
ಬೆಂಗಳೂರು,ಜೂ.೧೪- ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ತೊಗರಿಘಟ್ಟ ಗ್ರಾಮದಲ್ಲಿ ನಡೆದಿದೆ.
ಮನೆಯಲ್ಲಿ ಪೋಷಕರು ಇಲ್ಲದಿದ್ದಾಗ ಆಟ ಆಡಲು ಹೋಗಿದ್ದ ದಕ್ಷಾ(೧೧), ಧನುಷ್(೪) ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದು, ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಕ್ಕಳು ಮೃತಪಟ್ಟಿರುವ ಕೃಷಿ ಹೊಂಡ ರೈತ ಗುರುಮೂರ್ತಿ ಅವರಿಗೆ ಸೇರಿದ್ದು, ಇದಕ್ಕೆ ಕನಿಷ್ಠ ಬೇಲಿಯನ್ನೂ ಹಾಕಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಗುರುಮೂರ್ತಿ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಫೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಕೃಷಿ ಹೊಂಡ, ಕೆರೆ, ಸಂಪ್ ಮುಂತಾದವುಗಳಿಗೆ ಬಿದ್ದು ಮಕ್ಕಳೇ ಬಲಿಯಾಗುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿವೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರದಲ್ಲಿ ಮನೆ ಮುಂದಿನ ನೀರಿನ ಸಂಪ್‌ಗೆ ಬಿದ್ದು ೨ ವರ್ಷದ ಮಗು ಮೃತಪಟ್ಟಿರುವ ಘಟನೆ ನಿನ್ನೆ ವರದಿಯಾಗಿತ್ತು. ಅತ್ತ ಬಾಗಲಕೋಟೆಯಲ್ಲಿಯೂ ನೀರಿನ ಟ್ಯಾಂಕ್‌ನಲ್ಲಿ ಮುಳುಗಿ ೧೮ ತಿಂಗಳ ಹೆಣ್ಣು ಮಗು ದಾರುಣ ಅಂತ್ಯ ಕಂಡ ಘಟನೆ ಜೂನ್ ೮ರಂದು ನಡೆದಿತ್ತು. ಈ ಘಟನೆಗಳು ಮಾಸುವ ಮುನ್ನವೇ ಮತ್ತೊಂದು ದುರಂತವೀಗ ರಾಜ್ಯದಲ್ಲಿ ನಡೆದಿರುವುದು ಆತಂಕ ಹೆಚ್ಚಿಸಿದೆ.





























