Home ಜಿಲ್ಲೆ ಕಲಬುರಗಿ ತಮ್ಮ ಅಸಹಾಯಕತೆಗೆ ಕೇಂದ್ರದ ಮೇಲೆ ಬೊಟ್ಟು ಮಾಡುವುದು ಬಿಟ್ಟು ಸತ್ಯ ಹೇಳಲಿ: ಸುಭಾಷ ಗುತ್ತೇದಾರ

ತಮ್ಮ ಅಸಹಾಯಕತೆಗೆ ಕೇಂದ್ರದ ಮೇಲೆ ಬೊಟ್ಟು ಮಾಡುವುದು ಬಿಟ್ಟು ಸತ್ಯ ಹೇಳಲಿ: ಸುಭಾಷ ಗುತ್ತೇದಾರ

ಕಲಬುರಗಿ:ತಮ್ಮ ಅಸಹಾಯಕತೆಯನ್ನು ವಿರೋಧ ಪಕ್ಷಗಳ ಮೇಲೆ ಹಾಕುವುದು ಹಾಗೂ ಪ್ರತಿಯೊಂದು ವಿಚಾರಕ್ಕೂ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವುದು ಆಡಳಿತ ಶಾಸಕರ ಚಾಳಿಯಾಗಿದೆ ಎಂದು ಮಾಜಿ ಶಾಸಕ ಸುಭಾμï ಆರ್. ಗುತ್ತೇದಾರ ಅವರು ಶಾಸಕ ಬಿ.ಆರ್. ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಶಾಸಕ ಬಿ ಆರ್ ಪಾಟೀಲರ ಪತ್ರಿಕಾ ಹೇಳಕೆಗೆ ತಿರುಗೇಟು ನೀಡಿರುವ ಅವರು, ಬೆಳೆ ವಿಮೆ ವಿಚಾರದಲ್ಲಿ ಜನರನ್ನು ದಾರಿ ತಪ್ಪಿಸುವ ರೀತಿಯಲ್ಲಿ ಹೇಳಿಕೆ ನೀಡಲಾಗುತ್ತಿದೆ. ಬರ ಘೋಷಣೆಯನ್ನು ರಾಜ್ಯ ಸರ್ಕಾರ ಮಾಡಿಲ್ಲ, ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರವೇ ಆಗಿದೆ ಎಂದು ಹೇಳುವವರು, ಒಂದೇ ವಾರದಲ್ಲಿ ಆ ಮಾನದಂಡಗಳು ಹೇಗೆ ಬದಲಾದವು? ಎಂಬುದನ್ನು ಜನರಿಗೆ ಸ್ಪಷ್ಟಪಡಿಸಬೇಕು. ಕೇಂದ್ರದ ಮಾನದಂಡಗಳೇ ಅಂತಿಮವಾಗಿದ್ದರೆ, ಇಷ್ಟು ಕಡಿಮೆ ಅವಧಿಯಲ್ಲಿ ಅವುಗಳಲ್ಲಿ ಬದಲಾವಣೆ ಸಾಧ್ಯವಾಯಿತೇ ಎಂಬುದನ್ನೂ ವಿವರಿಸಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ತಮ್ಮ ದ್ರಾಕ್ಷಿ ಬೆಳೆಗೆ ಬೆಳೆ ವಿಮೆ ಬಂದಂತೆ, ಬಿ ಆರ್ ಪಾಟೀಲ ಕುಟುಂಬದವರಾದ ಕಲ್ಯಾಣರಾವ ಪಾಟೀಲ ಅವರ ದ್ರಾಕ್ಷಿ ಬೆಳೆಗೂ ವಿಮೆ ದೊರೆತಿತ್ತು. ಈ ವಾಸ್ತವಾಂಶವನ್ನು ತಿಳಿದುಕೊಂಡು ಮಾತನಾಡಬೇಕು. ರೈತರ ವಿಚಾರದಲ್ಲಿ ರಾಜಕೀಯ ಮಾಡದೆ ವಾಸ್ತವಾಂಶಗಳನ್ನು ಜನರ ಮುಂದೆ ಇಡಬೇಕು ಎಂದು ಗುತ್ತೇದಾರ ಹೇಳಿದ್ದಾರೆ.
ಆಳಂದ ಅಭಿವೃದ್ಧಿಗೆ ನನ್ನ ಅವಧಿಯಲ್ಲೇ ಅಡಿಪಾಯ
ಆಳಂದ ಪಟ್ಟಣದ ಅಗಲೀಕರಣ ಕಾರ್ಯಕ್ಕೆ ತಮ್ಮ ಅವಧಿಯಲ್ಲೇ ₹11 ಕೋಟಿ ಮಂಜೂರು ಮಾಡಿಸಲಾಗಿತ್ತು. ಪಟ್ಟಣದ ಬಸ್ ನಿಲ್ದಾಣ ಕಾಮಗಾರಿಯೂ ತಮ್ಮ ಶಾಸಕತ್ವದ ಅವಧಿಯಲ್ಲೇ ಮಂಜೂರಾಗಿತ್ತು. ಪ್ರಸ್ತುತ ಸ್ಥಳಾವಕಾಶ ಸಾಲುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರಿಂದ, ನಗರಕ್ಕೆ ಸಮೀಪವಿರುವ ಸೂಕ್ತ ಸ್ಥಳದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸುವ ಕುರಿತು ಯೋಜನೆ ರೂಪಿಸಲಾಗಿತ್ತು. ಆದರೆ ಅಷ್ಟರಲ್ಲಿ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ಕಾಮಗಾರಿ ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಮ್ಮ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ದಾಖಲೆಗಳೊಂದಿಗೆ ಮಾತನಾಡಲು ತಾವು ಸಿದ್ಧರಿದ್ದು, ಜನರ ಮುಂದೆ ಸತ್ಯಾಸತ್ಯತೆ ಚರ್ಚೆಯಾಗಲಿ ಎಂದು ಸವಾಲು ಹಾಕಿದರು.
ಬರ ಘೋಷಣೆಯಲ್ಲಿ ದ್ವಂದ್ವ ನಿಲುವು ಏಕೆ?
ಬರ ಘೋಷಣೆ ವಿಚಾರದಲ್ಲಿ ಆಡಳಿತ ಪಕ್ಷದವರು ಈಗಲೂ ದ್ವಂದ್ವ ನಿಲುವು ಹೊಂದಿದ್ದಾರೆ. ಒಂದು ಕಡೆ ಕೇಂದ್ರದ ಮಾನದಂಡಗಳನ್ನು ಮುಂದಿಟ್ಟುಕೊಂಡು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದೆಡೆ ಜನರ ಒತ್ತಡ ಹೆಚ್ಚಾದಾಗ ಕೇಂದ್ರದ ಕಡೆ ಬೆರಳು ತೋರಿಸುತ್ತಿದ್ದಾರೆ. ಈ ದ್ವಂದ್ವ ನಿಲುವನ್ನು ಜನತೆ ಗಮನಿಸುತ್ತಿದ್ದಾರೆ ಎಂದು ಗುತ್ತೇದಾರ ಹೇಳಿದ್ದಾರೆ.
ಸತ್ಯಾಗ್ರಹದ ಹೆಸರಿನಲ್ಲಿ ರಾಜಕೀಯ ಪ್ರಚಾರ: ಗುತ್ತೇದಾರ ಟೀಕೆ
ಆರ್.ಕೆ. ಪಾಟೀಲ ಅವರು ಸ್ವಯಂ ಘೋಷಿತ ನಾಯಕನಾಗಿ ಹೊರಹೊಮ್ಮುವ ಉದ್ದೇಶದಿಂದ ಸತ್ಯಾಗ್ರಹದ ಹೆಸರಿನಲ್ಲಿ ರಾಜಕೀಯ ನಾಟಕ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಸತ್ಯಾಗ್ರಹ ನಡೆಯಬೇಕಾದ ಸ್ಥಳದಲ್ಲಿ ಭಜನೆ, ನೃತ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ನಡೆಯುತ್ತಿರುವುದು ಹೋರಾಟದ ಗಂಭೀರತೆಯನ್ನೇ ಪ್ರಶ್ನಿಸುವಂತಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಭಾರಿ ಪ್ರಮಾಣದಲ್ಲಿ ಹಣ ಖರ್ಚು ಮಾಡಿ ತಮ್ಮನ್ನು ನಾಯಕನಾಗಿ ಬಿಂಬಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದರ ಹಿಂದೆ ತಮ್ಮ ಚಿಕ್ಕಪ್ಪ ಹಾಗೂ ಹಾಲಿ ಶಾಸಕ ಬಿ.ಆರ್. ಪಾಟೀಲ ಅವರನ್ನು ರಾಜಕೀಯವಾಗಿ ದೂರ ಸರಿಸುವ ಉದ್ದೇಶವಿದೆ ಎಂದು ಅಲ್ಲಿಗೆ ಹೋಗಿ ಬಂದ ಅವರ ಪಕ್ಷದ ಮುಖಂಡರು ಮತ್ತು ನಮ್ಮ ಹಿತೈಷಿಗಳಾಗಿರುವ ಕೆಲವರು ತಿಳಿಸಿದ್ದಾರೆ ಎಂದು ಸುಭಾμï ಗುತ್ತೇದಾರ ಹೇಳಿದ್ದಾರೆ.
ಜನಪರ ವಿಚಾರಗಳಲ್ಲಿ ನಿಜವಾದ ಹೋರಾಟ ಮಾಡುವ ಬದಲು ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಸರಿಯಲ್ಲ. ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದೇ ನಿಜವಾದ ನಾಯಕತ್ವ. ಸಾಮಾಜಿಕ ಜಾಲತಾಣದ ಪ್ರಚಾರದಿಂದ ನಾಯಕತ್ವ ಸೃಷ್ಟಿಯಾಗುವುದಿಲ್ಲ; ಜನರ ವಿಶ್ವಾಸ ಮತ್ತು ನಿರಂತರ ಜನಸೇವೆಯಿಂದ ನಾಯಕತ್ವ ನಿರ್ಮಾಣವಾಗುತ್ತದೆ ಎಂದು ಅವರು ಹೇಳಿದ್ದಾರೆ.
“ಕೇಂದ್ರದ ಮೇಲೆ ಆರೋಪ ಮಾಡುವುದಕ್ಕೂ ಮೊದಲು ರಾಜ್ಯ ಸರ್ಕಾರದ ಜವಾಬ್ದಾರಿಯನ್ನು ನಿಭಾಯಿಸಿ. ಹಿಂದಿನ ಸರ್ಕಾರಗಳು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುವಾಗ ದಾಖಲೆಗಳನ್ನು ಪರಿಶೀಲಿಸಿ. ರೈತರು, ಜನರು ಮತ್ತು ಆಳಂದದ ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯಕ್ಕಿಂತ ವಾಸ್ತವಾಂಶಗಳಿಗೆ ಆದ್ಯತೆ ನೀಡಿ” ಎಂದು ಸುಭಾμï ಆರ್. ಗುತ್ತೇದಾರ ಆಗ್ರಹಿಸಿದ್ದಾರೆ.
ತಾವು ಶಾಸಕರಾಗಿದ್ದಾಗ 2022ರಲ್ಲಿ ಬರಗಾಲದ ಪರಿಹಾರವಾಗಿ ಎರಡು ಬಾರಿ ತೊಗರಿ ನೆಟೆ ರೋಗ ಆದಾಗ ಸೇರಿದಂತೆ ರೈತರಿಗೆ ಹೆಚ್ಚಿನ ಪರಿಹಾರದ ಮೊತ್ತ ದೊರಕಿಸಿಕೊಡಲು ಯಶಸ್ವಿಯಾಗಿರುತ್ತೇನೆ. ನಮ್ಮ ಅವಧಿಯಲ್ಲಿ ಅತಿ ಹೆಚ್ಚು ಬೆಳೆ ದೊರಕಿಸಿ ಕೊಟ್ಟಿದ್ದು ಇತಿಹಾಸವಾಗಿರುತ್ತದೆ.
ಪ್ರಸ್ತುತ ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಕಳೆದರೂ ಕೂಡ ಇಲ್ಲಿಯವರೆಗೆ ಬರಗಾಲದ ಪರಿಹಾರ ರೈತರಿಗೆ ನಿಮ್ಮಿಂದ ಏಕೆ ಕೊಡಲಾಗುತ್ತಿಲ್ಲ?. ಒಂದು ವೇಳೆ ತಾಲ್ಲೂಕಿಗೆ ನೀವು ಹೆಚ್ಚಿನ ಬೆಳೆ ವಿಮೆ ಮಂಜೂರು ಮಾಡಿಸಿದ್ದು ನಿಜವಾದರೆ ಉಳಿದ 9 ಗ್ರಾಮ ಪಂಚಾಯಿತಿಗಳಿಗೆ ಶೂನ್ಯ ವಿಮೆ ಆಗಲೂ ನೀವೇ ಕಾರಣೀಭೂತರಲ್ಲವೇ?.
ಬರಗಾಲ ಘೋಷಣೆ ಮಾಡಿ ನಾಟಕ ಮಾಡಿದರೆ ರೈತರ ಹೊಟ್ಟೆ ತುಂಬುವುದಿಲ್ಲ. ವಾಸ್ತವಿಕವಾಗಿ ರೈತರ ಬ್ಯಾಂಕ್ ಖಾತೆಗೆ ಪ್ರತಿ ಎಕರೆಗೆ ರೂಪಾಯಿ 50,000 ಜಮಾ ಮಾಡಿದಾಗ ಮಾತ್ರ ಸಂತೋಷವಾಗಿರಲು ಸಾಧ್ಯವಾಗುತ್ತದೆ.
ಈಗಾಗಲೇ ನಿಮ್ಮ ನಿಜವಾದ ಮುಖವಾಡ ಕಳಚಿ ಬಿದ್ದಿರುವುದು ತಾಲೂಕಿನಲ್ಲಿ ಜನರು ಚರ್ಚಿಸುತ್ತಿದ್ದಾರೆ. ಶಾಸಕರಾಗಿ ಮೂರು ವರ್ಷಗಳ ವರೆಗೆ ಯಾರಿಗೂ ಸಿಗದೆ ಬೆಂಗಳೂರಿನಲ್ಲಿ ಕಾಲ ಕಳೆದು ತಮಗೆ ಮಂತ್ರಿ ಸ್ಥಾನ ಸಿಗದಿದ್ದಕ್ಕೆ ತಾಲೂಕಿನಲ್ಲಿ ಬಂದು ಅಪ್ಪ-ಮಕ್ಕಳು ಮಾಡುತ್ತಿರುವ ನಾಟಕಗಳನ್ನು ನೋಡಿ ಜನರು ನಗಾಡುತ್ತಿದ್ದಾರೆ.
ಖಜೂರಿಯಿಂದ ಆಳಂದವರೆಗೆ ನಾವುಗಳು ಮಾಡಿರುವ ಪಾದಯಾತ್ರೆ ರಾಜಕೀಯವಲ್ಲ ಭೀಕರ ಬರಗಾಲದ ವಾಸ್ತವಿಕ ಸತ್ಯ ಸಂಗತಿಯಾಗಿರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.