Home ಜಿಲ್ಲೆ ವೃತ್ತಿ ಧರ್ಮ ಕಾಪಾಡುವುದು ಪತ್ರಕರ್ತರ ಹೊಣೆ : ಶಿವಾನಂದ ತಗಡೂರು

ವೃತ್ತಿ ಧರ್ಮ ಕಾಪಾಡುವುದು ಪತ್ರಕರ್ತರ ಹೊಣೆ : ಶಿವಾನಂದ ತಗಡೂರು

ಯಾದಗಿರಿ: ಜು.೨೯:ಪತ್ರಿಕೋದ್ಯಮದ ಮೇಲೆ ಎಷ್ಟೇ ಟೀಕೆ-ಟಿಪ್ಪಣಿಗಳು ಬಂದರೂ ಪತ್ರಕರ್ತರು ತಮ್ಮ ವೃತ್ತಿ ಧರ್ಮವನ್ನು ಎಂದಿಗೂ ಬಿಟ್ಟುಕೊಡಬಾರದು. ನೈಜ ಪತ್ರಿಕೋದ್ಯಮ ಉಳಿಯಬೇಕಾದರೆ ವೃತ್ತಿಪರ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರು ವೃತ್ತಿ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸಿದಾಗ ಮಾತ್ರ ಸಮಾಜದಲ್ಲಿ ಮಾಧ್ಯಮಗಳ ವಿಶ್ವಾಸ ಉಳಿಯುತ್ತದೆ. ನಕಲಿ ಪತ್ರಕರ್ತರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಅವರಿಗೆ ಕಡಿವಾಣ ಹಾಕುವುದು ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಪತ್ರಿಕಾ ಭವನಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಪತ್ರಕರ್ತರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಸಂಘದ ಪ್ರಮುಖ ಆದ್ಯತೆಯಾಗಬೇಕು ಎಂದು ಹೇಳಿದರು.

ಸಂಘದ ಪದಾಧಿಕಾರಿಗಳಾಗಿ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗದವರು ಗೌರವದಿಂದ ಸ್ಥಾನ ತ್ಯಜಿಸಬಹುದು. ಆದರೆ ಸಂಘದ ವಿರುದ್ಧ ಚಟುವಟಿಕೆ ನಡೆಸುವುದು ಅಥವಾ ಸಂಘದ ಹಿತಾಸಕ್ತಿಗೆ ಧಕ್ಕೆ ತರುವ ವರ್ತನೆ ಸಹಿಸುವುದಿಲ್ಲ. ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಸಂಘದ ಅಧ್ಯಕ್ಷ ಮಲ್ಲಪ್ಪ ಸಂಕೀನ್ ಸವಾಲಿನ ಪರಿಸ್ಥಿತಿಯಲ್ಲೂ ಸಂಘವನ್ನು ಮುನ್ನಡೆಸುತ್ತಿರುವುದನ್ನು ಶ್ಲಾಘಿಸಿದ ಅವರು, ಎಲ್ಲವೂ ಅನುಕೂಲಕರವಾಗಿದ್ದಾಗ ನಾಯಕತ್ವ ವಹಿಸುವುದು ಸುಲಭ. ಆದರೆ ಸಂಕಷ್ಟದ ನಡುವೆ ಸಂಘವನ್ನು ಮುನ್ನಡೆಸುವುದು ನಿಜವಾದ ನಾಯಕತ್ವದ ಲಕ್ಷಣ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ಬಿ. ವೆಂಕಟಸಿAಗ್ ಮಾತನಾಡಿ, ಪತ್ರಿಕಾ ವೃತ್ತಿ ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ತಂಭವಾಗಿದೆ. ಆಡಳಿತ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳು ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಸಂದರ್ಭದಲ್ಲಿ ಪತ್ರಕರ್ತರು ಅತ್ಯಂತ ಜಾಗೃತಿಯಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು.

ನೈಜ ಪತ್ರಕರ್ತರು ಕಡಿಮೆಯಾಗುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯವಾಗಲಿದೆ. ತನಿಖಾ ಪತ್ರಿಕೋದ್ಯಮವನ್ನು ಬಲಪಡಿಸಲು ಮಾಹಿತಿ ಹಕ್ಕು ಕಾಯ್ದೆ ಹಾಗೂ ಮಾಹಿತಿ ಆಯೋಗದ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿ, ಅನೇಕ ಸವಾಲುಗಳ ನಡುವೆಯೂ ಸಂಘವನ್ನು ಮುನ್ನಡೆಸಿಕೊಂಡು ಬಂದಿದ್ದೇನೆ. ಮುಂದೆಯೂ ಪತ್ರಕರ್ತರ ಹಕ್ಕು, ಸೌಲಭ್ಯ ಮತ್ತು ಸಂಘದ ಬಲವರ್ಧನೆಗಾಗಿ ನಿರಂತರ ಹೋರಾಟ ಮುಂದುವರಿಸುತ್ತೇನೆ ಎಂದರು.

ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಮಾರ್ಗದರ್ಶನವೇ ನನ್ನ ಹೋರಾಟಕ್ಕೆ ಸ್ಪೂರ್ತಿಯಾಗಿದೆ. ಅವರ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಸಂಘವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಸಂಕಲ್ಪ ಹೊಂದಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಸಂಘ-ಸAಸ್ಥೆಗಳ ಪ್ರತಿನಿಧಿಗಳು ಹಾಗೂ ಪತ್ರಕರ್ತರು ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ, ಹಿರಿಯ ಪತ್ರಕರ್ತರಾದ ಭವಾನಿಸಿಂಗ್ ಠಾಕೂರ್, ದೇವಿಂದ್ರಪ್ಪ ಕಪನೂರು ಸೇರಿದಂತೆ ಜಿಲ್ಲೆಯ ಹಲವು ಪತ್ರಕರ್ತರು ಉಪಸ್ಥಿತರಿದ್ದರು. ಪತ್ರಕರ್ತ ಸಿದ್ಧರಾಜರೆಡ್ಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


“ಸAಘದ ಪದಾಧಿಕಾರಿಗಳಾಗಿ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗದವರು ರಾಜೀನಾಮೆ ನೀಡಿ ಹೊರಹೋಗಬಹುದು. ಆದರೆ ಸಂಘದ ವಿರುದ್ಧ ನಡವಳಿಕೆ ಅಥವಾ ಚಟುವಟಿಕೆ ನಡೆಸಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು.”ಎಂದರು