
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.30: ರೈತರಿಗೆ ಅಗತ್ಯ ಮಾಹಿತಿ ನೀಡುವ ಮೂಲಕ ರೈತರ ಸಮಗ್ರ ಅಭಿವೃದ್ಧಿಗಾಗಿ ಇರುವ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಪಶುಸಂಗೋಪನಾ ಇಲಾಖೆಗಳು ಕೆಲಸ ಮಾಡಬೇಕು ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಕೃಷಿ ಇಲಾಖೆಯ ಆವರಣದಲ್ಲಿ ರೈತರಿಗಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ನೂತನವಾಗಿ ಸಂಶೋಧಿಸಲಾದ ಕೆ.ಎಂ.ಆರ್-316 ರಾಗಿ ಬಿತ್ತನೆ ಬೀಜಗಳನ್ನು ರೈತರಿಗೆ ಉಚಿತವಾಗಿ ವಿತರಣೆ ಮಾಡಿ, ಸಮಗ್ರ ಕೃಷಿಯಲ್ಲಿ ಸಾಧನೆ ಮಾಡಿದ ರೈತರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದರು.
ಕೃಷಿ ಅಧಿಕಾರಿಗಳು, ರೇಷ್ಮೆ ಅಧಿಕಾರಿಗಳು, ತೋಟಗಾರಿಕಾ ಅಧಿಕಾರಿಗಳು, ಮೀನುಗಾರಿಕಾ ಅಧಿಕಾರಿಗಳು, ಪಶುಸಂಗೋಪನಾ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಣೆ ಮಾಡಿದರೆ ರೈತರು ಅಭಿವೃದ್ದಿಯ ದಿಕ್ಕಿನತ್ತ ಸಾಗುವುದು ಸುಲಭವಾಗುತ್ತದೆ. ಜೊತೆಗೆ ರೈತರೂ ಸಹ ಬೇಸಾಯದ ಬಗ್ಗೆ ಕೀಳಿರಿಮೆ ದೂರಮಾಡಿದ ಭೂತಾಯಿಯನ್ನು ನಂಬಿ ಆಸಕ್ತಿಯಿಂದ ಬೇಸಾಯ ಮಾಡಿದರೆ ಭೂತಾಯಿ ರೈತರನ್ನು ಎಂದಿಗೂ ಕೈಬಿಡುವುದಿಲ್ಲ. ಕೋಲಾರ ಭಾಗದ ರೈತರು ಕಡಿಮೆ ನೀರಿನಲ್ಲಿ, ಕಡಿಮೆ ಭೂಮಿಯಲ್ಲಿ, ಗ್ರಾಮ ಪಂಚಾಯಿತಿ ಮೂಲಕ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಅತ್ಯುತ್ತಮ ಬೇಸಾಯ ಮಾಡಿ ತರಕಾರಿ, ಸೊಪ್ಪು, ಹೂವುಗಳನ್ನು ಬೆಳೆದು ವಾರ್ಷಿಕ ಲಕ್ಷಾಂತರ ರೂ ಲಾಭ ಗಳಿಸುತ್ತಿದ್ದಾರೆ. ಕೋಲಾರ ಭಾಗದ ರೈತರು ಇಡೀ ರಾಜ್ಯದಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸುತ್ತಿದ್ದಾರೆ. ಇದಕ್ಕಾಗಿ ಅವರು ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಪಶುಸಂಗೋಪನಾ ಇಲಾಖೆಗಳ ಸಲಹೆ ಸಹಕಾರ ಪಡೆದು ಈ ಸಾಧನೆ ಮಾಡುತ್ತಿದ್ದಾರೆ ಇದೇ ರೀತಿ ನಮ್ಮ ಮಂಡ್ಯ ಜಿಲ್ಲೆಯ ರೈತರು ಹೆಚ್ಚು ನೀರು ಬಳಕೆ ಮಾಡುವ ಭತ್ತ, ಕಬ್ಬು ಬೇಸಾಯ ಮಾಡುವ ಜೊತೆ ಜೊತೆಗೆ ಕುರಿ, ಮೇಕೆ ಸಾಕಾಣಿಕೆ, ಹೈನುಗಾರಿಕೆ, ಬಾಳೆ, ರೇಷ್ಮೆ, ಮೀನು ಸಾಕಾಣಿಕೆ ಸೇರಿದಂತೆ ಸಮಗ್ರ ಕೃಷಿಯನ್ನು ಕೈಗೊಳ್ಳಬೇಕು. ರಾಸಾಯನಿಕ ಗೊಬ್ಬರ ಪದ್ದತಿಯಿಂದ ಭೂಮಿಯು ಬಂಜರಾಗುತ್ತಿದೆ. ಹಾಗಾಗಿ ಭೂಮಿ ತಾಯಿಯ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ರಾಸಾಯನಿಕ ಗೊಬ್ಬರ ಹಾಗೂ ರಾಸಾಯನಿಕ ಕ್ರಿಮಿನಾಶಕವನ್ನು ಕಡಿಮೆ ಮಾಡಿ ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಶಾಸಕರು ಸಲಹೆ ನೀಡಿದರು.
ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾಟನಹಳ್ಳಿ ಎನ್.ಎಸ್.ಗಂಗಾಧರ್, ಕೃಷಿ ವಿಜ್ಞಾನಿಗಳಾದ ಕೇಶವಯ್ಯ, ವೆಂಕಟೇಶ್, ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೀಪಕ್, ತಾಂತ್ರಿಕ ಕೃಷಿ ಅಧಿಕಾರಿ ಶ್ರೀಧರ್, ಕೃಷಿಕ ಸಮಾಜದ ನಿರ್ದೇಶಕರಾದ ಅಕ್ಕಿಹೆಬ್ಬಾಳು ಎ.ಆರ್.ರಘು, ಮರಿಸ್ವಾಮೀಗೌಡ,ಎಸ್.ಆರ್.ನವೀನ್ ಕುಮಾರ್, ನಾರಾಯಣಗೌಡ, ಆರ್.ಕೆ.ಜಗದೀಶ್,ಭೈರಾಪುರ ಹರೀಶ್, ನೀತಿಮಂಗಲ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಹರೀಶ್, ದಕ್ಷ ಸಂಸ್ಥೆಯ ಮನೋಜ್, ಪ್ರಗತಿಪರ ರೈತರಾದ ಅಗ್ರಹಾರಬಾಚಹಳ್ಳಿ ಜಬೀಉಲ್ಲಾ, ಹೆಚ್.ಎನ್.ಸತ್ಯನಾರಾಯಣ್, ರಂಗನಾಥ್, ಬಿ.ರಾಮಲಿಂಗಯ್ಯ, ಹರಿರಾಯನಹಳ್ಳಿ ಎಸ್.ಧರ್ಮೇಗೌಡ, ಗಣೇಶ್, ನವೀನ್, ರವಿ, ಚಂದ್ರೇಗೌಡ, ರಂಗಸ್ವಾಮಿ ಸೇರಿದಂತೆ ನೂರಾರು ರೈತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


































