
ಹುಳಿಯಾರು, ಜೂ. ೨೩- ಹುಳಿಯಾರು-ಕೆಂಕೆರೆ ಕೆಪಿಎಸ್ ಶಾಲೆಯ ಎಸ್‌ಎಸ್‌ಎಲ್‌ಸಿ ಟಾಪರ್ಸ್‌ಗೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಹುಳಿಯಾರಿನ ಸ್ಪಂದನ ನರ್ಸಿಂಗ್ ಹೋಂನ ಡಾ.ನಾಗರಾಜು ಅವರು ವೈಯಕ್ತಿಕವಾಗಿ ೨೫ ಸಾವಿರ ರೂ. ನಗದು ಬಹುಮಾನ ವಿತರಿಸಿದರು.
೨೦೨೫-೨೬ ನೇ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ೬೨೫ ಕ್ಕೆ ೬೨೦ ಅಂಕಗಳೊಂದಿಗೆ ಉತ್ತೀರ್ಣರಾದ ಮಹಾಲಕ್ಷ್ಮಿ ಅವರಿಗೆ ೧೦ ಸಾವಿರ ರೂ. ನಗದು ಹಾಗೂ ೬೦೦ ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಪೂರ್ವಿಕಾ, ಗಗನ್, ತೇಜಸ್ ಎಚ್.ಎಲ್. ವಿದ್ಯಾರ್ಥಿಗಳಿಗೆ ತಲಾ ೫ ಸಾವಿರ ರೂ.ಗಳ ನಗದು ಬಹುಮಾನ ನೀಡಿದರು.
ಬಹುಮಾನ ವಿತರಿಸಿ ಮಾತನಾಡಿದ ಡಾ.ನಾಗರಾಜು, ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಹಂತಕ್ಕೇರಲು ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ಏಕಾಗ್ರತೆಯಿಂದ ಅಭ್ಯಾಸ ಮಾಡಬೇಕು. ನಿಮ್ಮಲ್ಲಿ ಪ್ರತಿದಿನ ಒಂದು ಗಂಟೆ ಕಾಲ ಸಮಾದಾನ ಮತ್ತು ಸಂಯಮದಿಂದ ಒಂದೇ ಕಡೆ ಕುಳಿತು ಓದುವವರು ಯಾರು ಎಂದು ಕೇಳಿದಾಗ ವಿದ್ಯಾರ್ಥಿಗಳಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ನಿಮ್ಮಲ್ಲಿ ಓದುವಾಗ ಇರಬೇಕಾದ ಇನ್ವಾಲ್ವ್‌ಮೆಂಟ್ ಕೊರತೆಯಾಗಿದೆ. ಕನಿಷ್ಠ ಒಂದು ಗಂಟೆ ಕಾಲ ಸಮಚಿತ್ತದಿಂದ ಓದುವ ಹವ್ಯಾಸ ಬೆಳೆಸಿಕೊಂಡರೆ ಖಂಡಿತವಾಗಿ ಯಶಸ್ಸು ಸಿಗುತ್ತದೆ. ಇಂದಿನಿಂದಲೇ ಈ ರೂಢಿ ಮಾಡಿಕೊಂಡರೆ ಹತ್ತನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಬಹುದು ಎಂದರು.
ವಿದ್ಯಾರ್ಥಿಗಳಲ್ಲಿ ಕಂಡುಬರುತ್ತಿರುವ ಪೌಷ್ಟಿಕಾಂಶದ ಕೊರತೆಯ ಬಗ್ಗೆ ಮಾತನಾಡಿದ ಅವರು, ನಮ್ಮ ಭಾಗದ ಜನರು ಆಹಾರದಲ್ಲಿ ಶೇ.೯೦ ರಷ್ಟು ಕೇವಲ ಕಾರ್ಬೋಹೈಡ್ರೇಟ್ಸ್ (ಅನ್ನ ಮತ್ತು ರಾಗಿ) ಮಾತ್ರ ಬಳಸುತ್ತಿದ್ದಾರೆ. ಇದರಿಂದ ಬೊಜ್ಜು ಹಾಗೂ ಇನ್ನಿತರ ಕಾಯಿಲೆಗಳು ಬರುತ್ತವೆ. ಆದರೆ ನಮ್ಮ ದೈನಂದಿನ ಆಹಾರದಲ್ಲಿ ಶೇ.೫೦ ಕ್ಕಿಂತ ಹೆಚ್ಚು ಪ್ರೋಟೀನ್ ಇರಬೇಕು. ದ್ವಿದಳ ಧಾನ್ಯಗಳು (ಕಡಲೆ, ಬಟಾಣಿ ಇತ್ಯಾದಿ) ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು ಎಂದು ಸಲಹೆ ನೀಡಿದರು.
ತಮ್ಮ ಸ್ವಂತ ಉದಾಹರಣೆ ನೀಡಿದ ಅವರು ನನಗೆ ೫೬ ವರ್ಷ, ನಾನು ಪ್ರತಿದಿನ ಮುಂಜಾನೆ ೫:೩೦ ಕ್ಕೆ ಎದ್ದು ೧೦ ಕಿಲೋಮೀಟರ್ ರನ್ ಮಾಡುತ್ತೇನೆ. ಇತ್ತೀಚೆಗೆ ಊಟಿಯಲ್ಲಿ ೫೦ ಕಿಲೋಮೀಟರ್ ಮ್ಯಾರಥಾನ್ ಓಡಿದ್ದೇನೆ ಹಾಗೂ ಚಿಕ್ಕಮಗಳೂರಿನಲ್ಲಿ ೧೬೦೦ ಮೀಟರ್ ಎತ್ತರದ ಗಿರಿಶಿಖರ ಏರಿದ್ದೇನೆ. ನನ್ನ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ನಾನು ಸಮಾಜಕ್ಕೆ ಉತ್ತಮ ಸೇವೆ ನೀಡಲು ಸಾಧ್ಯ ಎಂದು ಅರಿತಿದ್ದೇನೆ. ವಿದ್ಯಾರ್ಥಿಗಳು ಕೂಡ ಪ್ರತಿದಿನ ಕನಿಷ್ಠ ೧೦ ಬಾರಿ ಸೂರ್ಯ ನಮಸ್ಕಾರ, ಧ್ಯಾನ ಅಥವಾ ಯೋಗ ಮಾಡುವುದನ್ನು ಕಡ್ಡಾಯಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸುಮ್ಮನೆ ಕಾಲಹರಣ ಮಾಡದೆ ಒಂದು ವ್ಯವಸ್ಥಿತ ದಿನಚರಿಯನ್ನು ಪಾಲಿಸಬೇಕು. ಮುಂಜಾನೆ ಬೇಗ ಎದ್ದು ವಾಕಿಂಗ್, ವಾರ್ಮ್-ಅಪ್ ಕಸರತ್ತು ಹಾಗೂ ಸೂರ್ಯ ನಮಸ್ಕಾರ ಮಾಡುವುದು. ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುವುದನ್ನು ಗಂಭೀರವಾಗಿ ಆಲಿಸುವುದು. ಸಂಜೆ ಶಾಲೆಯಿಂದ ಬಂದ ನಂತರ ಅಂದಿನ ಪಾಠವನ್ನು ಅಂದೇ ಪುನರಾವರ್ತನೆ ಮಾಡುವುದು. ರಾತ್ರಿ ಕನಿಷ್ಠ ೬ ಗಂಟೆಗಳ ಕಾಲ ಪೂರ್ಣ ಪ್ರಮಾಣದ ನಿದ್ದೆ ಮಾಡುವುದು. ಹೀಗೆ ಶಿಸ್ತಿನ ಜೀವನ ಅಳವಡಿಸಿಕೊಂಡರೆ ನಿಮ್ಮ ಮಾನಸಿಕ ಸ್ಥಿತಿ ಉತ್ತಮಗೊಳ್ಳುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎನ್.ಜಿ.ಕೃಷ್ಣಮೂರ್ತಿ, ಹಿಂದಿ ಪ್ರಾಧ್ಯಾಪಕ ಓಂಕಾರಮೂರ್ತಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಗವೀರಂಗಯ್ಯ, ಉಪಪ್ರಾಚಾರ್ಯ ಚಂದ್ರಚಾರ್, ಎಸ್‌ಡಿಎಂಸಿ ಸದಸ್ಯರುಗಳಾದ ಚನ್ನಕೇಶವ, ರಾಮಚಂದ್ರಯ್ಯ, ಶೇಖರ್, ರಮೇಶ್, ಬಾಲಾಜಿಸಿಂಗ್ ಮತ್ತಿತರರು ಭಾಗವಹಿಸಿದ್ದರು.




























