
ಕಲಬುರಗಿ ಅ 22:ನಗರದ ಅಡ್ವೋಕೇಟ್ಸ್ ಕಾಲೊನಿಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಕಳೆದ ಒಂಬತ್ತು ದಿನಗಳಿಂದ ನಡೆಯುತ್ತಿದ್ದ ಗುಡ್ಡಾಪುರದ ದಾನಮ್ಮ ದೇವಿಯ ಜೀವನ ದರ್ಶನ ಕುರಿತ ಪುರಾಣ ಪ್ರವಚನವು ಮಂಗಳಗೊಂಡಿತು. ನರೋಣಾ ಹಾಗೂ ಗೋಳಾದ ಹೊಸಮಠದ ಪೂಜ್ಯ ಚನ್ನಮಲ್ಲ ಸ್ವಾಮಿಗಳು ಪ್ರವಚನ ನೀಡಿ ಭಕ್ತಸಮೂಹವನ್ನು ಆಶೀರ್ವದಿಸಿದರು. ಯೋಗಿಗಳು ಹಾಗೂ ಮಹಾತ್ಮರು ತಿಳಿಸಿರುವಂತೆ ಈ ಭೂಮಿಯ ಮೇಲಿನ ದೇಹವು ನಶ್ವರವಾಗಿದ್ದು, ಮರಣ ಬಂದರೆ ಯಾರನ್ನೂ ಬಿಡುವುದಿಲ್ಲ ಎಂದರು. ಆನೆ, ಕುದುರೆ, ಬಂಡಿ, ಭಂಡಾರ ಎಷ್ಟೇ ಇದ್ದರೂ ಮನುಷ್ಯ ಉಣ್ಣುವುದು ಕೇವಲ ಪಡಿಯಕ್ಕಿ ಹಾಗೂ ಮಲಗುವುದು ಅರ್ಧಮಂಚದ ಮೇಲೆ ಎಂಬುದನ್ನು ಅರಿತು ಅಹಂಕಾರವಿಲ್ಲದೆ ಬದುಕಬೇಕು ಎಂದು ನುಡಿದರು.
ಸುಂದರ ಜೀವನಕ್ಕಾಗಿ ಕೆಲವು ಪ್ರಮುಖ ಸೂತ್ರಗಳನ್ನು ವಿವರಿಸಿದ ಅವರು, ಬಾಳಿನಲ್ಲಿ ಏಕತೆ, ಜೀವನದಲ್ಲಿ ಶಾಂತತೆ, ಬದುಕಿನಲ್ಲಿ ಮಮತೆ ಹಾಗೂ ಮಾತಿನಲ್ಲಿ ಮಧುರತೆ ಇರಬೇಕು ಎಂದು ತಿಳಿಸಿದರು.ಈ ಭಕ್ತಿಪೂರ್ವಕ ಕಾರ್ಯಕ್ರಮದಲ್ಲಿ ಗವಾಯಿ ಗಳಾದ ಚೇತನ ಹಿರೇಮಠ ಅವರು ಅಡ್ವೋಕೇಟ್ ಕಾಲನಿಯ ಶ್ರೀ ಮಹಾಲಕ್ಷ್ಮೀ ದೇವಿಯ ಕುರಿತ ಗೀತೆಯನ್ನು ರಚಿಸಿ, ಸಂಗೀತ ಸಂಯೋಜಿಸಿ ಹಾಡಿದ್ದು ವಿಶೇಷ. ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟ್ ವತಿಯಿಂದ ದಾನಮ್ಮ ದೇವಿಯ ತೊಟ್ಟಿಲು ಹಾಗೂ ಬೆಳ್ಳಿಯಲಿಂಗದ ಹರಾಜು ಪ್ರಕ್ರಿಯೆ ಜರುಗಿತು. ಭಕ್ತರಾದ ಮಹೇಶವಾಲಿ ಅವರು ರೂ. 11,011 ಗಳಿಗೆ ಬೆಳ್ಳಿಯ ತೊಟ್ಟಿಲನ್ನು ಪಡೆದುಕೊಂಡರೆ, ಸಂತೋಷ್ ಪಾಟೀಲ್ ಅವರು ರೂ. 5,011 ಗಳಿಗೆ ಬೆಳ್ಳಿಯ ಲಿಂಗವನ್ನು ಭಕ್ತಿಯಿಂದ ಪಡೆದುಕೊಂಡರು. ಸಮಾರಂಭದ ಆಗಮಿಸಿದ್ದ ಎಲ್ಲ ಮಹಿಳೆಯರಿಗೆ ಪೂಜ್ಯರಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.ಆರಂಭದಲ್ಲಿ ಸೋಮಶೇಖರ ಎಸ್ ರುಳಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ಮಂಜುನಾಥ ಜೇವರ್ಗಿ ಅವರು ವಂದಿಸಿದರು.























