Home ಜಿಲ್ಲೆ ಯತ್ನಾಳ ಬಾಯಿಗೆ ಬಂದAತೆ ಮಾತನಾಡುವುದನ್ನು ನಿಲ್ಲಿಸಲಿ: ಎಂ.ಬಿ. ಪಾಟೀಲ್

ಯತ್ನಾಳ ಬಾಯಿಗೆ ಬಂದAತೆ ಮಾತನಾಡುವುದನ್ನು ನಿಲ್ಲಿಸಲಿ: ಎಂ.ಬಿ. ಪಾಟೀಲ್

ಸಂಜೆವಾಣಿ ವಾರ್ತೆ,
ವಿಜಯಪುರ, ಸೆ. ೧೫:ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸಲು ಜಮೀರ್ ಅಹ್ಮದ್ ಖಾನ್, ಸತೀಶ ಜಾರಕಿಹೊಳಿ ಹಾಗೂ ತಾವು ವಿರೋಧ ವ್ಯಕ್ತಪಡಿಸಿದ್ದೇವೆ. ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡದೇ ೩೬ ಶಾಸಕರ ಸಹಿ ಸಂಗ್ರಹಿಸಲಾಗಿದೆ ಎಂಬ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿರುಗೇಟು ನೀಡಿದರು.
ವಿಜಯಪುರ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ ಅವರ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರು ನಮ್ಮ ಉನ್ನತ ನಾಯಕರು. ಹಿಂದೆಯೂ, ಈಗಲೂ, ಮುಂದೆಯೂ ಅವರೇ ನಮ್ಮ ನಾಯಕರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರಲಿ, ಆಗದೇ ಇರಲಿ ಅವರ ನಾಯಕತ್ವದಲ್ಲಿ ನಮಗೆ ವಿಶ್ವಾಸವಿದೆ” ಎಂದು ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆಗಾಗಿ ಶಾಸಕರಿಂದ ಸಹಿ ಸಂಗ್ರಹಿಸುವ ಯಾವುದೇ ಪದ್ಧತಿಯಿಲ್ಲ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸುವ ವಿಚಾರವೇನಾದರೂ ಇದ್ದರೆ ಅದು ಹೈಕಮಾಂಡ್‌ನ ನಿರ್ಧಾರವಾಗಿರುತ್ತದೆ. ಶಾಸಕರ ಸಹಿ ಸಂಗ್ರಹಿಸಲಾಗಿದೆ ಎಂಬ ಯತ್ನಾಳ ಅವರ ಆರೋಪಕ್ಕೆ ಯಾವುದೇ ಆಧಾರವಿಲ್ಲ ಎಂದರು.

ರಾಹುಲ್ ಗಾಂಧಿ ಸಿದ್ದರಾಮಯ್ಯ ಜತೆ ಮಾತನಾಡಿದ್ದಾರೆ

ಸ್ವತಃ ರಾಹುಲ್ ಗಾಂಧಿಯವರೇ ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಬಾರದು ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರನ್ನು ಕರೆಯಿಸಿಕೊಂಡು ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಿದ್ದಾರೆ. ಹೀಗಿರುವಾಗ ಯತ್ನಾಳ ಅವರು ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದು ಪಾಟೀಲ್ ಹೇಳಿದರು.
“ಯತ್ನಾಳ ಅವರಿಗೆ ಬಾಯಿಗೆ ಬಂದAತೆ ಮಾತನಾಡುವುದೇ ಚಾಳಿಯಾಗಿದೆ. ಅವರು ಬಕಾಸುರನಂತೆ ಮಾತನಾಡುತ್ತಾರೆ. ಇಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು” ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ-ಸತೀಶ ನಡುವೆ ಭಿನ್ನಾಭಿಪ್ರಾಯವಿಲ್ಲ

ಸಿದ್ದರಾಮಯ್ಯ ಹಾಗೂ ಸತೀಶ ಜಾರಕಿಹೊಳಿ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ರಾಜಕೀಯದಲ್ಲಿ ಸಣ್ಣಪುಟ್ಟ ಮುನಿಸುಗಳು, ಅಭಿಪ್ರಾಯ ವ್ಯತ್ಯಾಸಗಳು ಸಹಜ. ಅವುಗಳನ್ನು ದೊಡ್ಡ ಭಿನ್ನಾಭಿಪ್ರಾಯವೆಂದು ಬಿಂಬಿಸುವ ಅಗತ್ಯವಿಲ್ಲ. ಎಲ್ಲವೂ ಸರಿಯಾಗಿದೆ ಎಂದು ಎಂ.ಬಿ. ಪಾಟೀಲ್ ಹೇಳಿದರು.
ಜಮೀರ್ ಅಹ್ಮದ್ ಖಾನ್ ಹಾಗೂ ಸತೀಶ ಜಾರಕಿಹೊಳಿ ಅವರು ಸಿದ್ದರಾಮಯ್ಯ ವಿರುದ್ಧ ಯಾವುದೇ ರೀತಿಯ ಅಭಿಯಾನ ನಡೆಸಿಲ್ಲ. ದಾವಣಗೆರೆ ಉಪಚುನಾವಣೆ ವಿಚಾರದಲ್ಲಿ ಜಮೀರ್ ಅಹ್ಮದ್ ಹಾಗೂ ಸಿದ್ದರಾಮಯ್ಯ ನಡುವೆ ಗೊಂದಲ ಉಂಟಾಗಿದ್ದು ನಿಜ. ಆದರೆ ಅದನ್ನು ಪಕ್ಷದೊಳಗಿನ ದೊಡ್ಡ ಬಿಕ್ಕಟ್ಟಾಗಿ ನೋಡಬಾರದು ಎಂದರು.

‘ನನಗೆ ಹೊಗಳಿಸಿಕೊಳ್ಳುವ ಖಯಾಲಿ ಇಲ್ಲ’

ಹಿಂದೆ ಯತ್ನಾಳ ಅವರು ತಮ್ಮನ್ನು ಹೊಗಳಿಸಿಕೊಳ್ಳಲು ಎಂ.ಬಿ. ಪಾಟೀಲ್ ತಮ್ಮನ್ನು ಕರೆಸಿಕೊಂಡಿದ್ದರು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಟೀಲ್, “ನನಗೆ ಹೊಗಳಿಸಿಕೊಳ್ಳುವ ಯಾವುದೇ ಖಯಾಲಿ ಇಲ್ಲ. ನಡೆದಾಡುವ ದೇವರು ಎಂದೇ ಗೌರವಿಸಲ್ಪಟ್ಟಿದ್ದ ದಿವಂಗತ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ನನ್ನನ್ನು ಹೊಗಳಿದ್ದಾರೆ. ನನಗೆ ನೊಬೆಲ್ ಪ್ರಶಸ್ತಿಗಿಂತ ಶ್ರೀಗಳ ಮಾತು ದೊಡ್ಡದು” ಎಂದು ಹೇಳಿದರು.

‘ಯತ್ನಾಳಗೆ ವಿಧಾನ ಪರಿಷತ್ ಗೆಲ್ಲಲು ನಾವು ನೆರವಾಗಿದ್ದೆವು’

ಯತ್ನಾಳ ಅವರ ರಾಜಕೀಯ ನಡೆ ಕುರಿತು ಪ್ರಸ್ತಾಪಿಸಿದ ಪಾಟೀಲ್, ಯತ್ನಾಳ ಅವರು ಜೆಡಿಎಸ್‌ನಲ್ಲಿದ್ದಾಗ ನಮಾಜ್ ಮಾಡಿದ್ದರು, ತಲೆಗೆ ಟೋಪಿ ಹಾಕಿಕೊಂಡಿದ್ದರು ಎಂದು ಟೀಕಿಸಿದರು.
ಬಿಜೆಪಿಯಿಂದ ಹೊರಬಂದ ಸಂದರ್ಭದಲ್ಲಿ ತಾವೂ ಸೇರಿದಂತೆ ಹಲವರು ಯತ್ನಾಳ ಅವರಿಗೆ ಬೆಂಬಲ ನೀಡಿತ್ತು. ವಿಧಾನ ಪರಿಷತ್ ಚುನಾವಣೆಯಲ್ಲಿ ಸಹಾಯ ಮಾಡುವಂತೆ ಯತ್ನಾಳ ಅವರೇ ತಮ್ಮ ಬಳಿ ಬಂದು ಮನವಿ ಮಾಡಿದ್ದರು. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ನಾವೆಲ್ಲರೂ ಸೇರಿ ಎರಡನೇ ಪ್ರಾಶಸ್ತ್ಯದ ಮತಗಳನ್ನು ಯತ್ನಾಳ ಅವರಿಗೆ ನೀಡಿ ಗೆಲ್ಲಿಸಿದ್ದೇವೆ ಎಂದು ಹೇಳಿದರು.
“ಕೋಮುವಾದಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಯತ್ನಾಳ ಅವರಿಗೆ ಬೆಂಬಲಿಸಿ ಗೆಲ್ಲಿಸಿದ್ದನ್ನು ಅವರು ಮರೆಯಬಾರದು. ಆದರೆ ಇಂದು ಅದೇ ವಿಚಾರವನ್ನು ಮರೆತು ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ” ಎಂದು ಪಾಟೀಲ್ ಆರೋಪಿಸಿದರು.

ಯಡಿಯೂರಪ್ಪ ವಿರುದ್ಧವೇ ತಿರುಗಿಬಿದ್ದಿದ್ದರು

ವಿಧಾನ ಪರಿಷತ್ ಸದಸ್ಯರಾದ ಬಳಿಕ ಬಿ.ಎಸ್. ಯಡಿಯೂರಪ್ಪ ಅವರ ಸಹಾಯದಿಂದ ಯತ್ನಾಳ ಅವರು ಮತ್ತೆ ಬಿಜೆಪಿಗೆ ಸೇರ್ಪಡೆಯಾದರು. ಜಗದೀಶ ಶೆಟ್ಟರ್, ಪ್ರಹ್ಲಾದ್ ಜೋಶಿ ಸೇರಿದಂತೆ ಹಲವರು ಯತ್ನಾಳ ಅವರ ಬಿಜೆಪಿಗೆ ವಾಪಸಾತಿಯನ್ನು ವಿರೋಧಿಸಿದ್ದರು. ಆದರೂ ಯಡಿಯೂರಪ್ಪ ಅವರು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರು.
ನAತರ ಅದೇ ಯಡಿಯೂರಪ್ಪ ಅವರ ವಿರುದ್ಧ ಯತ್ನಾಳ ತಿರುಗಿಬಿದ್ದರು. “ಅವರಂತೆ ನಾನು ಇಲ್ಲ. ಸಿದ್ದರಾಮಯ್ಯ ನಮ್ಮ ನಾಯಕರು. ಹಿಂದೆಯೂ, ಇಂದೂ, ಮುಂದೆಯೂ ಅವರೇ ನಮ್ಮ ನಾಯಕರು” ಎಂದು ಎಂ.ಬಿ. ಪಾಟೀಲ್ ಪುನರುಚ್ಚರಿಸಿದರು.

‘ಇನ್ನು ಹೀಗೆ ಮಾತನಾಡಿದರೆ ಬೇರೆ ದಾರಿ’

ವಿಧಾನ ಪರಿಷತ್ ಚುನಾವಣೆಯಲ್ಲಿ ಯತ್ನಾಳ ಅವರಿಗೆ ಬೆಂಬಲ ನೀಡಿದ್ದಕ್ಕಾಗಿ ತಾವು ಅಪಪ್ರಚಾರ ಎದುರಿಸುವಂತಾಗಿತ್ತು. ಆದರೂ ರಾಜಕೀಯ ಪರಿಸ್ಥಿತಿಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಈಗ ತಪ್ಪೆಂದು ಭಾವಿಸುವುದಿಲ್ಲ ಎಂದರು.
“ಯತ್ನಾಳ ಅವರು ಈ ರೀತಿಯ ಮಾತುಗಳನ್ನು ಮುಂದುವರಿಸುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ನಾವು ಬೇರೆ ದಾರಿ ಹಿಡಿಯಬೇಕಾಗುತ್ತದೆ” ಎಂದು ಎಂ.ಬಿ. ಪಾಟೀಲ್ ಎಚ್ಚರಿಕೆ ನೀಡಿದರು.

ಬಿ.ಕೆ. ಹರಿಪ್ರಸಾದ್ ಅವರೇ ‘ಸುಪ್ರೀಂ’: ಎಂ.ಬಿ. ಪಾಟೀಲ

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಪಕ್ಷದಲ್ಲಿ ‘ಸುಪ್ರೀಂ’ ಇದ್ದಂತೆ. ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳಿಗಿAತಲೂ ಅವರು ಹಿರಿಯರು. ಹೀಗಾಗಿ ಅವರಿಗೆ ಎಲ್ಲ ರೀತಿಯ ಗೌರವ ನೀಡಲೇಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
ರಾಜ್ಯ ಸರ್ಕಾರ ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಕಾರಣಕ್ಕೆ ಬಿ.ಕೆ. ಹರಿಪ್ರಸಾದ್ ಅವರು ಅಸಮಾಧಾನಗೊಂಡಿದ್ದಾರೆ ಎಂಬ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.
“ಬಿ.ಕೆ. ಹರಿಪ್ರಸಾದ್ ಅವರು ನಮ್ಮ ಪಕ್ಷದ ಕ್ಯಾಪ್ಟನ್. ಪಕ್ಷದ ವಿಚಾರದಲ್ಲಿ ಮುಖ್ಯಮಂತ್ರಿಗಿAತಲೂ ಅವರು ಹಿರಿಯರು. ಹೀಗಾಗಿ ಅವರಿಗೆ ಎಲ್ಲ ರೀತಿಯ ಗೌರವ ನೀಡಬೇಕಾಗುತ್ತದೆ. ಇದರಲ್ಲಿ ಎರಡು ಮಾತಿಲ್ಲ” ಎಂದು ಎಂ.ಬಿ. ಪಾಟೀಲ ಸ್ಪಷ್ಟಪಡಿಸಿದರು.
ಹರಿಪ್ರಸಾದ್ ಅವರ ಸ್ಥಾನಮಾನ ಹಾಗೂ ಪಕ್ಷದೊಳಗಿನ ಹಿರಿಯತನವನ್ನು ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಅವರು ಹೇಳಿದರು.