ಕೆಜಿಎಫ್,ಜು.೩:ತಾಲ್ಲೂಕಿನ ವೆಂಗಸಂದ್ರ ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿ ಹಾಗೂ ಅಕ್ರಮ ನಿವೇಶನಗಳ ಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ವೈ. ಸಂಪಂಗಿ ಹಾಲಿ ಶಾಸಕಿ ರೂಪಕಲಾ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು,ಅವುಗಳಿಗೆ ಯಾವುದೇ ವಾಸ್ತವಿಕ ಆಧಾರವಿಲ್ಲ ಎಂದು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ವೆಂಗಸಂದ್ರ ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ವೆಂಗಸಂದ್ರ ಗ್ರಾಮದ ಚಂದ್ರಪ್ಪ ಅವರು ಸುಮಾರು ೧೦೦ ವರ್ಷಗಳಿಂದ ಸ್ವಾಧೀನದಲ್ಲಿರುವ ಜಾಗದಲ್ಲಿ ವಾಸವಿದ್ದು, ಅದರ ಸುತ್ತಮುತ್ತ ಅವರ ಕುಟುಂಬದ ಜಮೀನುಗಳಿವೆ. ಮಧ್ಯಭಾಗದಲ್ಲಿ ಗ್ರಾಮಠಾಣೆ ಜಮೀನು ಇರುವ ಕಾರಣ ೨೦೦೪ರಲ್ಲಿ ಗ್ರಾಮ ಪಂಚಾಯಿತಿಗೆ ಖಾತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಬಳಿಕ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಂಡು ಖಾತೆ ಮಾಡಿಕೊಡಲಾಗಿತ್ತು ಎಂದು ತಿಳಿಸಿದರು.
ಗ್ರಾಮ ಠಾಣೆ ಜಮೀನನ್ನು ನಿವೇಶನಗಳಾಗಿ ರೂಪಿಸಿ ಗ್ರಾಮಸ್ಥರಿಗೆ ಹಂಚಿಕೆ ಮಾಡಬೇಕು,ಚಂದ್ರಪ್ಪಗೆ ನೀಡಿದ್ದ ಖಾತೆಯನ್ನು ರದ್ದುಪಡಿಸಬೇಕು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ್ದು, ಚಂದ್ರಪ್ಪ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದುಕೊಂಡಿದ್ದಾರೆ ಎಂದರು
ಈ ಎಲ್ಲಾ ಬೆಳವಣಿಗೆಗಳು ಬಿಜೆಪಿ ಆಡಳಿತದ ಅವಧಿಯಲ್ಲಿ ಹಾಗೂ ವೈ. ಸಂಪಂಗಿ ಅವರು ಶಾಸಕರಾಗಿದ್ದ ಸಮಯದಲ್ಲೇ ನಡೆದಿದ್ದು, ಈ ಪ್ರಕರಣ ಸರ್ಕಾರ ಮತ್ತು ನ್ಯಾಯಾಲಯದ ವ್ಯಾಪ್ತಿಗೆ ಸಂಬಂಧಪಟ್ಟ ವಿಷಯವಾಗಿದೆ. ಹಾಲಿ ಶಾಸಕಿ ರೂಪಕಲಾಗೆ ಈ ಪ್ರಕರಣದೊಂದಿಗೆ ಯಾವುದೇ ಸಂಬಂಧವಿಲ್ಲ. ಆದರೂ ರಾಜಕೀಯ ದುರುದ್ದೇಶದಿಂದ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಖಂಡಿಸಿದರು.
ಸತ್ಯಾಸತ್ಯತೆ ತಿಳಿದುಕೊಳ್ಳದೆ ಹಾಲಿ ಶಾಸಕಿ ರೂಪಕಲಾ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಆರೋಪ ಮಾಡುವುದು ಸರಿಯಲ್ಲ.ಸಾರ್ವಜನಿಕರನ್ನು ತಪ್ಪುದಾರಿಗೆಳೆಯುವ ಪ್ರಯತ್ನಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ಗ್ರಾಪಂ ಮಾಜಿ ಅಧ್ಯಕ್ಷ ಅಪ್ಪಾಜಿಗೌಡ, ವಿನು ಕಾರ್ತಿಕ್, ಸುನೀತಾ ಚಂದ್ರಶೇಖರ್, ತಾಪಂ ಮಾಜಿ ಅಧ್ಯಕ್ಷ ಜಯರಾಮ್ ರೆಡ್ಡಿ, ಗ್ರಾಪಂ ಉಪಾಧ್ಯಕ್ಷ ರಮೇಶ್, ನಾರಾಯಣಸ್ವಾಮಿ, ರವಿಕುಮಾರ್, ಶಂಕರಪ್ಪ, ಎಪಿಎಂಸಿ ಸದಸ್ಯರಾದ ಯುವರಾಣಿ ವೆಂಕಟಚಲಪತಿ, ಮುರಳಿಕೃಷ್ಣ, ಮುಖಂಡರಾದ ಎಂಬಿಎ ಕೃಷ್ಣಪ್ಪ, ಚಂದ್ರಯ್ಯ, ಕೆಟಿ ಮಂಜು, ಬುಜ್ಜಿ ನಾಗೇಂದ್ರ, ಮುರುಗೇಶ್, ಭಾಸ್ಕರ್, ಮುನಿರತ್ನ, ಬಾಬುರೆಡ್ಡಿ, ವಿಜಿಕುಮಾರ್ ನಟರ್ ವೆಂಕಟಚಲಪತಿ, ಅಣ್ಣಯ್ಯ, ಗಣೇಶ್, ಮಗಿ, ನಾರಾಯಣಪ್ಪ, ಕೃಷ್ಣಪ್ಪ, ಸೇರಿದಂತೆ ವೆಂಗಸಂದ್ರ ಗ್ರಾಮಸ್ಥರಿದ್ದರು.
































