Home ಜಿಲ್ಲೆ ಒಂದೇ ದಿನದಲ್ಲಿ ೩,೦೫೧ ಉಳಿತಾಯ ಖಾತೆ: ವಿಜಯಪುರ ಅಂಚೆ ಇಲಾಖೆಯ ಐತಿಹಾಸಿಕ ಸಾಧನೆ

ಒಂದೇ ದಿನದಲ್ಲಿ ೩,೦೫೧ ಉಳಿತಾಯ ಖಾತೆ: ವಿಜಯಪುರ ಅಂಚೆ ಇಲಾಖೆಯ ಐತಿಹಾಸಿಕ ಸಾಧನೆ

ಸಂಜೆವಾಣಿ ವಾರ್ತೆ,
ವಿಜಯಪುರ, ಅ. ೧: ಒಂದೇ ದಿನದಲ್ಲಿ ೩,೦೫೧ ಉಳಿತಾಯ ಖಾತೆಗಳನ್ನು ತೆರೆಯುವ ಮೂಲಕ ವಿಜಯಪುರ ಪ್ರಧಾನ ಅಂಚೆ ಕಚೇರಿ ಗಮನಾರ್ಹ ಸಾಧನೆ ಮಾಡಿದೆ ಎಂದು ಸಹಾಯಕ ಅಂಚೆ ಅಧೀಕ್ಷಕ ಬಿ.ಎಸ್. ದಾಸರ ಹೇಳಿದರು.
ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಸೋಮವಾರ ನಡೆದ ಸಾಧನೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜಯಪುರದ ಜನತೆ ಮನಸ್ಸು ಮಾಡಿದರೆ ಜಗತ್ಪ್ರಸಿದ್ಧ ಗೋಳಗುಮ್ಮಟ ನಿರ್ಮಿಸಿದಂತೆ ಸಾಧನೆಯ ಹೊಸ ಪುಟಗಳನ್ನು ತೆರೆಯಬಲ್ಲರು ಎಂಬುದಕ್ಕೆ ಈ ಸಾಧನೆ ಸಾಕ್ಷಿಯಾಗಿದೆ ಎಂದರು.
ಜನರಿಗೆ ಉತ್ತಮ ಸೇವೆ ನೀಡುವಲ್ಲಿ ಅಂಚೆ ಇಲಾಖೆ ಸದಾ ಮುಂಚೂಣಿಯಲ್ಲಿದೆ. ದೇಶದ ಪ್ರತಿಯೊಬ್ಬ ನಾಗರಿಕರೂ ಅಂಚೆ ಇಲಾಖೆಯ ಉಳಿತಾಯ ಖಾತೆ ಹೊಂದಬೇಕು ಎಂಬ ಉದ್ದೇಶದಿಂದ ದೇಶಾದ್ಯಂತ ನಡೆಯುತ್ತಿರುವ ಅಭಿಯಾನದಲ್ಲಿ ವಿಜಯಪುರ ಪ್ರಧಾನ ಅಂಚೆ ಕಚೇರಿ ಗಮನಾರ್ಹ ಸಾಧನೆ ಮಾಡಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪೋಸ್ಟ್ಮಾಸ್ಟರ್ ಎಂ.ಒ. ತದ್ದೇವಾಡಿ ಮಾತನಾಡಿ, ಈ ಮೈಲಿಗಲ್ಲು ಸಾಧಿಸಲು ಜಿಲ್ಲಾ ಅಂಚೆ ಅಧೀಕ್ಷಕ ಮಹಾಂತೇಶ ತೊಗರಿ, ಸಹಾಯಕ ಅಂಚೆ ಅಧೀಕ್ಷಕರಾದ ಸತೀಶ್ ಕಾಸೆ ಹಾಗೂ ರಮೇಶ ಕಾಮತೆ ಅವರ ಮಾರ್ಗದರ್ಶನ ಪ್ರಮುಖವಾಗಿದೆ. ಎಲ್ಲ ಸಿಬ್ಬಂದಿ ತಂಡವಾಗಿ ನಿರಂತರವಾಗಿ ಶ್ರಮಿಸಿದ್ದರಿಂದ ಈ ವಿಶೇಷ ಸಾಧನೆ ಸಾಧ್ಯವಾಗಿದ್ದು, ಇದರ ಶ್ರೇಯಸ್ಸು ಪ್ರತಿಯೊಬ್ಬ ಸಿಬ್ಬಂದಿಗೂ ಸಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಿಪಿಎಂ ಎಲ್.ಆರ್. ಭಜಂತ್ರಿ, ಅಕೌಂಟೆAಟ್ ಕಿರಣ ಅಂಗಡಿ, ಎಪಿಎಂ ಮಹಾಬಲೇಶ್ವರ ಗಡೇದ ಸೇರಿದಂತೆ ಅಂಚೆ ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಎಪಿಎಂ ಎಂ.ಎಸ್. ಗಡೇದ ಸ್ವಾಗತಿಸಿ ನಿರೂಪಿಸಿದರು. ಎಸ್.ಎಸ್. ಪಾಟೀಲ ವಂದಿಸಿದರು.