
ಯಾದಗಿರಿ: ಕರ್ನಾಟಕ ರಾಜಕಾರಣದಲ್ಲಿ ಪ್ರಾಮಾಣಿಕ, ಜನಪರ ಹಾಗೂ ಆದರ್ಶಪ್ರಾಯ ನಾಯಕರಾಗಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ವಿಶ್ವನಾಥರೆಡ್ಡಿ ಮುದ್ನಾಳ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಸಂಸ್ಮರಣ ಗ್ರಂಥ ಪ್ರಕಟಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಗ್ರಂಥದ ಪ್ರಧಾನ ಸಂಪಾದಕ ಹಾಗೂ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ, ವಿಶೇಷವಾಗಿ ಯಾದಗಿರಿ ಜಿಲ್ಲೆಯ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳಲ್ಲಿ ವಿಶ್ವನಾಥರೆಡ್ಡಿ ಮುದ್ನಾಳ್ ಅವರು ಸಲ್ಲಿಸಿದ ಕೊಡುಗೆಗಳು ಇಂದಿಗೂ ಸ್ಮರಣೀಯವಾಗಿವೆ ಎಂದರು.
ಸರಳತೆ, ಸತ್ಯನಿಷ್ಠೆ ಹಾಗೂ ಮೌಲ್ಯಾಧಾರಿತ ರಾಜಕಾರಣಕ್ಕೆ ಆದ್ಯತೆ ನೀಡಿದ್ದ ಅವರು ಅಧಿಕಾರದಲ್ಲಿದ್ದಾಗಲೂ, ಅಧಿಕಾರದಿಂದ ದೂರವಿದ್ದಾಗಲೂ ತಮ್ಮ ತತ್ವ-ಸಿದ್ಧಾಂತಗಳನ್ನು ಬಿಟ್ಟುಕೊಡಲಿಲ್ಲ. ನೈತಿಕ ಮೌಲ್ಯಗಳನ್ನು ಆಧರಿಸಿಕೊಂಡು ಸಾರ್ವಜನಿಕ ಜೀವನ ನಡೆಸಿದ ಅವರ ವ್ಯಕ್ತಿತ್ವ ಹಾಗೂ ರಾಜಕೀಯ ಜೀವನ ವಿಶಿಷ್ಟವಾಗಿತ್ತು ಎಂದು ಹೇಳಿದರು.
ಯಾದಗಿರಿ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮುದ್ನಾಳ್ ಅವರು ಈ ಭಾಗದ ನೀರಾವರಿ, ಶಿಕ್ಷಣ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ರಾಜ್ಯ ಸರ್ಕಾರದ ಸಚಿವರಾಗಿ ನಿರ್ವಹಿಸಿದ ಜವಾಬ್ದಾರಿಗಳು ಹಾಗೂ ಆಡಳಿತಾತ್ಮಕ ನಿರ್ಧಾರಗಳು ಜನಸಾಮಾನ್ಯರ ಬಗ್ಗೆ ಅವರಿಗಿದ್ದ ಕಾಳಜಿಯನ್ನು ಪ್ರತಿಬಿಂಬಿಸುತ್ತವೆ ಎಂದು ತಿಳಿಸಿದರು.
ವಿಶ್ವನಾಥರೆಡ್ಡಿ ಮುದ್ನಾಳ್ ಅವರ ತತ್ವ, ಆದರ್ಶ ಹಾಗೂ ಸಮಾಜಸೇವೆಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಜನ್ಮಶತಮಾನೋತ್ಸವದ ಹಿನ್ನೆಲೆಯಲ್ಲಿ ಸಂಸ್ಮರಣ ಗ್ರಂಥ ಪ್ರಕಟಿಸಲು ನಿರ್ಧರಿಸಲಾಗಿದೆ ಎಂದರು.
ನಾಡಿನ ಹರ-ಗುರು-ಚರಮೂರ್ತಿಗಳ ಸಂದೇಶಗಳು, ಇದುವರೆಗೆ ಪ್ರಕಟವಾಗಿರುವ ಲೇಖನಗಳು, ಅವರ ಗೆಳೆಯರು, ಸಹವರ್ತಿಗಳು ಹಾಗೂ ಹೊಸ ಬರಹಗಾರರಿಂದ ಲೇಖನಗಳನ್ನು ಆಹ್ವಾನಿಸಲಾಗುತ್ತಿದೆ. ವಿಶ್ವನಾಥರೆಡ್ಡಿ ಮುದ್ನಾಳ್ ಅವರ ಜೀವನ, ರಾಜಕೀಯ ಹಾಗೂ ಸಮಾಜಸೇವೆಯ ಕುರಿತು ಮಾಹಿತಿಪೂರ್ಣ ಬರಹಗಳನ್ನು ನೀಡುವ ಮೂಲಕ ಸಂಸ್ಮರಣ ಗ್ರಂಥದ ಕಾರ್ಯಕ್ಕೆ ಸಹಕರಿಸುವಂತೆ ಮಹಿಪಾಲರೆಡ್ಡಿ ಮುನ್ನೂರ್ ಮನವಿ ಮಾಡಿದರು.
ಡಿಸೆಂಬರ್ ಕೊನೆಯ ವಾರದಲ್ಲಿ ಅರ್ಥಪೂರ್ಣ ಸಮಾರಂಭ
ವಿಶ್ವನಾಥರೆಡ್ಡಿ ಮುದ್ನಾಳ್ ಅವರ ಜನ್ಮಶತಮಾನೋತ್ಸವ ಸಮಾರಂಭವನ್ನು ಡಿಸೆಂಬರ್ ಕೊನೆಯ ವಾರದಲ್ಲಿ ಅರ್ಥಪೂರ್ಣವಾಗಿ ಆಯೋಜಿಸಲಾಗುವುದು. ಈ ಸಂದರ್ಭದಲ್ಲಿ ಮಹಿಪಾಲರೆಡ್ಡಿ ಮುನ್ನೂರ್ ಅವರ ಪ್ರಧಾನ ಸಂಪಾದಕತ್ವ ಹಾಗೂ ವೀರಬಸವಂತ ಬಿ. ಅವರ ಸಂಪಾದಕತ್ವದಲ್ಲಿ ಸಿದ್ಧವಾಗುತ್ತಿರುವ ಸಂಸ್ಮರಣ ಗ್ರಂಥವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ತಿಳಿಸಿದರು.
ವೃತ್ತಿಯಲ್ಲಿ ಕೃಷಿಕ ಹಾಗೂ ಉದ್ಯಮಿಯಾಗಿದ್ದ ವಿಶ್ವನಾಥರೆಡ್ಡಿ ಮುದ್ನಾಳ್ ಅವರು ಜನಪರ ಕಾಳಜಿಯೊಂದಿಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಬದುಕು, ಸಾಧನೆ ಹಾಗೂ ಸಾರ್ವಜನಿಕ ಸೇವೆಯನ್ನು ದಾಖಲಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ಶರಣ ಸಾಹಿತ್ಯ ಪರಿಷತ್ತಿನ ಮೂಲಕ ಕೈಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ವಿಶ್ವನಾಥರೆಡ್ಡಿ ಮುದ್ನಾಳ್ ಅವರ ಕುರಿತು ಬರಹಗಳನ್ನು ಸಂಸ್ಮರಣ ಗ್ರಂಥಕ್ಕಾಗಿ ಕಳುಹಿಸಿಕೊಡುವಂತೆ ಅಭಿಮಾನಿಗಳು, ಹಿತೈಷಿಗಳು ಹಾಗೂ ಬರಹಗಾರರಲ್ಲಿ ಕೋರಲಾಗಿದೆ. ಬರಹಗಳನ್ನು vಜi…@gmಚಿiಟ.ಛಿom (ಸುದ್ದಿಗೋಷ್ಠಿಯಲ್ಲಿ ನೀಡಿರುವ ಇ-ಮೇಲ್ ವಿಳಾಸವನ್ನು ಪರಿಶೀಲಿಸಿ ಕಳುಹಿಸುವುದು ಸೂಕ್ತ) ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ೯೭೩೧೬೬೬೦೫೨, ೯೯೧೬೩೮೨೫೮೫ ಸಂಪರ್ಕಿಸಬಹುದು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ಅಯ್ಯಣ್ಣ ಹುಂಡೇಕಾರ, ಪ್ರಕಾಶ ಅಂಗಡಿ, ಮಹಾದೇವಪ್ಪ ಅಬ್ಬೆತುಮಕೂರು, ಬಸವರಾಜ ಮೋಟ್ನಳ್ಳಿ, ಬಸವಂತರಾಯ ಮಾಲಿಪಾಟೀಲ, ನೂರಂದಪ್ಪ ಲೇವಡಿ ಹಾಗೂ ನಾಗೇಂದ್ರ ಜಾಜಿ ಉಪಸ್ಥಿತರಿದ್ದರು.






















