Home ಜಿಲ್ಲೆ ಕಲಬುರಗಿ ಶಿಕ್ಷಣದಿಂದ ವ್ಯಕ್ತಿಯ ಉನ್ನತಿ, ಜ್ಞಾನದಿಂದ ಅಜ್ಞಾನ ಮತ್ತು ಬಡತನದ ನಿವಾರಣೆ: ಡಾ. ಸಿದ್ಧಲಿಂಗ ಶ್ರೀಗಳ ಆಶಯ...

ಶಿಕ್ಷಣದಿಂದ ವ್ಯಕ್ತಿಯ ಉನ್ನತಿ, ಜ್ಞಾನದಿಂದ ಅಜ್ಞಾನ ಮತ್ತು ಬಡತನದ ನಿವಾರಣೆ: ಡಾ. ಸಿದ್ಧಲಿಂಗ ಶ್ರೀಗಳ ಆಶಯ ಸ್ಮರಣೆ

ಗದಗ: ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು 1976ರಲ್ಲಿ ಸ್ಥಾಪಿಸಿದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಗದಗ ನಗರದಲ್ಲಿ ನಿರ್ಮಿಸಲಾದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸುವರ್ಣಸೌಧದ ಲೋಕಾರ್ಪಣೆ ಸಮಾರಂಭವು ಸಂಭ್ರಮದಿಂದ ನೆರವೇರಿತು.

ಬೆಂಗಳೂರಿನ ನಿವೃತ್ತ ಗೃಹ ಕಾರ್ಯದರ್ಶಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಎಂ. ಜಾಮದಾರ ಅವರು ಸುವರ್ಣಸೌಧದ ಕಟ್ಟಡವನ್ನು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿ, ಸುವರ್ಣಸೌಧದ ಉದ್ಘಾಟನೆಯು ಐತಿಹಾಸಿಕ ಕ್ಷಣವಾಗಿದೆ. ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಶಿಕ್ಷಣಕ್ಕೆ ಅಪಾರ ಮಹತ್ವ ನೀಡಿದ್ದರು. ಶಿಕ್ಷಣದಿಂದಲೇ ವ್ಯಕ್ತಿಯ ಉನ್ನತಿ ಸಾಧ್ಯ ಎಂಬುದು ಅವರ ದೃಢವಾದ ನಂಬಿಕೆಯಾಗಿತ್ತು ಎಂದು ಸ್ಮರಿಸಿದರು.

ಜ್ಞಾನದಿಂದ ಅಜ್ಞಾನ ಮತ್ತು ಬಡತನವನ್ನು ದೂರ ಮಾಡಬಹುದು ಎಂಬ ಸಂದೇಶವನ್ನು ಸಿದ್ಧಲಿಂಗ ಮಹಾಸ್ವಾಮಿಗಳು ಸಾರುತ್ತಿದ್ದರು. ಶಿಕ್ಷಣವು ಕೇವಲ ಪದವಿ ಪಡೆಯುವ ಸಾಧನವಲ್ಲ; ಅದು ವ್ಯಕ್ತಿಯ ಬದುಕನ್ನು ರೂಪಿಸುವ ಹಾಗೂ ಸಮಾಜದ ಪ್ರಗತಿಗೆ ದಾರಿಯಾಗುವ ಶಕ್ತಿಯಾಗಿದೆ ಎಂಬುದನ್ನು ಅವರು ತಮ್ಮ ಕಾರ್ಯಗಳ ಮೂಲಕ ತೋರಿಸಿಕೊಟ್ಟಿದ್ದರು ಎಂದು ಹೇಳಿದರು.

ಯುವಜನರು ಉದ್ಯೋಗಕ್ಕಾಗಿ ಇತರರನ್ನು ಅವಲಂಬಿಸದೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ ಸಿದ್ಧಲಿಂಗ ಮಹಾಸ್ವಾಮಿಗಳು ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಿ, ಜನರು ಕೌಶಲ್ಯಗಳನ್ನು ಕಲಿತು ಸ್ವಯಂ ಉದ್ಯೋಗಿಗಳಾಗಲು ಅವಕಾಶ ಕಲ್ಪಿಸಿದ್ದರು. ಅವರ ಈ ಜನಪರ ಚಿಂತನೆ ಮತ್ತು ಸೇವಾ ಕಾರ್ಯಗಳು ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆಯಾಗಿವೆ ಎಂದು ತಿಳಿಸಿದರು.

ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಸುವರ್ಣ ಮಹೋತ್ಸವದ ಅಂಗವಾಗಿ ನಿರ್ಮಿಸಲಾದ ಸುವರ್ಣಸೌಧವು ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಶೈಕ್ಷಣಿಕ ದೂರದೃಷ್ಟಿ, ಸಮಾಜಮುಖಿ ಚಿಂತನೆ ಹಾಗೂ ಜನಸೇವೆಯ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸ್ಮಾರಕವಾಗಿದೆ. ಪೂಜ್ಯರ ಜೀವನಾದರ್ಶಗಳನ್ನು ಸ್ಮರಿಸುವ ಈ ಐತಿಹಾಸಿಕ ಕಟ್ಟಡವು ವಿದ್ಯಾಪೀಠದ ಐದು ದಶಕಗಳ ಸೇವಾ ಪರಂಪರೆಗೆ ಸಾಕ್ಷಿಯಾಗಿ ನಿಲ್ಲಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖರು, ಮಠಾಧೀಶರು, ಕಾರ್ಯದರ್ಶಿಗಳಾದ ಪೆÇ್ರ ಎಸ್ ಎಸ್ ಪಟ್ಟಣ್ ಶೆಟ್ಟರ್ ಸೇರಿ ಮುಂತಾದವರು ಹಾಜರಿದ್ದರು.