Home ಜಿಲ್ಲೆ ಬೆಂಗಳೂರು ಸುದ್ದಿ ಪ್ರಕಟಿಸುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸಿ

ಸುದ್ದಿ ಪ್ರಕಟಿಸುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸಿ

ಶಿಡ್ಲಘಟ್ಟ.ಸೆ,೧೦- ಸುದ್ದಿಯ ಸತ್ಯಾಸತ್ಯತೆ ಪರಿಶೀಲಿಸಿ ವಾಸ್ತವಾಂಶ ಜನರಿಗೆ ತಲುಪಿಸಿ,ಪತ್ರಕರ್ತರು ಯಾವುದೇ ವಿಚಾರವನ್ನು ಸತ್ಯವನ್ನು ಮರೆಮಾಚದೆ.ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ವಾಸ್ತವಾಂಶಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ.ಪತ್ರಿಕೋದ್ಯಮದಲ್ಲಿಧೈರ್ಯ ಅಗತ್ಯವಾದರೂ,ಆ ಧೈರ್ಯದ ಜತೆಗೆ ಸಂಯಮವೂ ಇರಬೇಕು ಎಂದು ಇಂದು ಸಂಜೆ ಸಂಪಾದಕ ಡಾ. ವೈ.ಜಿ.ಪದ್ಮನಾಗರಾಜು ಹೇಳಿದರು.


ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಸಂಪಾದಕರ ಹಾಗೂ ವರದಿಗಾರರ ಸಂಘದ ವತಿಯಿಂದ ಆಯೋಜಿಸಿದ್ದ ಐದನೇ ವರ್ಷದ ವಾರ್ಷಿಕೋತ್ಸವ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ,ಪತ್ರಿಕೋದ್ಯಮದ ಮೇಲಿರುವ ಜನರ ವಿಶ್ವಾಸವನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ಪತ್ರಕರ್ತನ ಜವಾಬ್ದಾರಿಯಾಗಿದೆ ಎಂದರು.


ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಮಾತನಾಡಿ,ಸಮಾಜದಲ್ಲಿನ ಸಮಸ್ಯೆಗಳು, ಜನರ ನೋವು-ನಲಿವು, ಅನ್ಯಾಯ ಹಾಗೂ ಜನಸಾಮಾನ್ಯರ ಧ್ವನಿಯನ್ನು ಆಡಳಿತ ವ್ಯವಸ್ಥೆಯ ಗಮನಕ್ಕೆ ತರುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಎಂದರು.


ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ತಾಲೂಕು ಅಧ್ಯಕ್ಷ ಎಂ.ಎನ್.ನಾಗಭೂಷಣ್ ಮಾತನಾಡಿ,ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಪತ್ರಕರ್ತರು ಶ್ರೀಮಂತ ಕುಟುಂಬಗಳಿಂದ ಬಂದವರಲ್ಲ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಂದ ಬಂದಿರುವವರು ತಮ್ಮ ಜೀವನ ನಿರ್ವಹಣೆಯ ಜವಾಬ್ದಾರಿಯ ನಡುವೆಯೂ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ ನಮ್ಮ ಸೇವೆಯನ್ನು ಸಮಾಜ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.


ತಾಲ್ಲೂಕಿನಲ್ಲಿ ಕರ್ನಾಟಕ ಸಂಪಾದಕರ ಹಾಗೂ ವರದಿಗಾರರ ಸಂಘವು ಐದು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ವಾರ್ಷಿಕೋತ್ಸವ ಹಾಗೂ ಪತ್ರಿಕಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು ಕಾರ್ಯಕ್ರಮದಲ್ಲಿ ಈ ಸಮಾಜಕ್ಕೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿದ ಹಿರಿಯ ರಂಗ ಕಲಾವಿದರು ಮತ್ತು ಪತ್ರಿಕಾ ವಿತರಕರನ್ನು ಗೌರವಿಸಿ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಪಕಿ ಸಮತಾ ದೇಶಪಾಂಡೆ, ಕೆರಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಈ.ಎಸ್. ವಿಶ್ವನಾಥ್, ರಾಜ್ಯ ಖಜಾಂಚಿ ಮುನಿರಾಜ್, ಮಾಜಿ ಶಾಸಕ ಎಂ. ರಾಜಣ್ಣ, ಮಾನವ ಹಕ್ಕುಗಳ ಕಮಿಟಿ ರಾಜ್ಯ ಸಂಸ್ಥಾಪಕಾಧ್ಯಕ್ಷ ಸಿ.ಎಂ. ಬೈರೇಗೌಡ, ಸಮಾಜಸೇವಕ ಹಾಗೂ ರಾಜ್ಯ ರೈತ ಒಕ್ಕೂಟದ ಸಂಚಾಲಕ ಸಿ.ವಿ. ಲೋಕೇಶ್ ಗೌಡ, ಕೊತ್ತನೂರು ಜೆ.ಆರ್. ರವಿಚಂದ್ರ, ಬಿ.ಕೆ. ಅರುಣ್ ಕುಮಾರ್, ಮುನಿ ಕೆಂಪಣ್ಣ, ರಾಮಾಂಜನೇಯ, ವರದರಾಜ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಮಾಜಿ ನಗರಸಭಾ ಸದಸ್ಯರು ಉಪಸ್ಥಿತರಿದ್ದರು.