
ಬೆಂಗಳೂರು, ಜೂ. ೧೪- ಬಿಡದಿಯ ಟೌನ್‌ಶಿಪ್ ರಾಜ್ಯದ ಹಿತಾಸಕ್ತಿಯ ಯೋಜನೆಯಲ್ಲ, ಭೂಗಳ್ಳರು ಹಾಗೂ ರಿಯಲ್ ಎಸ್ಟೇಟ್ ಮಾಫಿಯಾಗೆ ನೆರವಾಗುವ ಯೋಜನೆ ಎಂದು ದೂರಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಗುಜರಾತ್‌ನಲ್ಲಿ ಪ್ರಧಾನಿ ಮೋದಿಯವರು ಬಂಜರು ಭೂಮಿಯಲ್ಲಿ ಟೌನ್‌ಶಿಪ್ ಮಾಡಿದ್ದಾರೆ. ಅದಕ್ಕೂ ಇದಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ. ಕಾನೂನಿನ ವ್ಯಾಪ್ತಿಯಲ್ಲಿ ಏನೆಲ್ಲಾ ಹೋರಾಟಗಳನ್ನು ನಡೆಸಬಹುದೋ ಅವುಗಳನ್ನು ನಡೆಸಿ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ ಎಂದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ಬಿಡದಿ ಟೌನ್‌ಶಿಪ್‌ನ್ನು ಪ್ರಧಾನಿಗಳು ಮೆಚ್ಚಿದ್ದಾರೆ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಿ ಮೋದಿಯವರು ಗುಜರಾತ್‌ನಲ್ಲಿ ಒಣ ಭೂಮಿ ಹಾಗೂ ಬಂಜರು ಭೂಮಿಯಲ್ಲಿ ಟೌನ್‌ಶಿಪ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ ಬಿಡದಿಯಲ್ಲಿ ಟೌನ್‌ಶಿಪ್ ನಿರ್ಮಾಣ ಮಾಡುತ್ತಿರುವುದು ಫಲವತ್ತಾದ ಭೂಮಿಯಲ್ಲಿ. ಈ ಬಗ್ಗೆ ಪ್ರಧಾನಿ ಮೋದಿಯವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೋ ಗೊತ್ತಿಲ್ಲ. ಇವರು ಏನು ಹೇಳಿದ್ದಾರೋ, ಅವರು ಏನು ಹೇಳಿದ್ದಾರೋ ಯಾರಿಗೆ ಗೊತ್ತು ಎಂದರು.
ಬಿಡದಿ ಟೌನ್‌ಶಿಫ್ ಕುಮಾರಸ್ವಾಮಿಯವರ ಕೂಸು, ಅದನ್ನು ನಾನು ಮುಂದುವರೆಸುತ್ತಿದ್ದೇನೆ ಎಂದು ಶಿವಕುಮಾರ್ ಹೇಳುತ್ತಿದ್ದಾರೆ. ನಾನು ಆ ಯೋಜನೆ ರೂಪಿಸಿದ್ದು ೨೦೦೬ ರಲ್ಲಿ. ಈಗ ೨೦೨೬. ೨೦ ವರ್ಷದಲ್ಲಿ ಏನೆಲ್ಲಾ ಆಗಿದ್ದೆ ಎಂಬುದನ್ನು ಗಮನ ಹರಿಸಬೇಕು. ಹಣ ಮಾಡುವ ಉದ್ದೇಶದಿಂದ ರೈತರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ. ಬಿಡದಿ ಟೌನ್‌ಶಿಪ್ ಜಾಗ ಫಲವತ್ತಾದ ಭೂಮಿ. ಅಲ್ಲಿ ತೆಂಗು, ಅಡಿಕೆ, ರೇಷ್ಮೆ ಕೃಷಿ ಇದೆ. ಜತೆಗೆ ಹೈನುಗಾರಿಕೆಯೂ ನಡೆದಿದೆ. ಹೀಗಿರುವಾಗ ಹಠಕ್ಕೆ ಬಿದ್ದು ಅಲ್ಲಿ ಟೌನ್‌ಶಿಪ್ ಮಾಡುವುದು ಒಳ್ಳೆಯದಲ್ಲ ಎಂದರು.
ಈ ಟೌನ್‌ಶಿಪ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಾನು ಕಾನೂನು ಹೋರಾಟ ಮಾಡುತ್ತೇನೆ. ಈ ಟೌನ್‌ಶಿಪ್ ನಿರ್ಮಾಣದ ಉದ್ದೇಶ, ಟೌನ್ ಶಿಪ್ ನಿರ್ಮಾಣ ಮಾಡಲು ಇರಬೇಕಾದ ಷರತ್ತುಗಳು ಎಲ್ಲವೂ ನನಗೆ ಗೊತ್ತಿದೆ. ಕಾನೂನು ವ್ಯಾಪ್ತಿಯಲ್ಲಿ ಇದನ್ನು ಪ್ರಶ್ನಿಸುತ್ತೇವೆ ಎಂದರು.
ಈ ಹಿಂದೆ ನಾನು ಟೌನ್‌ಶಿಪ್ ನಿರ್ಮಾಣ ಮಾಡಲು ಹೊರಟಾಗ ಇದೇ ಕಾಂಗ್ರೆಸ್ ಈ ಯೋಜನೆಗಳು ಹಣ ಮಾಡುವ ಯೋಜನೆಗಳು ಎಂದು ಟೀಕಿಸಿ, ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿತ್ತು. ಆ ವರದಿಯೂ ಇದೆ. ಈಗ ಮಾತ್ರ ಇವರ ಲಾಭಕ್ಕೆ ಎಲ್ಲವನ್ನು ಮೂಲೆಗೆ ತಳ್ಳಿ ಟೌನ್‌ಶಿಪ್ ನಿರ್ಮಾಣ ಮಾಡುವುದು ಸರಿಯಲ್ಲ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಗುಡುಗಿದರು.
ಈ ಹಿಂದೆ ನೈಸ್ ಯೋಜನೆ ಮಾಡಿದಾಗ ಅರ್ಕಾವತಿ ಬಡಾವಣೆ ಮಾಡಿದಾಗ ಏನೆಲ್ಲಾ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಬಿಡದಿಯ ಟೌನ್‌ಶಿಪ್ ವಿಚಾರದಲ್ಲಿ ಸದ್ಯದಲ್ಲೇ ದಾಖಲೆಯ ಸಮೇತ ಎಲ್ಲವನ್ನು ಜನರ ಮುಂದಿಡುತ್ತೇನೆ. ಕಾನೂನು ಹೋರಾಟವನ್ನು ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.





























