
ಯಾದಗಿರಿ: ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸಿ, ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಕರೆ ನೀಡಿರುವ ಯಾದಗಿರಿ ಬಂದ್‍ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಕೇಂದ್ರ ಬಸ್ ನಿಲ್ದಾಣ, ಸುಭಾಷ್ ಚೌಕ್ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಹೋರಾಟಗಾರರು ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ಗಮನ ಸೆಳೆಯಲು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಪ್ರತಿಭಟನಾಕಾರರು, ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ತಕ್ಷಣ ಧಾವಿಸುವಂತೆ ಒತ್ತಾಯಿಸುತ್ತಿದ್ದಾರೆ.
ಬಂದ್‍ಗೆ ಬೆಂಬಲ ನೀಡುವಂತೆ ನಗರದ ವಿವಿಧ ವ್ಯಾಪಾರಸ್ಥರಲ್ಲಿ ಮನವಿ ಮಾಡಲಾಗುತ್ತಿದೆ. ಅಂಗಡಿ-ಮುಂಗಟ್ಟುಗಳನ್ನು ತೆರೆಯದೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಹೋರಾಟಕ್ಕೆ ಸಹಕರಿಸುವಂತೆ ಸಂಘಟನೆಗಳ ಮುಖಂಡರು ವ್ಯಾಪಾರಿಗಳಿಗೆ ಮನವಿ ಮಾಡುತ್ತಿದ್ದಾರೆ.
ಜಿಲ್ಲೆಯ ಬರ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಗಣಿಸಿ ಯಾದಗಿರಿಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ಬೆಳೆ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳ ಸಮಸ್ಯೆ ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.
ಬಂದ್ ಹಿನ್ನೆಲೆಯಲ್ಲಿ ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರಿದ್ದು, ಹಲವು ಅಂಗಡಿ-ಮುಂಗಟ್ಟುಗಳು ಬಂದ್ ಮಾಡಲಾಗಿದೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಪೆÇಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಪ್ರಮುಖ ವೃತ್ತಗಳು, ಮಾರುಕಟ್ಟೆ ಪ್ರದೇಶಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪೆÇಲೀಸರು ನಿಯೋಜನೆಗೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೆÇಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.






























