸ್ವಚ್ಛತೆ ಕಾಪಾಡಲು ನಾಗರಿಕರು ಸಹಕರಿಸಬೇಕು, ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ಕಸವನ್ನು ಹಸಿ ಕಸ, ಒಣ ಕಸ, ಸ್ಯಾನಿಟರಿ ವೇಸ್ಟ್ ಮತ್ತು ಸ್ಪೆಷಲ್ ವೇಸ್ಟ್ ಎಂಬ ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿ ನೀಡುವಂತೆ ನಾಗರಿಕರಿಗೆ ಸೂಚಿಸಿದರು.

31 ನೇ ವಾರ್ಡಿನ ನಗರಸಭಾ ಸದಸ್ಯ ತಾರಿಹಳ್ಳಿ ಜಂಬುನಾಥ ಮಾತನಾಡಿ, ಪೌರಾಯುಕ್ತ ಶಿವಕುಮಾರ್ ಅವರ ದೂರದೃಷ್ಟಿಯಿಂದ ನಗರದಲ್ಲಿ ಸ್ವಚ್ಛತಾ ಕಾರ್ಯಗಳು ವೇಗವಾಗಿ ನಡೆಯುತ್ತಿವೆ ಎಂದು ಶ್ಲಾಘಿಸಿದರು. ಅಲ್ಲದೆ, ದೀಪಾಯನ ಶಾಲಾ ಮೈದಾನ, ಅಗ್ನಿಶಾಮಕ ಕಚೇರಿ ಹಾಗೂ ವಿವೇಕಾನಂದ ನಗರದಲ್ಲಿ ಬೆಂಚ್ಗಳ ಅಳವಡಿಕೆ ಸೇರಿದಂತೆ ಇನ್ನರ್ ವೀಲ್ ಕ್ಲಬ್ನ ಸಾಮಾಜಿಕ ಕಾರ್ಯಗಳನ್ನು ಅವರು ಶ್ಲಾಘಿಸಿದರು.

ಅಲ್ಲದೆ ವಾರ್ಡ್ ಮಟ್ಟದಲ್ಲಿ ಮಹಿಳಾ ಸ್ವಚ್ಛತಾ ಸಿಬ್ಬಂದಿಯನ್ನು ನೇಮಕ ಮಾಡಿರುವುದು ಈ ಭಾಗದ ವಿಶೇಷತೆಯಾಗಿದ್ದು, ಅವರು ಪ್ರತಿ ಮನೆಗೆ ಭೇಟಿ ನೀಡಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಂಸಾಂಬ ಶಾರದಾಶ್ರಮದ ಮಾತಾ ಪ್ರಬೋಧಮಯಿ, ಇನ್ನರ್ ವಿಲ್ ಕ್ಲಬ್ ಅಧ್ಯಕ್ಷೆ ರಾಜೇಶ್ವರಿ, ಪತ್ರಕರ್ತೆ ರೇಖಾ ಪ್ರಕಾಶ್ ಮಾತನಾಡಿದರು.

ಸ್ವಚ್ಚತಾ ಅಭಿಯಾನದಲ್ಲಿ ನಿಕಟಪೂರ್ವ ಅಧ್ಯಕ್ಷೆ ನೈಮಿಷಾ, ಜಂಟಿ ಕಾರ್ಯದರ್ಶಿ ಸಹನಾ, ಸಂಜನಾ ಪಾಠಕ್, ನಾಗರತ್ನ, ಶರ್ವಾಣಿ, ವಿಜಯ ಕಟ್ಟಾ, ಪ್ರಶಾಂತ್ ಕಟ್ಟಾ, ಚನ್ನಬಸವ ಕೋರಿಶೆಟ್ಟಿ, ವೀಣಾ ವಸ್ತ್ರದ್, ವಿಜಯಲಕ್ಷ್ಮೀ ವಸ್ತ್ರದ್, ಸುಮ ಕೋರಿಶೆಟ್ಟಿ, ಎಂ.ಎಂ.ಶಾರದಾ, ಎಂ.ಎಂ. ಶಾಂತ, ಸುಮಂಗಳ ಹಾಗೂ ನಗರಸಭೆ ಸ್ವಯಂ ಸೇವಕಿಯರಾದ ಅಂಜಲಿ, ರೇಣುಕಾ, ಸೇರಿದಂತೆ ಲಯನ್ಸ್ ಶಾಲೆಯ ಮಕ್ಕಳು ಭಾಗವಹಿಸಿದ್ದರು.