
ಬೆಂಗಳೂರು.ಜೂ೧೪: “ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ, ವರ್ಷದಿಂದ ವರ್ಷಕ್ಕೆ ಭಾರತವು ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುನ್ನಡೆಯುತ್ತಿದೆ” ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ನಡೆದ ಬಿಜೆಪಿಯ ’ವಿಕಸಿತ ಭಾರತ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.ಕಳೆದ ಹಣಕಾಸು ವರ್ಷದಲ್ಲಿ (೨೦೨೫-೨೬) ಭಾರತದ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಪ್ರಗತಿ ದರವು ಶೇ. ೭.೭ ಕ್ಕೆ ಏರಿಕೆಯಾಗಿದೆ. ಇದು ಅದರ ಹಿಂದಿನ ವರ್ಷ ದಾಖಲಾಗಿದ್ದ ಶೇ. ೭.೧ ಕ್ಕಿಂತ ಗಣನೀಯ ಪ್ರಮಾಣದ ಪ್ರಗತಿಯನ್ನು ತೋರಿಸುತ್ತದೆ. ಇನ್ನು ಪ್ರಸಕ್ತ ಸಾಲಿನ ಜನವರಿ-ಮಾರ್ಚ್ ಅವಧಿಯ ನಾಲ್ಕನೇ ತ್ರೈಮಾಸಿಕದಲ್ಲಿ ಆರ್ಥಿಕತೆಯು ಶೇ. ೭.೮ ರಷ್ಟು ಪ್ರಗತಿ ಸಾಧಿಸಿದೆ. ಬ್ಲೂಮ್‌ಬರ್ಗ್‌ನಂತಹ ಜಾಗತಿಕ ಆರ್ಥಿಕ ತಜ್ಞರು ಅಂದಾಜಿಸಿದ್ದ ಶೇ. ೭.೩ ರ ಮುನ್ಸೂಚನೆಗಿಂತಲೂ ಭಾರತದ ನೈಜ ಸಾಧನೆ ಹೆಚ್ವಾಗಿರುವುದು ದೇಶದ ಸುಸ್ಥಿರ ಆರ್ಥಿಕತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಪಶ್ಚಿಮ ಏಷ್ಯಾ (ಮಧ್ಯಪ್ರಾಚ್ಯ) ಪ್ರಾಂತ್ಯದಲ್ಲಿ ಇರಾನ್ ಸಂಘರ್ಷ ಸೇರಿದಂತೆ ಜಾಗತಿಕ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ವ್ಯಾಪಾರ ವಹಿವಾಟಿನ ಮೇಲಿನ ಒತ್ತಡಗಳು ಭಾರತದ ಆರ್ಥಿಕತೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆಗಳಿವೆ. ಇಂತಹ ಸವಾಲುಗಳ ನಡುವೆಯೂ ಭಾರತ ತನ್ನ ಆರ್ಥಿಕ ಸುಸ್ಥಿರತೆಯನ್ನು ಕಾಯ್ದುಕೊಂಡಿದೆ.
ಹೆಚ್ಚುತ್ತಿರುವ ಜಾಗತಿಕ ತೈಲ ಬೆಲೆ ಹಾಗೂ ಹಣದುಬ್ಬರದ ಭೀತಿಯ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮುಂದಿನ ಆರ್ಥಿಕ ವರ್ಷದ ಬೆಳವಣಿಗೆಯ ದರವನ್ನು ಶೇ. ೬.೬ ಕ್ಕೆ ಅಂದಾಜಿಸಿದೆ. ಆದಾಗ್ಯೂ, ದೇಶದಲ್ಲಿ ಮ್ಯಾಕ್ರೋ-ಎಕನಾಮಿಕ್ ಸ್ಥಿರತೆ ಮತ್ತು ಪೂರೈಕೆ ವ್ಯವಸ್ಥೆಯ ಸುಧಾರಣೆಗಳು ಮುಂದುವರಿದರೆ, ೨೦೨೮ರ ವೇಳೆಗೆ ಭಾರತವು ಮತ್ತೆ ಶೇ. ೭ ಕ್ಕಿಂತ ಹೆಚ್ಚಿನ ಪ್ರಗತಿ ದರಕ್ಕೆ ಮರಳಲಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ತಿಳಿಸಿದ್ದಾರೆ.





























