Home ಜಿಲ್ಲೆ ಬೆಂಗಳೂರು ಭೂದಾಖಲೆಗಳ ಕೊಠಡಿಯಲ್ಲಿ ಅನ್ಯ ವ್ಯಕ್ತಿಯಿಂದ ಕಾರ್ಯನಿರ್ವಹಣೆ

ಭೂದಾಖಲೆಗಳ ಕೊಠಡಿಯಲ್ಲಿ ಅನ್ಯ ವ್ಯಕ್ತಿಯಿಂದ ಕಾರ್ಯನಿರ್ವಹಣೆ

ಕನಕಪುರ, ಜು.೦೨:ತಾಲೂಕು ಕಛೇರಿಯಲ್ಲಿ ಹೊರಗಿನ ವ್ಯಕ್ತಿಯೋರ್ವ ಕಳೆದ ಆರೇಳು ವರ್ಷದಿಂದ ಭೂದಾಖಲೆಗಳ ಕೊಠಡಿಯಲ್ಲಿ ಕೆಲಸ ಮಾಡುತಿದ್ದು,ಈತನ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದ ತಹಶೀಲ್ದಾರ್, ಉಪ ತಹಶೀಲ್ದಾರ್‌ರನ್ನು ಕೂಡಲೇ ಅಮಾನತ್ತು ಮಾಡುವಂತೆ ಒತ್ತಾಯಿಸಿ ತಾಲೂಕು ಕಛೇರಿ ಬಳಿ ಪ್ರಗತಿ ಪರ ರೈತ ಸಂಘಟನೆ ಹಾಗೂ ಜಯಕರ್ನಾಟಕ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿದರು.


ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಕಳೆದ ೬-೭ ವರ್ಷದಿಂದ ಸರ್ಕಾರದ ಅಧಿಕೃತವಲ್ಲದ ವ್ಯಕ್ತಿ ಇಲ್ಲಿ ಕಾರ್ಯನಿರ್ವಹಿಸುತಿದ್ದು,ಭೂದಾಖಲೆಗಳನ್ನು ಭೂಮಾಫಿಯಗಳಿಗೆ ನೀಡಿರುವ ಶಂಕೆಯಿದೆ.ಲೋಕಾಯುಕ್ತರು ತಾಲೂಕು ಕಛೇರಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದ ವೇಳೆ ಇದು ಬೆಳಕಿಗೆ ಬಂದಿದೆ.ಆದರೆ ಇಲ್ಲಿಯವರೆಗೆ ತಹಶೀಲ್ದಾರ್‌ಗೆ ತಮ್ಮ ಕಛೇರಿಯ ಸಿಬ್ಬಂದಿಗಳಿಂದ ಏಕೆ ಮಾಹಿತಿ ಪಡೆಯಲಿಲ್ಲ ಎಂದು ಪ್ರಶ್ನಿಸಿದರು.


ತಮ್ಮ ಕಛೇರಿಯಲ್ಲಿ ಸಿಬ್ಬಂದಿಗಳ ಕೊರತೆ ಕಂಡು ಬಂದಲ್ಲಿ ಸರ್ಕಾರಕ್ಕೆ ಮಾಹಿತಿ ನೀಡಿ ನೇಮಕ ಮಾಡಿಕೊಳ್ಳುವುದನ್ನು ಬಿಟ್ಟು ಇಂತಹ ಅನಾಮದೇಯ ವ್ಯಕ್ತಿ ಬಂದು ಸಂಬಳವಿಲ್ಲದೆ ಹೇಗೆ ಭೂ ದಾಖಲೆಗಳ ಕೊಠಡಿಯಲ್ಲಿ ಕೆಲಸ ಮಾಡಲು ಸಾಧ್ಯ?,ತಹಶೀಲ್ದಾರ್, ಉಪ ತಹಶೀಲ್ದಾರ್ ಬಳಿ ತಮ್ಮ ಕಛೇರಿಯಲ್ಲಿ ಯಾವ ಯಾವ ವಿಭಾಗದಲ್ಲಿ ಎಷ್ಟು ಜನ ಕೆಲಸ ಮಾಡುತ್ತಾರೆ ಎಂಬ ಬಗ್ಗೆ ಮಾಹಿತಿ ಇಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು.


ಇದೇ ವೇಳೆ ಉಪ ವಿಭಾಗಾಧಿಕಾರಿ ಬಿನೋಯ್‌ಗೆ ರೈತ ಸಂಘದ ಮುಖಂಡರಾದ ಚೀಲೂರು ಮುನಿರಾಜು, ಜಯಕರ್ನಾಟಕ ಸಂಘಟನೆಯ ಸಂಚಾಲಕ ಕುಮಾರಸ್ವಾಮಿ, ನಗರಸಭಾ ಮಾಜಿ ಸದಸ್ಯ ಸ್ಟುಡಿಯೋ ಚಂದ್ರು ಸೇರಿದಂತೆ ಅನೇಕ ರೈತರು ಮನವಿ ಪತ್ರ ಸಲ್ಲಿಸಿದರು.