
ಗದಗ,ಜು.೩೦: ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಮತ್ತು ಗರ್ಭೀಣಿಯರ ಪೌಷ್ಠಿಕತೆಯ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್.ನೀಲಗುಂದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಗರ್ಭಿಣಿಯರ ಅಪೌಷ್ಠಿಕತೆಯನ್ನು ಹೊಗಲಾಡಿಸುವಲ್ಲಿ ಸರಕಾರಿ ಇಲಾಖೆಗಳ ಪಾತ್ರ ಬಹಳ ಮುಖ್ಯವಾಗಿದ್ದು, ಈ ಮೂಲಕ ಗರ್ಭೀಣಿಯರ ರಕ್ತಹೀನತೆಯನ್ನು ಕಡಿಮೆ ಮಾಡುವ ನಿಟ್ಟಿಯಲ್ಲಿ ಎಲ್ಲರ ಸಹಕಾರವೂ ಇಲ್ಲಿ ಅವಶ್ಯವಾಗಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶ್ರೀಮತಿ ಜಯಶ್ರೀ ಆರ್ ಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಉಪನಿರ್ದೇಶಕರಾದ ಶ್ರೀಮತಿ ರಾಧಾ ಜಿ ಮಣ್ಣೂರ ಮಾತನಾಡಿ ತರಬೇತಿಯನ್ನು ಸದುಪಯೋಗ ಪಡಿಸಿಕೊಂಡು ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಂತೆ ಎಲ್ಲರಿಗೂ ಸಲಹೆಯನ್ನು ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಐಪಿಇ ಗ್ಲೋಬಲ್ ಜಿಲ್ಲಾ ಬೆಂಬಲ ವ್ಯವಸ್ಥಾಪಕರಾದ ಯಲ್ಲಪ್ಪ ಕೆ ಇವರು ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಮತ್ತು ಗರ್ಭೀಣಿಯರ ಪೌಷ್ಠಿಕತೆಯ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಹಾಯಕ ಶಿಶುಅಭಿವೃದ್ಧಿ ಯೋಜನಾಧಿಕಾರಿಗಳು, ಹಿರಿಯ ಮೇಲ್ವಿಚಾರಕಿಯರು, ಮೇಲ್ವಿಚಾರಕಿಯರು, ಪೋಷಣ ಅಭಿಯಾನ ಯೋಜನೆಯ ತಾಲೂಕು ಸಂಯೋಜಕರು ಹಾಗೂ ಸಿಬ್ಬಂದಿಯವರು ಹಾಜರಿದ್ದರು.
ಮೇಲ್ವಿಚಾರಕಿ ಶ್ರೀಮತಿ ರೇಣುಕಾ ಚಂದ್ರಣ್ಣವರ ಪ್ರಾರ್ಥಿಸಿದರು. ಜಿಲ್ಲಾ ನಿರೂಪಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಸ್ವಾಗತಿಸಿದರು. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಜಿಲ್ಲಾ ಸಂಯೋಜಕರಾದ ಶ್ರೀಮತಿ ನೇತ್ರಾ ಹರ್ತಿ ಇವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು






























