
ವಿಜಯಪುರ,ಜು.೦೧: ಒಂದು ಗಿಡ ನೆಡುವುದು ಪ್ರಕೃತಿಗೆ ನಾವು ಸಲ್ಲಿಸುವ ಅತ್ಯುತ್ತಮ ಗೌರವವಾಗಿದೆ ಎಂದು ಪಟ್ಟಣದ ಶ್ರೀ ಬಸವಕಲ್ಯಾಣ ಮಠದ ಕಿರಿಯ ಶ್ರೀ ನಿ.ಪ್ರ.ಸ್ವ. ಸದಾಶಿವ ಸ್ವಾಮೀಜಿ ತಿಳಿಸಿದರು.
ಮೇಲೂರು ರಸ್ತೆಯ ಶ್ರೀ ಬಸವಕಲ್ಯಾಣ ಮಠದ ಆವರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ವೋದಯ ಮಂಡಳಿಯ ವತಿಯಿಂದ ಆಯೋಜಿಸಲಾದ ವೃಕ್ಷಮಾತೆ ನಾಡೋಜ ಪದ್ಮಶ್ರೀ ಡಾ. ಸಾಲುಮರದ ತಿಮ್ಮಕ್ಕ ನವರ ೧೧೫ನೇ ಜನ್ಮದಿನಾಚರಣೆ ಅಂಗವಾಗಿ ಶ್ರೀ ಬಸವಕಲ್ಯಾಣ ಮಠದ ಬಸ್ ನಿಲ್ದಾಣದ ಬಳಿ ಆಯೋಜಿಸಲಾದ ಸಸಿನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಪುಣ್ಯದಿನದಂದು ಒಬ್ಬ ವ್ಯಕ್ತಿ ಅಥವಾ ಒಬ್ಬ ವಿದ್ಯಾರ್ಥಿ ಒಂದು ಗಿಡನೆಡುವ ಸಂಕಲ್ಪದೊಂದಿಗೆ ಪ್ರತಿಯೊಬ್ಬರೂ ಕನಿಷ್ಟ ಒಂದು ಗಿಡವನ್ನು ನೆಟ್ಟು ವೃಕ್ಷ ಮಹಾಮಾತೆ ಸಾಲು ಮರದ ತಿಮ್ಮಕ್ಕರ ೧೧೫ನೇ ಜನ್ಮದಿನವನ್ನು ಅರ್ಧಪೂರ್ಣವಾಗಿ ಆಚರಿಸಿ ಆಚರಿಸೋಣ ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ವೋದಯ ಮಂಡಳಿಯ ಅಧ್ಯಕ್ಷ ಡಾ.ವಿ.ಪ್ರಶಾಂತ ಮಾತನಾಡಿ, ಸಾಲುಮರದ ತಿಮ್ಮಕ್ಕರ ಹಸಿರು ಕ್ರಾಂತಿಯನ್ನ ನಮ್ಮ ರಾಜ್ಯದಲ್ಲಿ ಮುನ್ನಡೆಸಿದ ರೀತಿ ಇಂದಿನ ಯುವ ಪೀಳಿಗೆಗೆ ಅತ್ಯಂತ ಸ್ಪೂರ್ತಿದಾಯಕ.ಆದ್ದರಿಂದ ಮರಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸಿ ಬೆಳೆಸಿದವರು ಇಂದಿಗೂ ಸಹ ಇವರ ಹೆಸರು ಇತಿಹಾಸ ದ ಪುಟಗಳಲ್ಲಿ ಅಜರಾಮರವಾಗಿದೆ ಎಂದು ತಿಳಿಸಿದರು.
ಪದ್ಮಶ್ರೀ ಡಾ.ಸಾಲುಮರದ ತಿಮ್ಮಕ್ಕನವರ ೧೧೫ ವರ್ಷದ ಜನ್ಮದಿನದ ಅಂಗವಾಗಿ ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಶನ್‌ನಾ ಅಧ್ಯಕ್ಷ ಬಳ್ಳೂರು ಉಮೇಶ್ ಮಾರ್ಗದರ್ಶನದಲ್ಲಿ ೧೧೧೫ ವಿವಿಧ ರೀತಿಯ ಸಸಿ ನೆಡುವುದು ಹಾಗೂ ಸಸ್ಯಗಳ ವಿತರಣೆಯನ್ನು ಪಟ್ಟಣದ ವಿವಿಧ ಸ್ಥಳಗಳಲ್ಲಿ ನಡೆಸಲಾಗುವುದೆಂದು ಜಿಲ್ಲಾ ಸರ್ವೋದಯ ಮಂಡಳಿಯ ಕಾರ್ಯದರ್ಶಿ ವಿ.ಎನ್. ಸೂರ್ಯ ಪ್ರಕಾಶ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ.ಸಾಯಿ ಜ್ಞಾನಗಂಗಾ ಪದವಿ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಪ್ರದೀಪ, ಉಪನ್ಯಾಸಕ ಕೆ.ಅರ್ಚನ, ಮುಬಾರಕ್, ಹೆಚ್.ಎಂ.ಅಂಬಿಕಾ, ಎಂ.ಚೈತ್ರ, ಕೆ.ಎಂ.ನಾಗರಾಜ, ಡಿ.ಎನ್.ನಾಗೇಶ್, ಹೆಚ್.ಜಿ.ಹರೀಶ್, ಬಿ.ಎಸ್.ಶರತ್, ಎನ್.ಎಸ್.ಎಸ್ ಘಟಕದ ಸ್ವಯಂಸೇವಕರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ವೋದಯ ಮಂಡಳಿಯ ಯುವ ಕೋಶದ ಪದಾಧಿಕಾರಿಗಳಾದ ಟಿ.ಎನ್ ಲೋಕೇಶ್, ಬಿ.ಎನ್.ಶ್ರೇಯಸ್, ಎನ್.ಪುನೀತ್, ಸ್ಪಂದನ,ಪಲ್ಲವಿ ಹಾಗೂ ಭಾರತಿ ಹಾಜರಿದ್ದರು.






























