ಕೋಲಾರ,ಜು,೪- ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರವಲ್ಲದೆ ಇಡೀ ಕುಟುಂಬ ಮತ್ತು ಸಮಾಜವನ್ನು ನಾಶಮಾಡುವ ಮಾದಕ ವಸ್ತುಗಳಿಂದ ಮುಕ್ತವಾದ ನವ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳಿಂದಲೇ ಜಾಗೃತಿ ಆರಂಭವಾಗಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸುಕ್ರಿವಾಲ್ ಕರೆ ನೀಡಿದರು.
ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆಯ ಅಂಗವಾಗಿ ಕೋಲಾರ ಜಿಲ್ಲೆಯ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸುವರ್ಣಗಂಗೆ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಯುವಜನತೆ ಇಂತಹ ಕೆಟ್ಟ ಚಟಗಳಿಂದ ದೂರವಿದ್ದು, ತಮ್ಮ ಉನ್ನತ ಗುರಿಗಳತ್ತ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದ ಅವರು, ನಿಮ್ಮ ಪೋಷಕರ ಆಶಯಗಳನ್ನು ಈಡೇರಿಸುವ ಮತ್ತು ನೀವು ಸಮಾಜ ಮತ್ತು ದೇಶದ ಆಸ್ತಿಯಾಗುವತ್ತ ನನಿಮ್ಮ ಚಿಂತನೆ ಇರಬೇಕು ಎಂದರು.
ನೀವು ಕೇವಲ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲ, ಸಮಾಜದ ಜವಾಬ್ದಾರಿಯುತ ಪ್ರಜೆಗಳು. ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ನಿಮಗೆ ದೊಡ್ಡ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳಿರಬೇಕು. ಆದರೆ ಅದಕ್ಕೆ ಮೊದಲ ಹೆಜ್ಜೆ ನಿಮ್ಮ ಆರೋಗ್ಯ ಮತ್ತು ಸಕಾರಾತ್ಮಕ ಆಲೋಚನೆಗಳಾಗಿವೆ ಎಂದರು. ಮಾದಕ ವಸ್ತುಗಳು ಕೇವಲ ದೈಹಿಕ ಆರೋಗ್ಯವನ್ನಷ್ಟೇ ಅಲ್ಲದೆ ಇಡೀ ನರಮಂಡಲ ಮತ್ತು ಆಲೋಚನಾ ಶಕ್ತಿಯನ್ನೇ ಕುಂಠಿತಗೊಳಿಸುತ್ತವೆ ಎಂದು ಅವರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ನಮ್ಮ ಗೆಳೆಯರ ಬಳಗವೇ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಆದ್ದರಿಂದ ನಿಮ್ಮ ಸ್ನೇಹಿತರನ್ನು ಜಾಣ್ಮೆಯಿಂದ ಆಯ್ಕೆ ಮಾಡಿಕೊಳ್ಳಿ. ಯಾರಾದರೂ ತಪ್ಪು ದಾರಿಗೆ ತುಳಿಯುತ್ತಿದ್ದಾರೆ ಅಥವಾ ಒತ್ತಡ ಹೇರುತ್ತಿದ್ದಾರೆ ಅನಿಸಿದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ. ನಿಮ್ಮ ಸುತ್ತಮುತ್ತ ಯಾರಾದರೂ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಿದ್ದರೆ, ಅವರಿಗೆ ಸೂಕ್ತ ಸಹಾಯವನ್ನು ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು.
ಮಾದಕ ವಸ್ತುಗಳ ಜಾಲವನ್ನು ಮಟ್ಟಹಾಕಲು ವಿದ್ಯಾರ್ಥಿಗಳ ಸಹಕಾರ ಅತ್ಯಗತ್ಯ ಎಂದ ಎಸ್ಪಿ ಕನ್ನಿಕಾ ಸುಕ್ರಿವಾಲ್, ನಿಮ್ಮ ಸುತ್ತಮುತ್ತ ಯಾರಾದರೂ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಅಥವಾ ವ್ಯಸನಕ್ಕೆ ಒಳಗಾಗಿರುವುದು ಕಂಡುಬಂದರೆ, ರಾಷ್ಟ್ರೀಯ ನಾರ್ಕಟಿಕ್ಸ್ ಹೆಲ್ಪ್‌ಲೈನ್ ಸಂಖ್ಯೆ ೧೯೩೩ ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿ ನೀಡುವವರ ಹೆಸರನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ, ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
































