
ತುಮಕೂರು, ಜೂ. ೨೩- ಯೋಗವು ದೇಹ, ಮನಸ್ಸು ಮತ್ತು ಆತ್ಮಕ್ಕೆ ಶಕ್ತಿ ನೀಡುವ ದಿವ್ಯ ಮಾರ್ಗ ಎಂದು ವಿದ್ಯಾನಿಧಿ ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಎನ್. ಬಿ.ಪ್ರದೀಪ್ ಕುಮಾರ್ ಹೇಳಿದರು.
ನಗರದ ಪ್ರತಿಷ್ಠಿತ ವೈಸಿರಿ ಕಾಲೇಜಿನ ಆವರಣದಲ್ಲಿ ವಿದ್ಯಾವಾಹಿನಿ ಅರೆ ವೈದ್ಯಕೀಯ ಕಾಲೇಜಿನ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯೋಗವು ಕೇವಲ ಒಂದು ವ್ಯಾಯಾಮವಲ್ಲ, ಅದು ಜೀವನದ ಸಂಪೂರ್ಣತೆಯನ್ನು ಸಾಧಿಸುವ ಸಾಧನವಾಗಿದೆ. ಪ್ರತಿದಿನ ಕನಿಷ್ಠ ೨೦ ರಿಂದ ೩೦ ನಿಮಿಷಗಳ ಕಾಲ ಯೋಗಾಭ್ಯಾಸ ಮಾಡುವುದರಿಂದ ದೇಹದ ಆರೋಗ್ಯ ವೃದ್ಧಿಯಾಗುವುದರ ಜತೆಗೆ ಮನಸ್ಸಿಗೆ ಶಾಂತಿ ಹಾಗೂ ಆತ್ಮವಿಶ್ವಾಸ ದೊರೆಯುತ್ತದೆ. ರಕ್ತ ಪರಿಚಲನೆ ಸುಧಾರಿಸಿ, ಒತ್ತಡವನ್ನು ಕಡಿಮೆ ಮಾಡುವ ಯೋಗವು ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಶಿಸ್ತು ಮತ್ತು ಸಕಾರಾತ್ಮಕ ಚಿಂತನೆಯನ್ನು ಬೆಳೆಸುತ್ತದೆ. ಭಾರತೀಯ ಸಂಸ್ಕೃತಿಯ ಅಮೂಲ್ಯ ಕೊಡುಗೆಯಾಗಿರುವ ಯೋಗವನ್ನು ಇಂದು ವಿಶ್ವವೇ ಅಳವಡಿಸಿಕೊಳ್ಳುತ್ತಿರುವುದು ಅದರ ಮಹತ್ವಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ಶಾಲಾ-ಕಾಲೇಜುಗಳಲ್ಲಿ ಯೋಗ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ವಿದ್ಯಾರ್ಥಿಗಳಲ್ಲಿ ಅದರ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ತಂತ್ರಜ್ಞಾನ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಯುವಜನತೆ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿರುವ ಸಂದರ್ಭದಲ್ಲಿ ಯೋಗವೇ ಆರೋಗ್ಯಕರ ಮತ್ತು ಸಮತೋಲಿತ ಜೀವನದ ದಾರಿ ತೋರಿಸುವ ದಿವ್ಯ ಮಂತ್ರವಾಗಿದೆ. ಯೋಗವು ದೇಹ, ಮನಸ್ಸು ಮತ್ತು ಆತ್ಮದ ನಡುವೆ ಸಮನ್ವಯ ಸಾಧಿಸಿ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ ಎಂದರು.
ಪತಂಜಲಿ ಯೋಗ ಶಿಬಿರದ ಮಹೇಶ್ ಹಾಗೂ ಅವರ ತಂಡದವರು ವಿವಿಧ ಯೋಗಾಸನಗಳು, ಪ್ರಾಣಾಯಾಮ, ಸೂರ್ಯ ನಮಸ್ಕಾರ ಮತ್ತು ಧ್ಯಾನದ ಮಹತ್ವವನ್ನು ಪ್ರಾಯೋಗಿಕವಾಗಿ ವಿವರಿಸಿ ಯೋಗಾಭ್ಯಾಸ ನಡೆಸಿಕೊಟ್ಟರು. ನೂರಾರು ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಯೋಗಾಭ್ಯಾಸದಲ್ಲಿ ಪಾಲ್ಗೊಂಡು ಆರೋಗ್ಯದತ್ತ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ವೈಸಿರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಹುಮೇರ ಪರ್ವೀನ್, ವೈಸಿರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪೂರ್ಣ ಗಂಗಾ, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.




























