Home ಜಿಲ್ಲೆ ಶಿಕ್ಷಕ ವೃತ್ತಿ ಸಮಾಜ ನಿರ್ಮಾಣದ ಪವಿತ್ರ ಹೊಣೆಗಾರಿಕೆ- ಭಾಗೇಶ ಮುರುಡಿ

ಶಿಕ್ಷಕ ವೃತ್ತಿ ಸಮಾಜ ನಿರ್ಮಾಣದ ಪವಿತ್ರ ಹೊಣೆಗಾರಿಕೆ- ಭಾಗೇಶ ಮುರುಡಿ

ಸಂಜೆವಾಣಿ ವಾರ್ತೆ,
ವಿಜಯಪುರ, ಅ. ೧: ಶಿಕ್ಷಕ ವೃತ್ತಿ ಕೇವಲ ಉದ್ಯೋಗವಲ್ಲ; ಅದು ಸಮಾಜ ನಿರ್ಮಾಣದ ಪವಿತ್ರ ಹೊಣೆಗಾರಿಕೆಯಾಗಿದೆ ಎಂದು ಸಾಹಿತಿ ಭಾಗೇಶ ಮುರುಡಿ ಹೇಳಿದರು.
ನಗರದ ಬಿ.ಡಿ.ಬಿ.ವಿ.ವಿ. ಸಂಘದ ಬಂಜಾರ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಹಾಗೂ ದೀಪದಾನ ಸಮಾರಂಭದಲ್ಲಿ ಮಾತನಾಡಿದ ಅವರು, ತರಬೇತಿ ಅವಧಿಯಲ್ಲಿ ಗಳಿಸಿದ ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳನ್ನು ವೃತ್ತಿಜೀವನದಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸಬೇಕು ಎಂದರು.
ಅತಿಥಿ ಆರ್.ಆರ್. ರಾಟೋಡ ಮಾತನಾಡಿ, ಬುದ್ಧಿ, ವಿನಯ ಮತ್ತು ವಿವೇಕವನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಿ.ಎಲ್. ಚವ್ಹಾಣ ಮಾತನಾಡಿ, ಬಿ.ಎಡ್. ತರಬೇತಿಯಲ್ಲಿ ಪಡೆದ ಅನುಭವಗಳು ಮುಂದಿನ ವೃತ್ತಿಜೀವನಕ್ಕೆ ಭದ್ರ ಬುನಾದಿಯಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಭಾಗ್ಯ ಪೂಜಾರಿ ಹಾಗೂ ಜ್ಯೋತಿ ಬೇನೂರ ಅವರನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯೆ ಡಾ. ಜಯಶ್ರೀ ಎನ್. ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಅನೀಶ ಜಮಖಂಡಿ ವರದಿ ವಾಚಿಸಿದರು. ಪ್ರೊ. ಅಮರೇಶ ಸಾಲಕ್ಕಿ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿ ಶಂಕರ ಹುಣಸಗಿ ನಿರೂಪಿಸಿದರು.
ಉಪಪ್ರಾಚಾರ್ಯ ಟಿ.ಬಿ. ಪವಾರ, ಪ್ರೊ. ಎಸ್.ಎಂ. ಕುಂಬಾರ, ಪ್ರೊ. ಸಿ.ಎಸ್. ಮಾಳಗಿ, ಡಾ. ಮಹಾನಂದ ದೊಡ್ಡಣ್ಣವರ, ಬಿ.ಎಲ್. ಚವ್ಹಾಣ ಸೇರಿದಂತೆ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.