
ಧಾರವಾಡ,ಆ೧೩: ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ವತಿಯಿಂದ ೮೦ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಮಕ್ಕಳಲ್ಲಿ ದೇಶಭಕ್ತಿ, ರಾಷ್ಟ್ರಪ್ರೇಮ, ರಾಷ್ಟ್ರೀಯ ಏಕತೆ ಹಾಗೂ ದೇಶದ ಬಗ್ಗೆ ಹೆಮ್ಮೆ ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ದೇಶಭಕ್ತಿ ನೃತ್ಯ ಸ್ಪರ್ಧೆಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಅಡಿವೇಶ ಇಟಗಿ ಅವರು ಉದ್ಘಾಟಿಸಿ, ಮಾತನಾಡಿ, ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ದೇಶದ ಬಗ್ಗೆ ಪ್ರೀತಿ, ಗೌರವ ಮತ್ತು ಜವಾಬ್ದಾರಿಯ ಭಾವನೆಯನ್ನು ಬೆಳೆಸುವುದು ಅತ್ಯಂತ ಅಗತ್ಯ. ಕಲೆ, ಸಂಗೀತ ಮತ್ತು ನೃತ್ಯದ ಮೂಲಕ ಮಕ್ಕಳ ಮನಸ್ಸಿನಲ್ಲಿ ದೇಶಭಕ್ತಿಯ ಭಾವನೆಯನ್ನು ಪರಿಣಾಮಕಾರಿಯಾಗಿ ಮೂಡಿಸಬಹುದು. ಇಂತಹ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಯನ್ನು ಗುರುತಿಸುವುದರ ಜೊತೆಗೆ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.
ಇಂದಿನ ಮಕ್ಕಳು ನಾಳಿನ ಭಾರತದ ಭವಿಷ್ಯ. ಅವರ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಿ, ಉತ್ತಮ ನಾಗರಿಕರಾಗಿ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಯೋಜನಾಧಿಕಾರಿ ವಿರೂಪಾಕ್ಷಗೌಡ ಪಾಟೀಲ ಅವರು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿ, ದೇಶಭಕ್ತಿ ಎನ್ನುವುದು ಕೇವಲ ಘೋಷಣೆಗಳಿಗೆ ಸೀಮಿತವಾಗಿರದೆ, ದೇಶದ ಬಗ್ಗೆ ಕಾಳಜಿ, ಕರ್ತವ್ಯ ಪ್ರಜ್ಞೆ, ಶಿಸ್ತು ಮತ್ತು ಉತ್ತಮ ನಾಗರಿಕರಾಗಿ ಬದುಕುವ ಮನೋಭಾವವನ್ನು ಒಳಗೊಂಡಿದೆ. ಮಕ್ಕಳ ಕಲಾ ಪ್ರತಿಭೆಯ ಮೂಲಕ ಈ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ದೇಶಭಕ್ತಿ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ವಿವಿಧ ಶಾಲೆಗಳ ಮಕ್ಕಳು ಅತ್ಯಂತ ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಸಂತಸದ ಸಂಗತಿ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಹಾಗೂ ಸೃಜನಶೀಲತೆಯನ್ನು ಬೆಳೆಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಅವರು ಹೇಳಿದರು.
ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ಮಕ್ಕಳು ದೇಶಭಕ್ತಿ ಗೀತೆಗಳಿಗೆ ಆಕರ್ಷಕ ನೃತ್ಯ ಪ್ರದರ್ಶನ ನೀಡುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಮಕ್ಕಳ ಉತ್ಸಾಹಭರಿತ ಪ್ರದರ್ಶನಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಪ್ರಥಮ ಬಹುಮಾನ: ನೇತಾಜಿ ಸುಭಾಶ್ಚಂದ್ರ ಆವಾಸಿಯಾ ವಿದ್ಯಾಲಯ, ಘಂಟೀಕೇರಿ ಹುಬ್ಬಳ್ಳಿ, ದ್ವಿತೀಯ ಬಹುಮಾನ: ಜೀವ್ಹೇಶ್ವರ ಬಾಲಕಿಯರ, ಪ್ರೌಢ ಶಾಲೆ ಹಳೇ ಹುಬ್ಬಳ್ಳಿ ಅರವಿಂದನಗರ, ತೃತೀಯ ಬಹುಮಾನ: ಆhಚಿಡಿತಿಚಿಜ iಟಿಣeಡಿಟಿಚಿಣioಟಿಚಿಟ ಖesiಜeಟಿಣiಚಿಟ Sಛಿhooಟ Siಟಿgಚಿಟಿಚಿhಚಿಟi, ಸಮಾಧಾನಕರ ಬಹುಮಾನ: ಮೊರಾರ್ಜಿ ದೇಸಾಯಿ ವಸತಿ ಶಾಲೆ ತಿಮ್ಮಾಪುರ, ತಾ|| ಧಾರವಾಡ, ಸಮಾಧಾನಕರ ಬಹುಮಾನ: ಕಿತ್ತೂರು ರಾಣಿ ಚೆನ್ನಮ್ಮ, ರೇಸಿಡೆನ್ಸಿಯಲ್ ಸ್ಕೂಲ್ ಬೆಟದೂರ ಅವರಿಗೆ ನೀಡಲಾಯಿತು.
ಕಾರ್ಯಕ್ರಮದ ಪಿ.ಎಸ್.ಅನ್ನಪೂರ್ಣ ಸಂಗಳದ ಅವರು ನಿರೂಪಿಸಿದರು. ನೀತಾ ವಂದಿಸಿದರು. ನೃತ್ಯದ ತೀರ್ಪುಗಾರರಾಗಿ ಸುನಂದಾ, ಹೇಮಾ ಶೆಟ್ಟಿ, ಪ್ರಕಾಶ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕರು, ಮಕ್ಕಳು, ಪೋಷಕರು ಹಾಗೂ ವಿವಿಧ ಶಾಲೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.






























