
ಕಲಬುರಗಿ : ಕಲಬುರಗಿ ಪಟ್ಟಣ ಕ್ರಾಸ್ನಲ್ಲಿರುವ ಅಜೀಂ ಪ್ರೇಮ್ಜಿ ಶಾಲೆಯಲ್ಲಿ ನವೆಂಬರ್ 13 ಮತ್ತು 14ರಂದು ಎರಡು ದಿನಗಳ ಕಾಲ ಮಕ್ಕಳ ವಿಶೇಷ ಕಲಿಕಾ ಮೇಳವನ್ನು ಅತ್ಯಂತ ಸಂಭ್ರಮದಿಂದ ಆಯೋಜಿಸಲಾಯಿತು.
ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ, ಸೃಜನಶೀಲತೆ, ಆತ್ಮವಿಶ್ವಾಸ, ಸಂವಹನ ಕೌಶಲ ಹಾಗೂ ಪ್ರಾಯೋಗಿಕ ಜ್ಞಾನವನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಕಲಿಕಾ ಮೇಳದಲ್ಲಿ ಕನ್ನಡ, ಇಂಗ್ಲಿμï, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಹಿಂದಿ, ಕ್ರೀಡೆ, ಸಂಗೀತ, ಚಿತ್ರಕಲೆ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ವೈವಿಧ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಶೇಷ ಆಕರ್ಷಣೆಯಾಗಿ ಜಾನಪದ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಎರಡು ದಿನಗಳ ಕಾಲ ಶಾಲೆಯ ಆವರಣವು ಜಾತ್ರೆಯ ವಾತಾವರಣವನ್ನು ನೆನಪಿಸುವಂತೆ ಕಂಗೊಳಿಸಿತು. ವಿದ್ಯಾರ್ಥಿಗಳು ತಾವು ಕಲಿತ ವಿಷಯಗಳನ್ನು ಮಾದರಿಗಳು, ಪ್ರಯೋಗಗಳು, ಆಟಗಳು, ಚಿತ್ರಗಳು, ಸಂಭಾಷಣೆಗಳು ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ಪ್ರದರ್ಶಿಸಿ ನೋಡುಗರ ಗಮನ ಸೆಳೆದರು. ವಿಶೇಷವಾಗಿ ಪಠ್ಯಪುಸ್ತಕದ ಕಲಿಕೆಯನ್ನು ನೈಜ ಜೀವನದ ಅನುಭವಗಳೊಂದಿಗೆ ಬೆಸೆಯುವ ಪ್ರಯತ್ನ ಈ ಮೇಳದಲ್ಲಿ ಎದ್ದು ಕಾಣುತ್ತಿತ್ತು.
ನವೆಂಬರ್ 13ರಂದು ನರ್ಸರಿ, ಎಲ್ಕೆಜಿ, ಯುಕೆಜಿ ಹಾಗೂ ಒಂದನೇ ಮತ್ತು ಎರಡನೇ ತರಗತಿಯ ಪುಟಾಣಿಗಳಿಗಾಗಿ ಕಲಿಕಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಪುಟಾಣಿ ಮಕ್ಕಳು ಉತ್ಸಾಹದಿಂದ ವಿವಿಧ ಆಟಗಳು, ಕಲಿಕಾ ಮಾದರಿಗಳು ಹಾಗೂ ವಿಷಯಾಧಾರಿತ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ನವೆಂಬರ್ 14ರಂದು ಮೂರರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಷಯವಾರು ಕಲಿಕಾ ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಪ್ರತಿಯೊಂದು ವಿಷಯದಲ್ಲಿಯೂ ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಸ್ವತಃ ವಿವರಿಸುವ ಮೂಲಕ ವಿಶೇಷ ಗಮನ ಸೆಳೆದರು. ಇಂಗ್ಲಿμï ಭಾμÉಯಲ್ಲಿ ನೆರಳುಗಳ ಕುರಿತು ಮಾತನಾಡುವುದು, ತಾವು ಕಲಿತ ಪರಿಕಲ್ಪನೆಗಳನ್ನು ಸರಳವಾಗಿ ವಿವರಿಸುವುದು, ಗಣಿತದ ಪರಿಕಲ್ಪನೆಗಳನ್ನು ಆಟಗಳ ಮೂಲಕ ತಿಳಿಸುವುದು, ವಿಜ್ಞಾನ ಪ್ರಯೋಗಗಳು ಹಾಗೂ ಸಮಾಜ ವಿಜ್ಞಾನದ ಮಾದರಿಗಳ ಮೂಲಕ ವಿಷಯಗಳನ್ನು ಪ್ರಸ್ತುತಪಡಿಸುವುದು ಮೇಳದ ಪ್ರಮುಖ ಆಕರ್ಷಣೆಗಳಾಗಿದ್ದವು.
ವಿಶೇಷವಾಗಿ ಜಾನಪದ ವಸ್ತುಗಳ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು. ನಮ್ಮ ಗ್ರಾಮೀಣ ಬದುಕಿನಲ್ಲಿ ಬಳಕೆಯಲ್ಲಿದ್ದ ಕಲಿಗಲ್ಲು, ಪಡ್ಡುಕಲ್ಲು ಸೇರಿದಂತೆ ವಿವಿಧ ಸಾಂಪ್ರದಾಯಿಕ ವಸ್ತುಗಳನ್ನು ಪ್ರದರ್ಶಿಸಿ ಅವುಗಳ ಬಳಕೆ, ಮಹತ್ವ ಹಾಗೂ ಸಾಂಸ್ಕøತಿಕ ಹಿನ್ನೆಲೆಯನ್ನು ವಿದ್ಯಾರ್ಥಿಗಳು ವಿವರಿಸಿದರು. ಆಧುನಿಕ ಜೀವನಶೈಲಿಯಲ್ಲಿ ಮರೆಯಾಗುತ್ತಿರುವ ಗ್ರಾಮೀಣ ಬದುಕಿನ ಪರಿಕರಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ಮೂಲಕ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಮಹತ್ವದ ಪ್ರಯತ್ನ ನಡೆಯಿತು.
ಈ ಕಲಿಕಾ ಮೇಳವನ್ನು ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿಜಯಕುಮಾರ್ ಜಮಖಂಡಿ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪಟ್ಟಣ ಕ್ಲಸ್ಟರ್ನ ಮುಖ್ಯೋಪಾಧ್ಯಾಯರು, ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ರಾಜಶ್ರೀ ನಾಯಕ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು.
ಕಾರ್ಯಕ್ರಮದ ಯಶಸ್ಸಿನಲ್ಲಿ ಶಾಲೆಯ ಶಿಕ್ಷಕರಾದ ರಮೇಶ್ ಮಾರನಾಳ, ಶಿವಶರಣಪ್ಪ, ಮಿಥಾಲಿ ನಾಯಕ್, ಶ್ರುತಿ, ಮಹಾಂತೇಶ್, ವಿದ್ಯಾಶ್ರೀ, ಶ್ರೀದೇವಿ ಸೇರಿದಂತೆ ಶಾಲೆಯ ಎಲ್ಲ ಶಿಕ್ಷಕರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಶಿಕ್ಷಕರು ಮಕ್ಕಳೊಂದಿಗೆ ಬೆರೆತು ಚಟುವಟಿಕೆಗಳನ್ನು ರೂಪಿಸುವುದು, ಮಾರ್ಗದರ್ಶನ ನೀಡುವುದು ಹಾಗೂ ವಿದ್ಯಾರ್ಥಿಗಳಲ್ಲಿ ಕಲಿಕೆಯ ಉತ್ಸಾಹ ತುಂಬುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು.




















