
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಸೆ,13- ಪ್ರಥಮ ಪೂಜಿತ ಗಣೇಶನ ಹಬ್ಬದ ಅಂಗವಾಗಿ ನಾಳೆಯಿಂದ ಆಚರಿಸಲು ನಗರದ ಐದು ನೂರಕ್ಕೂ ಹೆಚ್ಚು ಕಡೆ ಗಣೇಶನ ಪ್ರತಿಷ್ಟಾಪನೆಗೆ ಜನತೆ ಮುಂದಾಗಿದ್ದಾರೆ
ನಗರದ ಗಾಂಧಿನಗರ ಠಾಣೆಯ ಆವರಣದಲ್ಲಿ ಗಣೇಶನನ್ನು ಪ್ರತಿಷ್ಟಾಪಿಸಲು ಏಕ ಗವಾಕ್ಷಿಯಡಿ ಪಾಲಿಕೆ, ವಿದ್ಯುತ್ ಹಾಗು ಪೊಲೀಸ್ ಇಲಾಖೆಯಿಂದ ಅನುಮತಿ ನೀಡಲಾಗುತ್ತಿದೆ.
ಗಣೇಶನ ಪ್ರತಿಷ್ಟಾಪಿಸಿದ ಪ್ರಮುಖ ತಾಣಗಳಿಗೆ ಪೊಲೀಸ್, ಕೆಲವಡೆ ಹೋಮ್ ಗಾರ್ಡ್ ಗಳನ್ನು ನೇಮಕ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಸಾರ್ವಜನಿಕರ ರಸ್ತೆಯಲ್ಲಿ ಸಾರ್ವಜನಿಕ ಓಡಾಟಕ್ಕೆ ಸಮಸ್ಯೆ ಆಗದಂತೆ ಗಣೇಶನನ್ನು ಕೂಡಿಸಲು ಸೂಚಿಸಿದೆ. ಆದರೂ ಹಲವಡೆ ರಸ್ತೆಗಳಲ್ಲಿ ಕೂಡಿಸಲಾಗಿದೆ. ಕೆಲವಡೆ ನಾಳೆ ಒಂದೇ ದಿನ, ಇನ್ನು ಕೆಲವಡೆ ಮೂರು ದಿನ ಮತ್ತು ಐದು ದಿನಗಳಕಾಲ ಕೂಡಿಸಲಾಗುತ್ತಿದೆ.
ಪ್ಲಾಸ್ಟರ್ ಆಫ್ ಪ್ಯಾರೀಸ್ ನಿಂದ ಮತ್ತು ರಾಸಾಯನಿಕ ಯುಕ್ತ ಬಣ್ಣದ ಗಣೇಶ ಮೂರ್ತಿ ನಿಷೇಧ ಮಾಡಿದ್ದರೂ ಹಲವಡೆ ಅವುಗಳ ಮಾರಾಟ ನಡೆದಿದೆ.
ನಗರದ ಬೆಂಗಳೂರು ರಸ್ತೆ, ದುರ್ಗಮ್ಮ ಗುಡಿ, ಕುಮಾರಸ್ವಾಮಿಗುಡಿ, ಕುಂಬಾರ ಓಣಿ ಮೋತಿ ಸರ್ಕಲ್ ಸೇರಿದಂತೆ ಹಲವಡೆ ಗಣೇಶನ ಮೂರ್ತಿಗಳು, ಹೂ ಹಣ್ಣು ಬಾಳೆ ಗಿಡಗಳು. ಹಾಗು ಮಣ್ಣಿನ ಗಣೇಶನ ಮೂರ್ತಿಗಳ ಮಾರಾಟವೂ ನಡೆದಿದೆ.
ಹಲವು ಕಡೆ ಅನೇಕ ಸ್ವರೂಪದ, ಅಲಂಕಾರದ ಗಣೇಶನ ಬೃಹತ್ ಮೂರ್ತಿಗಳನ್ನು ಸ್ಥಾಪಿಸಲಾಗುತ್ತಿದೆ.
ಹಲವಡೆ ದಿನಾಲು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನವೂ ನಡೆಯುತ್ತಿದೆ.
ಇಂದು ಮಾರುಕಟ್ಟೆಯಲ್ಲಿ ಗಣೇಶನ ಮೂರ್ತಿಗಳನ್ನು ಯುವ ಸಮೂಹ ತೆಗೆದುಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿತ್ತು.
ಬರಗಾಲವಾದರೂ ನಮಗೆ ಅದರ ಪರಿಣಾಮ ಇಲ್ಲ ಎನ್ನುವಂತೆ ನಗರ ಪ್ರದೇಶದಲ್ಲಿ ಜನತೆ ಗಣೇಶನ ಹಬ್ಬದ ಆಚರಣೆ ನಡೆಸುತ್ತಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ಸ್ವತಂತ್ರ್ಯ ಹೋರಾಟಕ್ಕಾಗಿ ದೇಶದ ಜನತೆ ಒಂದಡೆ ಸೇರಿ ಬ್ರಿಟೀಷರ ವಿರುದ್ದ ಹೋರಾಟ ರೂಪಿಸುವ ನಿಟ್ಟಿನಲ್ಲಿ ಆರಂಭಗೊಂಡ ಸಾರ್ವಜನಿಕ ಣೇಶನ ಹಬ್ಬದ ಆಚರಣೆ. ಈಗ ದೇಶದ ಹಿಂದುತ್ವದ ಸಂಕೇತವಾಗಿ ರೂಪುಗೊಂಡಿದೆ.
ಗಣೇಶ ವಿಸರ್ಜನೆ ವೇಳೆ ನಡೆಯುವ ಕೋಮು ಗಲಬೆಗಳು ಪೊಲೀಸರಿಗೆ ಶಾಂತಿ ಕಾಪಾಡಲು ಸವಾಲಿನ ಕೆಲಸವಾಗಿದೆ.





























