Home ಜಿಲ್ಲೆ ಬೆಂಗಳೂರು ತಾಲೂಕು ಪಂಚಾಯಿತಿ ಚುನಾವಣೆ: ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಬಲವನ್ನು ಹೆಚ್ಚಿಸುತ್ತಿದೆ

ತಾಲೂಕು ಪಂಚಾಯಿತಿ ಚುನಾವಣೆ: ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಬಲವನ್ನು ಹೆಚ್ಚಿಸುತ್ತಿದೆ

ಮಾಲೂರು, ಅ. ೧- ಮಾಲೂರು ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಪ್ರಗತಿಯನ್ನು ಗಮನಿಸಿ ವಿವಿಧ ಗ್ರಾಮಗಳ ಯುವಕರು ಬಿಜೆಪಿ ಮತ್ತು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದು, ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲೆಯ ಚುನಾವಣೆಗಳ ರೈತ ನೀತಿಯಿಂದ ಮೈತ್ರಿ ಬಲಗೊಳ್ಳುತ್ತಿದೆ ಎಂದು ಶಾಸಕ ಕೆ.ವೈ. ನಂಜೇಗೌಡ ಹೇಳಿದರು.

ತಾಲ್ಲೂಕಿನ ಟೇಕಲ್ ಹೋಬಳಿಯ ಕೆ.ಜಿ.ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಬಟ್ಟಿ ಗ್ರಾಮದಲ್ಲಿ ಯುವ ಮುಖಂಡ ಚಲಪತಿ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಂದ ಹಲವರು ಕಾಂಗ್ರೆಸ್ ಸೇರ್ಪಡೆಯಾದ ಸಂದರ್ಭದಲ್ಲಿ ಪಕ್ಷದ ಧ್ವಜ ನೀಡಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.


ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಕಾಂಗ್ರೆಸ್ ಪಕ್ಷ ಸೇರುತ್ತಿರುವುದು ಬದಲಾವಣೆಯ ಸಂಕೇತವಾಗಿದೆ. ಪಟಾಲಮ್ಮನ ಬೆಟ್ಟದ ಸಾಲಿನಲ್ಲಿರುವ ಹಲವು ಗ್ರಾಮಗಳಿಂದ ಈ ಹಿಂದೆ ನಿರೀಕ್ಷಿತ ಮಟ್ಟದ ಸಹಕಾರ ದೊರೆಯುತ್ತಿರಲಿಲ್ಲ. ಆದರೆ ಇದೀಗ ಈ ಭಾಗದ ಜನರು ಅಭಿವೃದ್ಧಿಯನ್ನು ಬಯಸುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಬೆಂಬಲ ನೀಡುತ್ತಿದ್ದಾರೆ. ಓಬಟ್ಟಿ ಗ್ರಾಮದಲ್ಲಿ ಯುವಕರು ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸಂತಸ ತಂದಿದೆ ಎಂದರು.


ಪಕ್ಷಕ್ಕೆ ಸೇರ್ಪಡೆಯಾದ ಗ್ರಾಮಸ್ಥರ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ತಮ್ಮ ಮೇಲಿದೆ. ಗ್ರಾಮದ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದು. ಕದಿರೇನಹಳ್ಳಿಯಿಂದ ಓಬಟ್ಟಿ ಗ್ರಾಮದವರೆಗೆ ಒಂದು ತಿಂಗಳೊಳಗೆ ಸಿಮೆಂಟ್ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.


ಓಬಟ್ಟಿ ಗ್ರಾಮದಲ್ಲಿರುವ ೭೨ ಎಕರೆ ಗೋಮಾಳ ಜಾಗದಲ್ಲಿ ಈಗಾಗಲೇ ಮಂಜೂರಾಗಿರುವ ಫಲಾನುಭವಿಗಳನ್ನು ಹೊರತುಪಡಿಸಿ ಉಳಿದ ಜಾಗವನ್ನು ಮನೆ ಇಲ್ಲದ ಹಾಗೂ ಕಡುಬಡವರಿಗೆ ನಿವೇಶನ ಒದಗಿಸಲು ಬಳಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಈ ಕುರಿತು ಮುಂದಿನ ವಾರ ತಹಶೀಲ್ದಾರರನ್ನು ಗ್ರಾಮಕ್ಕೆ ಸ್ಥಳಕ್ಕೆ ಕರೆಸಿ, ಕಂದಾಯ ಇಲಾಖೆಯ ನಿಯಮಗಳ ಅನ್ವಯ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.


ಈ ಭಾಗದಲ್ಲಿ ಬಲ್ಲೇರಿ-ಜಂಗಾನಹಳ್ಳಿ, ಉಳ್ಳೇರಹಳ್ಳಿ, ವೀರಕಪುತ್ರ ಹಾಗೂ ಹುಣಸೀಕೋಟೆ ಪಟಾಲಮ್ಮನ ಗುಡಿಯಿಂದ ಕೆಂಪಸಂದ್ರ-ಹಗಲಕೋಟೆವರೆಗೆ ವಿವಿಧ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮಾಲೂರು ತಾಲೂಕಿನ ಪ್ರತಿಯೊಂದು ಗ್ರಾಮದ ಸಮಸ್ಯೆ ಹಾಗೂ ಅಗತ್ಯತೆಗಳ ಬಗ್ಗೆ ತಮಗೆ ಅರಿವಿದೆ. ಇದೇ ತಾಲೂಕಿನಲ್ಲಿ ಹುಟ್ಟಿ ಬೆಳೆದಿರುವುದರಿಂದ ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಹತ್ತಿರದಿಂದ ತಿಳಿದುಕೊಂಡಿದ್ದು, ಹಂತ ಹಂತವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.


ಈ ಭಾಗದ ಹಲವು ಕುಟುಂಬಗಳು ಹಲವು ವರ್ಷಗಳಿಂದ ಕಲ್ಲುಕುಟಿಕರ ಕೆಲಸವನ್ನೇ ಅವಲಂಬಿಸಿ ಜೀವನ ನಡೆಸುತ್ತಿವೆ. ಈ ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾನೂನುಬದ್ಧ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವಿಧಾನಸೌಧದಲ್ಲಿ ವಿಶೇಷ ಪ್ರಸ್ತಾಪ ಮಾಡಿ ಸರ್ಕಾರದ ಗಮನ ಸೆಳೆಯಲಾಗಿದೆ. ಇದೀಗ ಕಾನೂನಿನ ಚೌಕಟ್ಟಿನಲ್ಲಿ ಕಲ್ಲುಕುಟಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಂಜೇಗೌಡ ಹೇಳಿದರು. ಕಲ್ಲುಕುಟಿಕರು ಯಾರಿಗೂ ಹೆದರುವ ಅಗತ್ಯವಿಲ್ಲ. ಎಲ್ಲವೂ ಕಾನೂನು ಪ್ರಕಾರ ನಡೆಯುವಂತೆ ಕ್ರಮ ಕೈಗೊಳ್ಳಲಾಗುವುದು. ಈ ಭಾಗದ ಜನರ ಹಲವು ವರ್ಷಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದರು.


ಓಬಟ್ಟಿ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ವಿವಿಧ ವರ್ಗಗಳ ಜನರು ವಾಸಿಸುತ್ತಿದ್ದಾರೆ. ಮನೆ ಇಲ್ಲದ ಅರ್ಹ ಕುಟುಂಬಗಳಿಗೆ ನಿವೇಶನ ಕಲ್ಪಿಸುವ ಕುರಿತು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಗ್ರಾಮದ ಅಭಿವೃದ್ಧಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಹಂತ ಹಂತವಾಗಿ ಒದಗಿಸಲಾಗುವುದು ಎಂದು ಭರವಸೆ ನೀಡಿದರು.


ಓಬಟ್ಟಿ ಗ್ರಾಮದ ಯುವ ಮುಖಂಡ ಚಲಪತಿ ನೇತೃತ್ವದಲ್ಲಿ ಎಸ್. ಮುನಿರಾಜು, ದೇವರಾಜು, ಗೋಪಿನಾಥ್, ವೆಂಕಟಸ್ವಾಮಿ (ಚಿನ್ನಿ), ಶಾಂತಕುಮಾರ್, ಮಂಜುನಾಥ್, ವೆಂಕಟೇಶಪ್ಪ, ನಲ್ಲಮುನಿಯಪ್ಪ, ನಾರಾಯಣಪ್ಪ, ಮುನಿತಿಮ್ಮಪ್ಪ ಸೇರಿದಂತೆ ೫೦ಕ್ಕೂ ಹೆಚ್ಚು ಯುವಕರು ಬಿಜೆಪಿ ಹಾಗೂ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.


ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಸದಸ್ಯ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ರಾಮಮೂರ್ತಿ, ಕಾಂಗ್ರೆಸ್ ಮುಖಂಡ ಕೆ.ಎಸ್. ವೆಂಕಟೇಶ್ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ವಿನೋದ್ ಗೌಡ, ರಮೇಶ್ ಗೌಡ, ಸತೀಶ್ ಬಾಬು, ತಿಮ್ಮರಾಯಪ್ಪ, ಮುರುಗೇಶ್, ಕದಿರೇನಹಳ್ಳಿ ರಮೇಶ್, ಪ್ರಗತಿ ಶ್ರೀನಿವಾಸ್, ನಂದೀಶ್, ನಾರಾಯಣಸ್ವಾಮಿ, ಎ.ಕೆ. ವೆಂಕಟೇಶ್, ಅಪ್ಪೂಜಿ ಗೌಡ ಸೇರಿದಂತೆ ಹಲವು ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.