Home ಜಿಲ್ಲೆ ಆನ್‍ಲೈನ್ ದ್ರಾಕ್ಷಿ ವ್ಯಾಪಾರಕ್ಕೆ ಯತ್ನಾಳ ಒತ್ತು

ಆನ್‍ಲೈನ್ ದ್ರಾಕ್ಷಿ ವ್ಯಾಪಾರಕ್ಕೆ ಯತ್ನಾಳ ಒತ್ತು

ವಿಜಯಪುರ, ಜು. 29: ದ್ರಾಕ್ಷಿ ಬೆಳೆಗಾರರಿಗೆ ಪಾರದರ್ಶಕ ಹಾಗೂ ನ್ಯಾಯಸಮ್ಮತ ವಹಿವಾಟು ಒದಗಿಸುವ ಉದ್ದೇಶದಿಂದ ವಾರದಲ್ಲಿ ಎರಡು ದಿನ ಕಡ್ಡಾಯವಾಗಿ ಆನ್‍ಲೈನ್ ಟ್ರೇಡಿಂಗ್ ವ್ಯವಸ್ಥೆಯಲ್ಲೇ ಒಣ ದ್ರಾಕ್ಷಿ ವ್ಯಾಪಾರ ನಡೆಸಬೇಕು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಎಪಿಎಂಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಮಂಗಳವಾರ ನಡೆದ ದ್ರಾಕ್ಷಿ ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, ತೂಕದಲ್ಲಿ ಮೋಸ, ಹರಾಜಿನ ನೆಪದಲ್ಲಿ ಅನಗತ್ಯ ತೂರಾಟ ಹಾಗೂ ರೈತರ ಉತ್ಪನ್ನ ಹಾಳಾಗುವುದನ್ನು ತಡೆಯಲು ಆನ್‍ಲೈನ್ ವ್ಯಾಪಾರ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ತಾತ್ಕಾಲಿಕವಾಗಿ ವಾರದಲ್ಲಿ ಒಂದು ದಿನ ಮಾತ್ರ ಆಫ್‍ಲೈನ್ ವಹಿವಾಟು ನಡೆಸಲು ಅವಕಾಶ ನೀಡಲಾಗುವುದು. ಆದರೆ ಆಫ್‍ಲೈನ್ ವ್ಯವಹಾರವೂ ಆನ್‍ಲೈನ್ ಟ್ರೇಡಿಂಗ್‍ನ ನಿಯಮಾವಳಿ ಮತ್ತು ಮಾರ್ಗಸೂಚಿಗಳ ಅನುಸಾರವೇ ನಡೆಯಬೇಕು ಎಂದು ಸ್ಪಷ್ಟಪಡಿಸಿದರು.
ಆನ್‍ಲೈನ್ ಮಾರುಕಟ್ಟೆಯಿಂದ ರೈತರಿಗೆ ಯಾವುದೇ ರೀತಿಯ ಮೋಸವಾಗುವುದಿಲ್ಲ. ಇದರಿಂದ ರೈತರು ವರ್ತಕರಿಗೆ ಪಾವತಿಸುತ್ತಿದ್ದ ಶೇ.2ರಷ್ಟು ಕಮಿಷನ್ ಕೂಡ ಉಳಿಯಲಿದೆ. ಆದ್ದರಿಂದ ರೈತರು ಹಾಗೂ ವರ್ತಕರ ಹಿತಕ್ಕೆ ವಿರುದ್ಧವಾಗಿರುವ ಖಾಸಗಿ ಅಸೋಸಿಯೇಷನ್‍ನ ನಿಯಮಗಳನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಎಪಿಎಂಸಿ ಅಧಿಕಾರಿಗಳ ಸಮ್ಮುಖದಲ್ಲೇ ವ್ಯಾಪಾರ ನಡೆಯುವುದರಿಂದ ವಹಿವಾಟಿನ ಸಂಪೂರ್ಣ ಮಾಹಿತಿ ಸರ್ಕಾರಕ್ಕೆ ಲಭ್ಯವಾಗುತ್ತದೆ. ಇದರಿಂದ ಸೆಸ್ ಹಾಗೂ ಜಿಎಸ್‍ಟಿ ರೂಪದಲ್ಲಿ ಸರ್ಕಾರಕ್ಕೂ ಹೆಚ್ಚಿನ ಆದಾಯ ದೊರೆಯಲಿದೆ. ಎಪಿಎಂಸಿ ಪರವಾನಗಿ ಹೊಂದಿರುವ ಪ್ರತಿಯೊಬ್ಬ ವರ್ತಕರಿಗೂ ಆನ್‍ಲೈನ್ ಹಾಗೂ ಆಫ್‍ಲೈನ್ ಎರಡೂ ವ್ಯವಸ್ಥೆಗಳಲ್ಲಿ ಖರೀದಿಗೆ ಅವಕಾಶ ಕಲ್ಪಿಸಬೇಕು. ಹೊಸ ಪರವಾನಗಿ ಕೋರುವ ಅರ್ಜಿದಾರರಿಗೆ ಅನಗತ್ಯ ತೊಂದರೆ ನೀಡದೆ ನಿಯಮಾನುಸಾರ ಪರವಾನಗಿ ನೀಡಬೇಕು ಎಂದು ಸೂಚಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ವರ್ತಕರು ಭಾಗವಹಿಸಿದರೆ ಸ್ಪರ್ಧಾತ್ಮಕ ವಾತಾವರಣ ನಿರ್ಮಾಣವಾಗಿ ರೈತರಿಗೆ ಉತ್ತಮ ಬೆಲೆ ದೊರೆಯುತ್ತದೆ. ಜೊತೆಗೆ ರಾಜ್ಯದ ಹೊರಗೆ ಹೋಗುತ್ತಿರುವ ವ್ಯಾಪಾರವನ್ನು ವಿಜಯಪುರದಲ್ಲೇ ಉಳಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ದೇಶದ ಯಾವುದೇ ರಾಜ್ಯದ ವರ್ತಕರು ಆನ್‍ಲೈನ್ ಮತ್ತು ಆಫ್‍ಲೈನ್ ವಹಿವಾಟಿನಲ್ಲಿ ಭಾಗವಹಿಸಲು ಅವಕಾಶವಿದ್ದು, ಎಲ್ಲರೂ ಇದರ ಪ್ರಯೋಜನ ಪಡೆಯಬೇಕು. ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ 140 ಎಕರೆ ವಿಸ್ತೀರ್ಣದ ವೈನ್ ಪಾರ್ಕ್‍ಗೆ ಈ ಆನ್‍ಲೈನ್ ಟ್ರೇಡಿಂಗ್ ವ್ಯವಸ್ಥೆ ಭದ್ರ ಅಡಿಪಾಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ವಾರಕ್ಕೆ ಎರಡು ದಿನ ಆನ್‍ಲೈನ್ ಹಾಗೂ ತಾತ್ಕಾಲಿಕವಾಗಿ ಒಂದು ದಿನ ಆಫ್‍ಲೈನ್ ಮೂಲಕ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ ನಿರ್ಮಿಸಲಾದ ಟ್ರೇಡಿಂಗ್ ಮಾರುಕಟ್ಟೆ ಆವರಣದಲ್ಲೇ ವಹಿವಾಟು ನಡೆಸುವುದು ಹಾಗೂ ಖಾಸಗಿ ಅಸೋಸಿಯೇಷನ್‍ನ ಕಾನೂನುಬಾಹಿರ ನಿಯಮಗಳನ್ನು ರದ್ದುಪಡಿಸುವ ಕುರಿತು ಸರ್ವಾನುಮತದ ನಿರ್ಣಯ ಕೈಗೊಂಡು ಠರಾವು ಅಂಗೀಕರಿಸಲಾಯಿತು.
ಸಭೆಯಲ್ಲಿ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಮಾಜಿ ಅಧ್ಯಕ್ಷ ಎಂ.ಎಸ್. ರುದ್ರಗೌಡ, ದ್ರಾಕ್ಷಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಅಭಯಕುಮಾರ ನಾಂದ್ರೇಕರ, ಜಿಲ್ಲಾಧ್ಯಕ್ಷ ಎಂ.ಎಸ್. ಲೋಣಿ, ಎಪಿಎಂಸಿ ಆಡಳಿತಾಧಿಕಾರಿ ಆರ್. ಆದಪ್ಪ, ಕಾರ್ಯದರ್ಶಿ ಅಲ್ಲಾಭಕ್ಷ ಬಿಜಾಪುರ, ದ್ರಾಕ್ಷಿ ಬೆಳೆಗಾರರು ಹಾಗೂ ವರ್ತಕರು ಉಪಸ್ಥಿತರಿದ್ದರು.