Home ಕ್ರೈಂ ಸುದ್ದಿಗಳು ಮಕ್ಕಳೆದುರೇ ಹೋಂ ಗಾರ್ಡ್ ೧೦ ಬಾರಿ ಇರಿದು ಪತ್ನಿ ಭೀಕರ ಹತ್ಯೆ

ಮಕ್ಕಳೆದುರೇ ಹೋಂ ಗಾರ್ಡ್ ೧೦ ಬಾರಿ ಇರಿದು ಪತ್ನಿ ಭೀಕರ ಹತ್ಯೆ

ಬೆಂಗಳೂರು,ಜೂ.೧೫- ಆನ್‌ಲೈನ್ ಬೆಟ್ಟಿಂಗ್ ಚಟ ಅಂಟಿಸಿಕೊಂಡಿದ್ದ ಪತಿಯೊಬ್ಬ ತನ್ನ ಗೃಹ ರಕ್ಷಕ (ಹೋಂ ಗಾರ್ಡ್) ಸಿಬ್ಬಂದಿಯಾಗಿದ್ದ ಪತ್ನಿಯನ್ನು ಮಕ್ಕಳ ಎದುರೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಹದೇವಪುರದ ಉದಯನಗರದಲ್ಲಿ ನಿನ್ನೆ ರಾತ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮಂಜುಳಾ (೩೨) ಕೊಲೆಯಾದವರು, ಪತ್ನಿಯನ್ನು ಕೊಲೆಗೈದ ಆರೋಪಿ ಕಾರು ಚಾಲಕ ಪ್ರದೀಪ್‌ನನ್ನು ಮಹದೇವಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.


೧೫ ವರ್ಷಗಳ ಹಿಂದೆ ಪ್ರದೀಪ್ ಮತ್ತು ಮಂಜುಳಾ ಮದುವೆಯಾಗಿತ್ತು. ಆದರೆ ಪ್ರದೀಪ್ ಇತ್ತೀಚೆಗೆ ಆನ್‌ಲೈನ್ ಆಪ್‌ಗಳಲ್ಲಿ ಬೆಟ್ಟಿಂಗ್ ಗೀಳಿಗೆ ಸಿಲುಕಿದ್ದನು. ಅದೇ ಕಾರಣಕ್ಕೆ ಕುಟುಂಬ ಆರ್ಥಿಕ ಸಂಕಷ್ಟಕ್ಕೀಡಾಗಿತ್ತು. ಸಾಲದ್ದಕ್ಕೆ ಪತ್ನಿ ಮೇಲೆಯೂ ಪ್ರದೀಪ್ ಸದಾ ಅನುಮಾನಪಡುತ್ತಿದ್ದ ಎನ್ನಲಾಗಿದೆ.


ನಟಿಸಿ ಪತ್ನಿಯ ಕೊಲೆ:


ಪತಿಯ ಮಾನಸಿಕ ಹಾಗೂ ದೈಹಿಕ ಹಿಂಸೆ ತಾಳಲಾರದೆ ಮಂಜುಳಾ ತನ್ನ ಮಕ್ಕಳೊಂದಿಗೆ ಪ್ರತ್ಯೇಕವಾಗಿ ಕಳೆದ ಒಂದು ತಿಂಗಳಿನಿಂದ ಉದಯನಗರದ ಪುಷ್ಪಾಂಜಲಿ ಥಿಯೇಟರ್ ಬಳಿಯ ಮನೆಯಲ್ಲಿ ವಾಸವಿದ್ದರು.


ರಾತ್ರಿ ೯ ಗಂಟೆ ಸುಮಾರಿಗೆ ಮಂಜುಳಾ ಇದ್ದ ಮನೆಗೆ ಬಂದಿದ್ದ ಪ್ರದೀಪ್, ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳುವವನಂತೆ ನಟಿಸಿದ್ದಾನೆ. ಕೊನೆಯದಾಗಿ ಕಾಲು ಹಿಡಿಯುತ್ತೇನೆ, ತಪ್ಪಾಯಿತು ಮನೆಗೆ ಬಾ ಎಂದು ಕಾಲಿಗೆ ಬಿದ್ದವನೇ, ಜರ್ಕಿನ್ ಒಳಗಡೆ ಬಚ್ಚಿಟ್ಟುಕೊಂಡು ತಂದಿದ್ದ ಚಾಕುವಿನಿಂದ ಮಂಜುಳಾ ಅವರ ಮೇಲೆ ಮುಗಿಬಿದ್ದಿದ್ದಾನೆ. ಇಬ್ಬರು ಮಕ್ಕಳ ಎದುರೇ ಮಂಜುಳಾ ಅವರಿಗೆ ೧೦ಕ್ಕೂ ಅಧಿಕ ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ


ಕೊಲೆಗೂ ಮುನ್ನ ವಿಡಿಯೋ:


ಕೊಲೆಗೂ ಮುನ್ನ ಆರೋಪಿ ಪ್ರದೀಪ್ ವಿಡಿಯೋ ಒಂದನ್ನು ಮಾಡಿಕೊಂಡಿದ್ದ ಎನ್ನಲಾಗಿದೆ. “ಬೆಟ್ಟಿಂಗ್ ಚಟದಿಂದ ನನ್ನ ಹೆಂಡತಿ, ಮಕ್ಕಳು ಬೀದಿಗೆ ಬಂದರು. ಅತ್ತೆ ಹಾಗೂ ನಾದಿನಿಯಿಂದ ನನ್ನ ಪತ್ನಿ ಹಾಳಾದಳು. ನಾನೂ ಸಾಯುತ್ತೇನೆ, ನನ್ನ ಹೆಂಡತಿಯೂ ಸಾಯುತ್ತಾಳೆ” ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದನು.


ಆತ್ಮಹತ್ಯೆ ಯತ್ನ:


ಪತ್ನಿಯನ್ನು ಕೊಲೆ ಮಾಡಿದ ಬಳಿಕ ಪ್ರದೀಪ್ ತಾನು ಕೂಡ ಚಾಕುವಿನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸುದ್ದಿ ತಿಳಿದ ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿದ ಮಹಾದೇವಪುರ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಆರೋಪಿ ಪ್ರದೀಪ್‌ನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.