Home ಜಿಲ್ಲೆ ತುಮಕೂರು ಬದುಕಿನ ವಿಕಾಸಕ್ಕೆ ಧರ್ಮವೇ ಅಡಿಪಾಯ: ರಂಭಾಪುರಿಶ್ರೀ

ಬದುಕಿನ ವಿಕಾಸಕ್ಕೆ ಧರ್ಮವೇ ಅಡಿಪಾಯ: ರಂಭಾಪುರಿಶ್ರೀ

ಕೊರಟಗೆರೆ, ಜೂ. ೨೩- ಮನುಷ್ಯನ ಬದುಕಿಗೆ ಧರ್ಮ ಪರಿಪಾಲನೆ ಬಹು ಮುಖ್ಯ. ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರ ಜನರ ನಿಜವಾದ ಆಸ್ತಿ. ಬದುಕಿನ ವಿಕಾಸಕ್ಕೆ ಧರ್ಮವೇ ಅಡಿಪಾಯ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ತಾಲೂಕಿನ ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟದ ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ಏರ್ಪಡಿಸಿದ್ದ ೨೦ನೇ ವಾರ್ಷಿಕೋತ್ಸವ ಮತ್ತು ಜನ ಜಾಗೃತಿ ಧರ್ಮ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸುಂದರವಾದ ಉಡುಗೆಯಿಂದ ವ್ಯಕ್ತಿತ್ವ ಮಾತ್ರ ಬದಲಾಗುತ್ತೇ ವಿನಃ ಬದುಕು ಬದಲಾವಣೆ ಆಗೋದಿಲ್ಲ. ಸಂಸ್ಕಾರ ಮತ್ತು ಸರಳ ವ್ಯಕ್ತಿತ್ವದಿಂದ ಮಾತ್ರ ಬದುಕು ಶ್ರೀಮಂತ ಆಗಲಿದೆ. ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ. ಶ್ರೀ ವೀರಭದ್ರ ಶಿವಚಾರ್ಯರು ೫೦ ವರ್ಷದ ಸಾಧನೆಯನ್ನು ಕೇವಲ ೨೦ ವರ್ಷದಲ್ಲಿ ಮಾಡಿ ಭಕ್ತರ ಮನಸ್ಸಿನಲ್ಲಿ ನೆಲೆಸಿ ಕ್ರಿಯಾಶೀಲ ಬದುಕಿಗೆ ಸಾಕ್ಷಿಯಾಗಿದ್ದಾರೆ ಎಂದರು.


ಸಿದ್ದರಬೆಟ್ಟ ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಶಿವಚಾರ್ಯ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಸಾಮೂಹಿಕ ವಿವಾಹವು ವಿಶೇಷ ಪಾತ್ರ ವಹಿಸಲಿದೆ. ಸಿದ್ದರಬೆಟ್ಟ ಶ್ರೀಮಠಕ್ಕೆ ಭಕ್ತ ಸಮೂಹವೇ ಶ್ರೀರಕ್ಷೆ. ಶ್ರೀಮಠಕ್ಕೆ ಸೇವೆ ಸಲ್ಲಿಸಿದ ಭಕ್ತರಿಗೆ ಪ್ರತಿ ವರ್ಷ ಗುರು ಸೇವಾರತ್ನ ನೀಡಲಾಗುತ್ತದೆ. ಸಿದ್ದರಬೆಟ್ಟ ಶ್ರೀಮಠ ಮತ್ತು ಭಕ್ತರ ನಡುವಿನ ಸಮಾಗಮವೇ ವಾರ್ಷಿಕೋತ್ಸವ ಸಮಾರಂಭ ಎಂದು ಹೇಳಿದರು.


ಎಲೆರಾಂಪುರ ಶ್ರೀಕ್ಷೇತ್ರದ ಪೀಠಾಧ್ಯಕ್ಷರಾದ ಡಾ. ಶ್ರೀ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಸಿದ್ದರಬೆಟ್ಟ ಶ್ರೀಗಳು ಶ್ರೀಮಠ ಕಟ್ಟುವ ಬದಲಾಗಿ ಭಕ್ತರ ಮನಸ್ಸು ಕಟ್ಟಿದ್ದಾರೆ. ಸಿದ್ದರಬೇಟ್ಟ ಶ್ರೀಮಠವು ೨೦ ವರ್ಷದ ಅವಧಿಯಲ್ಲಿ ಜಾತಿ ಭೇದ ಮತ್ತು ವರ್ಣಭೇದ ಇಲ್ಲದೇ ರಾಷ್ಟ್ರ ಮಟ್ಟಕ್ಕೆ ಬೆಳೆದಿದೆ. ಶ್ರೀಕ್ಷೇತ್ರದಲ್ಲಿ ೧೦೮ ಅಡಿ ಎತ್ತರದ ಶಿವಲಿಂಗ ಸ್ಥಾಪನೆಗೆ ಭಕ್ತರ ಸಹಕಾರ ಅತ್ಯಗತ್ಯ ಎಂದರು.


ಬೆಳ್ಳಾವಿ ಮಠದ ಶ್ರೀಕಾರದ ವೀರಬಸವ ಸ್ವಾಮೀಜಿ ಮಾತನಾಡಿ, ಬಾಳೆಹೊನ್ನೂರು ಜಗದ್ಗುರುಗಳ ಆಶೀರ್ವಾದ ಮತ್ತು ಶ್ರೀರಕ್ಷೆಯೇ ಸಿದ್ದರಬೆಟ್ಟ ಕ್ಷೇತ್ರವು ಬೆಳೆಯಲು ಕಾರಣ. ಸ್ವಾಮೀಜಿಗಳ ಹತ್ತಾರು ಸಮಾಜ ಸೇವೆ ಕಾರ್ಯಕ್ರಮಗಳೇ ಇವತ್ತಿನ ಭಕ್ತ ಸಾಗರಕ್ಕೆ ಸಾಕ್ಷಿ. ಮೊಬೈಲ್ ಕಡಿತ ಮಾಡಲು ಪುಸ್ತಕ ಮೆರವಣಿಗೆ ಕಾರ್ಯಕ್ರಮವೇ ಹೆಮ್ಮೆ ಎಂದು ಹೇಳಿದರು.


ಮಳಲಿಮಠದ ಪೀಠಾಧ್ಯಕ್ಷರಾದ ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರೀಮಠಕ್ಕೆ ಆಸರೆಯಾದ ಭಕ್ತರನ್ನು ಸ್ಮರಿಸುವ ಕಾರ್ಯಕ್ರಮವೇ ವಾರ್ಷಿಕೋತ್ಸವ. ಸಿದ್ದರಬೇಟ್ಟದ ಶ್ರೀಗಳ ಸಾಮಾಜಿಕ ಮತ್ತು ಧಾರ್ಮಿಕ ಚಿಂತನೆ ಬಹು ದೊಡ್ಡದಾಗಿದೆ. ಕಲಿಯುಗ ಮತ್ತು ಆಧುನಿಕ ತಂತ್ರಜ್ಞಾನದ ಮನುಷ್ಯನ ಜೀವನಕ್ಕೆ ಯೋಗ ಅತ್ಯಂತ ಸಹಕಾರಿ ಎಂದರು.


ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಸಿದ್ದರಬೇಟ್ಟ ಶ್ರೀಮಠದ ೨೦ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಇಂದು ಇತಿಹಾಸದ ಪುಟ ಸೇರಿದೆ. ಶ್ರೀಕ್ಷೇತ್ರದ ಪ್ರತಿ ಗಿಡವು ಸಹ ಔಷಧಿಯ ಗುಣವನ್ನು ಹೊಂದಿದೆ. ಸ್ವಾಮೀಜಿಗಳ ಜನಪರ ಮತ್ತು ಪರಿಸರ ಸ್ನೇಹಿ ಕಾರ್ಯಕ್ರಮಕ್ಕೆ ನಾವು ಶ್ರೀಮಠದ ಜತೆ ಇರುತ್ತೇವೆ ಎಂದು ಹೇಳಿದರು.


ಜಿ.ಪಂ. ಮಾಜಿ ಸದಸ್ಯ ಪಿ.ಎನ್. ಕೃಷ್ಣಮೂರ್ತಿ ಮಾತನಾಡಿ, ಸಿದ್ದರಬೆಟ್ಟದಲ್ಲಿ ಶ್ರೀಗಳ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಸೇವೆಯು ಅನನ್ಯ. ಶಾಶ್ವತ ದಾಸೋಹಕ್ಕೆ ಈಗಾಗಲೇ ಶ್ರೀಮಠಕ್ಕೆ ೧ ಲಕ್ಷ ನೀಡಿದ್ದೇನೆ. ಸಿದ್ದರಬೇಟ್ಟ ಶ್ರೀಕ್ಷೇತ್ರದಲ್ಲಿ ಶ್ರೀಮಠದ ಭಕ್ತನಾಗಿ ಸಮುದಾಯ ಭವನ ಕಟ್ಟಿಕೋಡುವ ಜವಾಬ್ದಾರಿ ನನ್ನದು ಎಂದರು.


ಕಾಂಗ್ರೆಸ್ ಮುಖಂಡ ಮಹಾಲಿಂಗಪ್ಪ ಮಾತನಾಡಿ, ಸಿದ್ದರಬೆಟ್ಟ ಶ್ರೀಕ್ಷೇತ್ರದಲ್ಲಿ ೨೦ ವರ್ಷದಿಂದ ಧಾರ್ಮಿಕ ಕ್ಷೇತ್ರವಲ್ಲದೇ ಕೃಷಿ ಕ್ಷೇತ್ರದಲ್ಲೂ ಶ್ರೀಗಳ ಸಾಧನೆ ಅನನ್ಯ. ಪ್ರತಿ ತಿಂಗಳು ನಡೆಯುವ ಬೆಳದಿಂಗಳ ಕೂಟವು ಸ್ಥಳೀಯ ರೈತರಿಗೆ ವರದಾನ. ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡ ನವ ಜೋಡಿಗಳಿಗೆ ಶುಭವಾಗಲಿ ಎಂದು ಆಶಿಸಿದರು.


ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಹಿರೇಮಠದ ರೇವಣ್ಣಸಿದ್ದೇಶ್ವರ ಶಿವಚಾರ್ಯ, ತಂಗನಹಳ್ಳಿಯ ಬಸವಮಹಾಲಿಂಗ, ಚಿಕ್ಕತೊಟ್ಲುಕೆರೆಯ ಮಲ್ಲಿಕಾರ್ಜುನ ಸ್ವಾಮೀಜಿ, ತೆಗ್ಗಿಹಳ್ಳಿಯ ರಮಾನಂದ ಸ್ವಾಮಿ, ತಮ್ಮಡಿಹಳ್ಳಿಯ ಸಿದ್ದಲಿಂಗ ದೇಶಿಕೇಂದ್ರ ಸ್ವಾಮಿ, ಚಿಮ್ಮಲಗಿಯ ಸಿದ್ದರೇಣುಕ ಶಿವಚಾರ್ಯ, ತೆವಡೆಹಳ್ಳಿಯ ಗೋಸಲ ಚನ್ನಬಸವೇಶ್ವರ ಶಿವಚಾರ್ಯ, ಸಗರದ ಸೋಮೇಶ್ವರ ಶಿವಚಾರ್ಯ, ಸಂಗೋಳ್ಳಿಯ ಗುರುಲಿಂಗ ಶಿವಾಚಾರ್ಯ, ಹೊಳವನಹಳ್ಳಿಯ ನಂಜುಂಡೇಶ್ವರ ಒಡೆಯರ್, ನಾಗವಂದದ ಶಿವಯೋಗಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ, ಅಖಿಲ ಭಾರತ ವೀರಶೈವ ಲಿಂಗಾಯಿತ ಜಿಲ್ಲಾ ಯುವಾಧ್ಯಕ್ಷ ಡಾ.ಕೆ.ಎಲ್.ದರ್ಶನ್, ಕೊರಟಗೆರೆ ಅಧ್ಯಕ್ಷ ವೀರಭದ್ರಯ್ಯ, ಉಪಾಧ್ಯಕ್ಷ ಶಿವಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ದಯಾಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಜೆಡಿಎಸ್ ಅಧ್ಯಕ್ಷ ಕಾಮರಾಜು, ಮುಖಂಡರಾದ ಕೃಷ್ಣಪ್ಪ, ಬಲರಾಮಯ್ಯ, ರಾಮಮೂರ್ತಿ, ರುದ್ರಮುನಿ, ವಿನಯ್, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.