Home ಮುಖಪುಟ ಸುದ್ದಿ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಅರಳಿದ ಗಂಗ ಸಾಮ್ರಾಜ್ಯದ ಗತವೈಭವ

ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಅರಳಿದ ಗಂಗ ಸಾಮ್ರಾಜ್ಯದ ಗತವೈಭವ

ಸಿಎಂ ಚಾಲನೆ

ಬೆಂಗಳೂರು, ಆ.೬: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ೨೨೦ನೇ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಗಂಗ ಸಾಮ್ರಾಜ್ಯದ ಸಾವಿರ ವರ್ಷಗಳ ಇತಿಹಾಸ, ಕಲೆ, ವಾಸ್ತುಶಿಲ್ಪ ಹಾಗೂ ವೈಭವ ಹೂಗಳ ಮೂಲಕ ಅನಾವರಣಗೊಂಡಿದೆ.


ಆಗಸ್ಟ್ ೬ರಿಂದ ೧೭ರವರೆಗೆ ೧೨ ದಿನಗಳ ಕಾಲ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಬೆಳಿಗ್ಗೆ ಚಾಲನೆ ನೀಡಿದರು. ಗಂಗರ ಆಳ್ವಿಕೆಯ ವೈಭವವನ್ನು ಬಿಂಬಿಸುವ ಬಣ್ಣಬಣ್ಣದ ಹೂವಿನ ಕಲಾಕೃತಿಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿವೆ.


ಗಂಗ ದೊರೆಗಳ ಬಲಿಷ್ಠ ಗಜಸೇನೆ, ಯುದ್ಧದ ಸನ್ನಿವೇಶ, ಶ್ರವಣಬೆಳಗೊಳದ ಬಾಹುಬಲಿ ಪ್ರತಿಮೆ ಹಾಗೂ ತಲಕಾಡಿನ ದೇವಾಲಯಗಳ ಪ್ರತಿಕೃತಿಗಳನ್ನು ಹೂಗಳಿಂದ ನಿರ್ಮಿಸಲಾಗಿದೆ. ಇದರೊಂದಿಗೆ ಗಂಗರ ಕಾಲದಲ್ಲಿ ಕನ್ನಡ ಸಾಹಿತ್ಯ, ಶಿಕ್ಷಣ, ನೀರಾವರಿ, ಕೃಷಿ, ಶಿಲ್ಪಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಗಳಿಗೆ ನೀಡಿದ ಕೊಡುಗೆಯನ್ನು ಪರಿಚಯಿಸುವ ವಿನೂತನ ಕಲಾಕೃತಿಗಳನ್ನೂ ಪ್ರದರ್ಶನಕ್ಕಿಡಲಾಗಿದೆ.


ಇತಿಹಾಸವನ್ನು ಹೂಗಳ ಮೂಲಕ ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ ಈ ಬಾರಿ ವಿಶೇಷ ಥೀಮ್ ರೂಪಿಸಲಾಗಿದೆ. ವಿವಿಧ ರಾಜ್ಯಗಳಿಂದ ೧೩೦ಕ್ಕೂ ಹೆಚ್ಚು ಅಪರೂಪದ ಹೂವಿನ ತಳಿಗಳನ್ನು ತರಿಸಲಾಗಿದ್ದು, ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುವಂತೆ ಪ್ರದರ್ಶನವನ್ನು ರೂಪಿಸಲಾಗಿದೆ.


ಸುಮಾರು ೨.೭೫ ಕೋಟಿ ವೆಚ್ಚದಲ್ಲಿ ಫಲಪುಷ್ಪ ಪ್ರದರ್ಶನವನ್ನು ಸಿದ್ಧಪಡಿಸಲಾಗಿದೆ. ಲಾಲ್‌ಬಾಗ್ ಕೆರೆ ಬಳಿ ಕೃತಕ ಜಲಪಾತ, ಆಕರ್ಷಕ ಸೆಲ್ಫಿ ಪಾಯಿಂಟ್‌ಗಳು ಸೇರಿದಂತೆ ಹಲವು ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಗಂಗ ಸಾಮ್ರಾಜ್ಯದ ಇತಿಹಾಸ, ಕಲೆ ಮತ್ತು ವಾಸ್ತುಶಿಲ್ಪವನ್ನು ಕಣ್ಮುಂದೆ ಕಟ್ಟಿಕೊಡುವ ರೀತಿಯಲ್ಲಿ ಹೂವಿನ ಕಲಾಕೃತಿಗಳನ್ನು ನಿರ್ಮಿಸಲಾಗಿದೆ.


ಪ್ರದರ್ಶನಕ್ಕೆ ಲಕ್ಷಾಂತರ ಮಂದಿ ಭೇಟಿ ನೀಡುವ ನಿರೀಕ್ಷೆಯಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಆನ್‌ಲೈನ್ ಟಿಕೆಟ್ ವ್ಯವಸ್ಥೆ, ಹೆಚ್ಚುವರಿ ಪಾರ್ಕಿಂಗ್ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಮಾಡಲಾಗಿದೆ. ಭದ್ರತೆಗಾಗಿ ೧೩೬ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪೊಲೀಸ್ ಬಂದೋಬಸ್ತ್ ಕೂಡ ಕಲ್ಪಿಸಲಾಗಿದೆ.
‘ಗಂಗರ ವೈಭವ ಕಣ್ತುಂಬಿಕೊಳ್ಳಿ’


ಉದ್ಘಾಟನೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇತಿಹಾಸವನ್ನು ಹೂಗಳ ಮೂಲಕ ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ಬಾರಿಯ ವಿಶೇಷ ಥೀಮ್ ರೂಪಿಸಲಾಗಿದೆ. ಗಂಗ ಸಾಮ್ರಾಜ್ಯದ ಇತಿಹಾಸ, ಕಲೆ ಮತ್ತು ವಾಸ್ತುಶಿಲ್ಪವನ್ನು ಹೂಗಳ ಕಲಾಕೃತಿಗಳ ಮೂಲಕ ಪರಿಚಯಿಸಲಾಗುತ್ತಿದೆ. ವಿವಿಧ ರಾಜ್ಯಗಳಿಂದ ಅಪರೂಪದ ಹೂಗಳನ್ನು ತರಿಸಲಾಗಿದ್ದು, ಈ ಬಾರಿಯ ಫಲಪುಷ್ಪ ಪ್ರದರ್ಶನ ವಿಶೇಷವಾಗಿದೆ ಎಂದು ಹೇಳಿದರು.


ಲಾಲ್‌ಬಾಗ್ ಕಾರ್ಯದರ್ಶಿ ಗಿರೀಶ್ ಮಾತನಾಡಿ, ೨೨೦ನೇ ಫಲಪುಷ್ಪ ಪ್ರದರ್ಶನವನ್ನು ಬಹಳ ವಿಶೇಷವಾಗಿ ರೂಪಿಸಲಾಗಿದೆ. ಇದೇ ಮೊದಲ ಬಾರಿಗೆ ಗಂಗರ ಸಾಮ್ರಾಜ್ಯ ಹಾಗೂ ಕದಂಬರ ರಾಜಮನೆತನದ ಇತಿಹಾಸ, ಶಿಲ್ಪಕಲೆ, ವಾಸ್ತುಶಿಲ್ಪ ಮತ್ತು ಕೃಷಿ ಕ್ಷೇತ್ರದ ಕೊಡುಗೆಗಳನ್ನು ಪರಿಚಯಿಸುವ ಪ್ರಯತ್ನ ಮಾಡಲಾಗಿದೆ. ಗಂಗರ ಸಾಮ್ರಾಜ್ಯವು ಶಿಲ್ಪಕಲೆ, ವಾಸ್ತುಶಿಲ್ಪ ಮತ್ತು ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಗಳಿಗೆ ವಿರಾಟ್ ದರ್ಶನದಂತಿದೆ ಎಂದು ಹೇಳಿದರು.
ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಲಾಲ್‌ಬಾಗ್‌ನಲ್ಲಿ ಪ್ರತಿವರ್ಷ ಎರಡು ಬಾರಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತದೆ.

ತಾವು ಸುಮಾರು ೬೫ ವರ್ಷಗಳಿಂದ ಫಲಪುಷ್ಪ ಪ್ರದರ್ಶನಕ್ಕೆ ಬರುತ್ತಿದ್ದು, ಪ್ರತಿಬಾರಿಯೂ ಹೊಸ ಹೊಸ ಶೈಲಿಯಲ್ಲಿ ಪ್ರದರ್ಶನ ಆಯೋಜಿಸಲಾಗುತ್ತಿದೆ. ಬಸವಣ್ಣ, ಪುನೀತ್ ರಾಜ್‌ಕುಮಾರ್ ಹಾಗೂ ಶಿವಕುಮಾರ ಸ್ವಾಮೀಜಿ ಸೇರಿದಂತೆ ವಿವಿಧ ವಿಷಯಾಧಾರಿತ ಫಲಪುಷ್ಪ ಪ್ರದರ್ಶನಗಳನ್ನು ಈ ಹಿಂದೆ ಕಂಡಿದ್ದೇವೆ. ಈ ಬಾರಿ ಗಂಗರ ಕಾಲದ ರಾಜರು ನಿರ್ಮಿಸಿದ ದೇವಾಲಯಗಳ ಪ್ರತಿಕೃತಿಗಳನ್ನು ಹೂಗಳಿಂದ ನಿರ್ಮಿಸಿರುವುದು ವಿಶೇಷವಾಗಿದೆ. ಗಂಗ ಅರಸರ ವೈಭವವನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಬೇಕು ಎಂದು ಮನವಿ ಮಾಡಿದರು.


ತೋಟಗಾರಿಕೆ ಇಲಾಖೆ ನಿರ್ದೇಶಕ ಇಬ್ರಾಹಿಂ ಮಾತನಾಡಿ, ಆ.೬ರಿಂದ ೧೭ರವರೆಗೆ ೧೨ ದಿನಗಳ ಕಾಲ ನಡೆಯಲಿರುವ ೨೨೦ನೇ ಫಲಪುಷ್ಪ ಪ್ರದರ್ಶನದಲ್ಲಿ ಗಂಗ ಸಾಮ್ರಾಜ್ಯದ ಸಾವಿರ ವರ್ಷಗಳ ವೈಭವವನ್ನು ಹೂಗಳ ಮೂಲಕ ಅನಾವರಣಗೊಳಿಸಲಾಗಿದೆ. ಶ್ರವಣಬೆಳಗೊಳದ ಬಾಹುಬಲಿ, ತಲಕಾಡಿನ ದೇವಾಲಯಗಳ ಹೂವಿನ ಪ್ರತಿಕೃತಿಗಳು ಪ್ರಮುಖ ಆಕರ್ಷಣೆಯಾಗಿವೆ. ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುವ ನಿರೀಕ್ಷೆಯಿದ್ದು, ಅವರ ಅನುಕೂಲಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.