
ಲಕ್ಷೆ÷್ಮÃಶ್ವರ,ಆ.೨೦: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಟೊಮೆಟೊ ಸೇರಿದಂತೆ ತೋಟಗಾರಿಕಾ ಬೆಳೆಗಳನ್ನು ಬೆಳೆದಿರುವ ರೈತರು ಇದೀಗ ಬೆಲೆ ಕುಸಿತದಿಂದ ಕಣ್ಣೀರು ಸುರಿಸುವಂತಾಗಿದೆ. ಈಗಾಗಲೇ ಬರದ ಬಿಸಿ ಅನುಭವಿಸುತ್ತಿರುವ ರೈತರಿಗೆ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಿರುವುದು ಮತ್ತೊಂದು ಸಂಕಷ್ಟ ತಂದೊಡ್ಡಿದೆ.
ಈ ಬಾರಿ ರೈತರು ಮೆಕ್ಕೆಜೋಳ, ಹೆಸರು, ಶೇಂಗಾ ಬೆಳೆಗಳ ಜೊತೆಗೆ ತೋಟಗಾರಿಕಾ ಬೆಳೆಗಳತ್ತ ಹೆಚ್ಚಿನ ಆಸಕ್ತಿ ತೋರಿಸಿ ಟೊಮೆಟೊ, ಬದನೆಕಾಯಿ, ಹೀರೇಕಾಯಿ, ಸೌತೆಕಾಯಿ, ಚವಳಿ ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ಬೆಳೆದಿದ್ದರು. ಉತ್ತಮ ಬೆಲೆ ದೊರೆಯುವ ನಿರೀಕ್ಷೆಯಲ್ಲಿದ್ದ ರೈತರಿಗೆ ಇದೀಗ ಮಾರುಕಟ್ಟೆಯಲ್ಲಿನ ದಿಢೀರ್ ಬೆಲೆ ಕುಸಿತ ಆಘಾತ ನೀಡಿದೆ.
ವಿಶೇಷವಾಗಿ ಟೊಮೆಟೊ ಬೆಲೆ ತೀವ್ರವಾಗಿ ಕುಸಿದಿದ್ದು, ೩೦ರಿಂದ ೪೦ ಕೆ.ಜಿ. ತೂಕದ ಒಂದು ಹರಾಜಿಗೆ ಕೇವಲ ?೫೦ರಿಂದ ?೧೦೦ರವರೆಗೆ ಬೆಲೆ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬೆಲೆಗೆ ಟೊಮೆಟೊ ಮಾರಾಟ ಮಾಡಿದರೆ ಬೀಜ, ಗೊಬ್ಬರ, ಔಷಧ, ನೀರಾವರಿ, ಕೂಲಿ ಹಾಗೂ ಸಾಗಾಟದ ವೆಚ್ಚವನ್ನೂ ಭರಿಸಲು ಸಾಧ್ಯವಾಗದಂತಾಗಿದೆ.
ಟೊಮೆಟೊವನ್ನು ಪ್ರತಿನಿತ್ಯ ಮಾರುಕಟ್ಟೆಗೆ ಸಾಗಿಸದಿದ್ದರೆ ಹಣ್ಣುಗಳು ಮಾಗಿಹೋಗಿ ಕೊಳೆಯುವ ಸ್ಥಿತಿ ನಿರ್ಮಾಣವಾಗುತ್ತಿದೆ. ಪರಿಣಾಮವಾಗಿ ರೈತರು ಅನಿವಾರ್ಯವಾಗಿ ಕಡಿಮೆ ಬೆಲೆಗೆ ಬೆಳೆಯನ್ನು ಮಾರಾಟ ಮಾಡಬೇಕಾಗಿದೆ. ಇನ್ನು ಹೀರೇಕಾಯಿ, ಸೌತೆಕಾಯಿ, ಬದನೆಕಾಯಿ ಸೇರಿದಂತೆ ಉಳಿದ ತರಕಾರಿ ಬೆಳೆಗಳಿಗೂ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ.
ಮತ್ತೊಂದೆಡೆ ಹವಾಮಾನ ವೈಪರೀತ್ಯದಿಂದ ಬಳ್ಳಿಯಲ್ಲಿ ಬೆಳೆಯುವ ತರಕಾರಿ ಬೆಳೆಗಳಿಗೆ ಕೀಟಬಾಧೆ ಹೆಚ್ಚಾಗಿದ್ದು, ರೈತರು ಬೆಳೆ ರಕ್ಷಣೆಗೂ ಹೆಚ್ಚಿನ ಹಣ ಖರ್ಚು ಮಾಡಬೇಕಾಗಿದೆ. ಬೆಲೆ ಕುಸಿತ ಹಾಗೂ ಉತ್ಪಾದನಾ ವೆಚ್ಚದ ಏರಿಕೆಯಿಂದ ರೈತರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.
ಬರಗಾಲದಂತಹ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಬರಬೇಕಿದ್ದು, ಬೆಳೆ ವಿಮೆ, ಮಧ್ಯಂತರ ಪರಿಹಾರ ಹಾಗೂ ಬೆಳೆಹಾನಿ ಪರಿಹಾರವನ್ನು ತ್ವರಿತವಾಗಿ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಟೊಮೆಟೊ ಸೇರಿದಂತೆ ತರಕಾರಿ ಬೆಳೆಗಳಿಗೆ ಬೆಂಬಲ ಬೆಲೆ ಅಥವಾ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ, ಸಂಕಷ್ಟದಲ್ಲಿರುವ ರೈತರನ್ನು ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಭಾರತೀಯ ಕಿಸಾನ್ ಸಂಘದ ಚನ್ನಪ್ಪ ಷಣ್ಮುಖಿ ಪ್ರತಿಕ್ರಿಯೆ ನೀಡಿ ರೈತರ ಉತ್ಪನ್ನಗಳು ಬಂದಾಗ ಮುಕ್ತ ಮಾರುಕಟ್ಟೆಯಲ್ಲಿ ಏಕಾಏಕಿ ಬೆಲೆಗಳು ಕುಸಿದು ರೈತರು ಕಣ್ಣೀರು ಸುರಿಸುತ್ತಿದ್ದರು ಸರ್ಕಾರ ರೈತರ ನೋಡುತ್ತಿಲ್ಲ. ಪ್ರತಿಯೊಂದು ಕೃಷಿ ಬೆಳಗು ಬೆಂಬಲ ಬೆಲೆ ಘೋಷಿಸಿದ್ದರು ಯಾವುದೇ ಕೇಂದ್ರಗಳು ತೆರೆಯುವುದೇ ಇಲ್ಲ ಇನ್ನು ತೋಟಗಾರಿಕಾ ಬೆಲೆಗಳ ಸ್ಥಿತಿಯಂತೂ ಪಾತಾಳ ಕಂಡಿದೆ ಅದಾಗಿಯೂ ಸಹ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದಿರುವುದು ವಿಷಾದನೀಯ ಎಂದಿದ್ದಾರೆ.































