Home ಜಿಲ್ಲೆ ಕಲಬುರಗಿ ಉಡುಪಿ ಶ್ರೀಕೃಷ್ಣ ಮಠ ಮಧ್ವಾಚಾರ್ಯರ ಭಕ್ತಿಪರಂಪರೆಯ ಹೆಮ್ಮೆಯ ಸಂಕೇತ: ವಿನುತ ಜೋಶಿ

ಉಡುಪಿ ಶ್ರೀಕೃಷ್ಣ ಮಠ ಮಧ್ವಾಚಾರ್ಯರ ಭಕ್ತಿಪರಂಪರೆಯ ಹೆಮ್ಮೆಯ ಸಂಕೇತ: ವಿನುತ ಜೋಶಿ

ಕಲಬುರಗಿ: ನಗರದ ಕರುಣೇಶ್ವರ ನಗರದಲ್ಲಿರುವ ಶ್ರೀ ಜೈ ವೀರ ಹನುಮಾನ್ ಮಂದಿರದಲ್ಲಿ ಶ್ರೀಮನ್ ಮಧ್ವಾಚಾರ್ಯ ಜಯಂತಿಯ ಅಂಗವಾಗಿ, ಶ್ರೀ ಜೈ ವೀರ ಹನುಮಾನ್ ಪಾರಾಯಣ ಸಂಘದ ವತಿಯಿಂದ ವಿಶೇಷ ಪಾರಾಯಣ ಹಾಗೂ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯರಾದ ಶ್ರೀನಿವಾಸ ಕುಲಕರ್ಣಿ ಅವರು, ಉಡುಪಿಯ ಪಾಜಕ ಕ್ಷೇತ್ರದಲ್ಲಿ ಮಧ್ಯಗೇಹ ಭಟ್ಟರು ಮತ್ತು ವೇದಾವತಿ ದಂಪತಿಗಳ ಪುಣ್ಯಗರ್ಭದಲ್ಲಿ ವಿಜಯದಶಮಿಯ ಪವಿತ್ರ ದಿನದಂದು ವಾಸುದೇವನಾಗಿ ಜನಿಸಿದ ಶ್ರೀಮಧ್ವಾಚಾರ್ಯರ ಬಾಲ್ಯವು ಅನೇಕ ಅಲೌಕಿಕ ಘಟನೆಗಳಿಂದ ಕೂಡಿತ್ತು. ತಂದೆಯ ಸಾಲ ತೀರಿಸಲು ಹುಣಸೆ ಬೀಜಗಳನ್ನು ಚಿನ್ನದ ನಾಣ್ಯಗಳನ್ನಾಗಿ ಪರಿವರ್ತಿಸಿದ ಪ್ರಸಂಗವನ್ನು ಸ್ಮರಿಸಿದ ಅವರು, ಆಚಾರ್ಯರ ಜೀವನ, ತತ್ತ್ವಸಿದ್ಧಾಂತ ಹಾಗೂ ಆದರ್ಶಗಳ ಕುರಿತು ವಿವರಿಸಿದರು.

ಪಾರಾಯಣ ಸಂಘದ ಕಾರ್ಯದರ್ಶಿ ವಿನುತ ಜೋಶಿ ಮಾತನಾಡಿ, ಉಡುಪಿಯ ಶ್ರೀಕೃಷ್ಣ ಮಠದ ಸ್ಥಾಪನೆ ಮಧ್ವಾಚಾರ್ಯರ ಭಕ್ತಿ ಪರಂಪರೆಯ ಮಹತ್ವದ ಮೈಲಿಗಲ್ಲಾಗಿದೆ. ಮಲ್ಪೆಯ ಕಡಲತೀರದಲ್ಲಿ ಚಂಡಮಾರುತಕ್ಕೆ ಸಿಲುಕಿದ್ದ ನಾವಿಕನ ಹಡಗನ್ನು ರಕ್ಷಿಸಿದ ಆಚಾರ್ಯರು, ಪ್ರತಿಯಾಗಿ ಪಡೆದ ಗೋಪಿಚಂದನದ ಮುದ್ದೆಯೊಳಗಿದ್ದ ಕಡಗೋಲು ಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದ ಪರಂಪರೆಯನ್ನು ವಿವರಿಸಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಅವಿನಾಶ್ ಕುಲಕರ್ಣಿ, ಲಕ್ಷ್ಮಿಕಾಂತರಾವ್ ಕುಲಕರ್ಣಿ, ಕಿಶನರಾವ್ ಕುಲಕರ್ಣಿ, ಶಂಕರರಾವ್ ಸಿಂದಗಿಕರ್, ಸಮೀರ್ ಕುಲಕರ್ಣಿ, ರಾಘವೇಂದ್ರ ಜೋಶಿ, ಸುನಿಲ್ ಕುಲಕರ್ಣಿ, ಶಾಮರಾವ್ ಕುಲಕರ್ಣಿ, ಪ್ರಧಾನ ಅರ್ಚಕ ಶ್ರೀ ಪ್ರದ್ಯುಮ್ನಾಚಾರ್ಯ ಜೋಶಿ ಹಾಗೂ ವ್ಯವಸ್ಥಾಪಕ ಚಂದ್ರಕಾಂತ ಕಡೆಗಂಚಿ ಸೇರಿದಂತೆ ಇತರರು ಉಪಸ್ಥಿತರಿದ್ದರು.