
ಚಿಕ್ಕಬಳ್ಳಾಪುರ, ಅ. ೧- ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ, ಆದರೆ ರಾಜ್ಯದ ಸಿಎಂ ಕುಬೇರರಾಗಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಹೇಳಿದ್ದಾರೆ.
ರಾಜ್ಯದಲ್ಲಿ ತೀವ್ರ ಬರಗಾಲ ಉಂಟಾಗಿದೆ, ಇದರಿಂದ ರಾಜ್ಯ ಸರ್ಕಾರವು ಪ್ರತಿ ಜಿಲ್ಲೆಗೆ ೫೦ ಕೋಟಿ ರೂ.ಗಳನ್ನು ಬರ ಪರಿಹಾರವಾಗಿ ನೀಡಬೇಕು ಹಾಗೂ ಬೆಳೆ ನಷ್ಟ ಹೊಂದಿದ ರೈತರಿಗೆ ತಲಾ ೨೫ ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು ಎಂದು ಹೇಳಿದರು.
ನಗರದ ಗ್ರಂಥಾಲಯದ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ ನಂತರ, ಅವರು ತಹಸೀಲ್ದಾರ್ ಕಚೇರಿ ಬಳಿ ಉಪವಿಭಾಗಾಧಿಕಾರಿ ಅಶ್ವಿನ್‌ಗೆ ಮನವಿ ಪತ್ರ ಸಲ್ಲಿಸಿ, ಬಳಿಕ ಜಿಲ್ಲಾಡಳಿತ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತ ಮಾಡಿರುವ ಸಾಲವನ್ನು ಮನ್ನಾ ಮಾಡಬೇಕು,ರೈತರು ಸ್ವಂತ ಖರ್ಚಿನಲ್ಲಿ ಬೋರ್ ವೆಲ್ ಕೊರೆಸಿದರು ನೀರು ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಚಟುವಟಿಕೆಗೆ ತುಂಬಾ ಕಷ್ಟಕರವಾಗಿದೆ. ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿಗೆ ೧೦ ರೂ.ಗಳ ಪ್ರೋತ್ಸಾಹ ಧನವನ್ನು ಕಾಯ್ಪಡಬೇಕೆಂದು ಒತ್ತಾಯ ಮಾಡಿದರು.
ಉಚಿತ ಯೋಜನೆಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ಅವರು, ಸರ್ಕಾರ ಈಗಾಗಲೇ ರಾಜ್ಯದಲ್ಲಿ ಬರ ಘೋಷಣೆ ಮಾಡಿದ ವೇಳೆಯೂ ಉಚಿತ ಯೋಜನೆಗಳಿಗೆ ಹಣ ಪೂರೈಸುತ್ತಿದೆ, ಇದರಿಂದ ರಾಜ್ಯ ಬರಗಾಲವಿದ್ದರೂ ಸಹ ಯೋಜನೆಗಳು ಜನರಿಗೆ ಅನವಶ್ಯಕವಾಗಿವೆ ಎಂದರು.
ನಲಪಾಡ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಿಖಿಲ್ ಕುಮಾರಸ್ವಾಮಿ ಕುರಿತು ಹಗುರವಾಗಿ ಮಾತನಾಡುವುದನ್ನು ಖಂಡಿಸುತ್ತೇನೆ. ರಾಜ್ಯದ ಜನತೆಗೆ ನಿಖಿಲ್ ಕುಮಾರಸ್ವಾಮಿ ಎಂತಹ ವ್ಯಕ್ತಿ ಎಂದು ಗೊತ್ತಿದೆ. ನೀವು ನಿಖಿಲ್‌ರನ್ನು ನೋಡಿ ಕಲಿಯಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತದ ಕಾರಣದಿಂದ ನೀರಿನ ಸಮಸ್ಯೆ ತೀವ್ರವಾಗಿದೆ. ಜಿಲ್ಲಾಡಳಿತ ಇದನ್ನು ಗಮನಿಸಿ ನಿರ್ಣಯಿಸಿ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಬೇಕು ಮತ್ತು ಧನಕರುಗಳಿಗೆ ಮೇವಿನ ಸಂಗ್ರಹಣೆ ಹೆಚ್ಚಿಸಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮಹಿಳಾ ಜಿಲ್ಲಾಧ್ಯಕ್ಷ ಕೆ. ಪ್ರಭಾ, ಅಜಿತ್ ಜೀಡಿಮಾಕಲ್ಲಹಳ್ಳಿ, ಅಕಿಲ್ ರೆಡ್ಡಿ, ಭೈರಪ್ಪ, ದೇವಸ್ಥಾನ ಹೊಸಹಳ್ಳಿ ವೆಂಕಟೇಶ್, ಜಯರಾಮಪ್ಪ, ಎಂ. ನಾಗೇಂದ್ರ, ಎನ್. ಮಂಜುನಾಥ್, ಅಶೋಕ್ ಕುಮಾರ್, ಬಿ. ವಿ. ಆದಿನಾರಾಯಣಪ್ಪ, ಫೋಟೊಗ್ರಾಫರ್ ಮಂಜುನಾಥ್, ಅನ್ವರ್ ಭರತ್, ಜೆಡಿಎಸ್ ಪದಾಧಿಕಾರಿಗಳು ಮತ್ತು ಮಹಿಳಾ ಪದಾಧಿಕಾರಿಗಳು ಹಾಜರಿದ್ದರು.

























