
ಚಿಕ್ಕಬಳ್ಳಾಪುರ, ನ. ೧೩- ಯಾವುದೇ ಮಹನೀಯರು ಕೇವಲ ಹುಟ್ಟು ಮತ್ತು ಸಾವಿನಿಂದ ಅಮರರಾಗುವುದಿಲ್ಲ. ಅವರು ತಮ್ಮ ಜೀವಿತಾವಧಿಯಲ್ಲಿ ಮಾಡಿದ ಸಾಧನೆಗಳು, ತೋರಿದ ಧೈರ್ಯ, ಸಾಹಸ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳಿಂದ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಅಂತಹ ಮಹಾನ್ ಸಾಧಕಿಯರ ಸಾಲಿನಲ್ಲಿ ವೀರವನಿತೆ ಒನಕೆ ಓಬವ್ವ ಅವರು ಅಗ್ರಸ್ಥಾನದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಅವರು ಬಣ್ಣಿಸಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಅವರ ಜಯಂತಿ ಕಾರ್ಯಕ್ರಮದಲ್ಲಿ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಒನಕೆ ಓಬವ್ವ ಅವರು ಸ್ವಾಮಿನಿಷ್ಠೆ, ಪತಿನಿಷ್ಠೆ ಹಾಗೂ ಅಪ್ರತಿಮ ದೇಶಪ್ರೇಮವನ್ನು ಹೊಂದಿದ್ದ ಧೈರ್ಯಶಾಲಿ ಮಹಿಳೆಯಾಗಿದ್ದರು. ಸಂದರ್ಭಕ್ಕೆ ತಕ್ಕಂತೆ ಸಮಯಪ್ರಜ್ಞೆ ಮೆರೆದು, ತಮ್ಮ ಪ್ರಾಣದ ಹಂಗನ್ನೂ ತೊರೆದು ಚಿತ್ರದುರ್ಗದ ಕೋಟೆಯನ್ನು ರಕ್ಷಿಸಲು ಒನಕೆಯನ್ನೇ ಆಯುಧವನ್ನಾಗಿ ಬಳಸಿದ ಅವರ ಸಾಹಸ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ. ಸಾಮಾನ್ಯ ಮಹಿಳೆಯಾಗಿದ್ದರೂ ಅಸಾಮಾನ್ಯ ಧೈರ್ಯ ಮತ್ತು ಸಮಯೋಚಿತ ನಿರ್ಧಾರದಿಂದ ಶತ್ರುಗಳ ವಿರುದ್ಧ ಹೋರಾಡಿದ ಅವರ ಜೀವನ ಎಲ್ಲರಿಗೂ ಮಾದರಿಯಾಗಿದೆ. ಇಂತಹ ಮಹಾನ್ ಮಹಿಳೆಯ ಆದರ್ಶಗಳನ್ನು ಇಂದಿನ ಯುವಜನತೆ ಹಾಗೂ ಮಹಿಳೆಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಾಮಾನ್ಯ ಮಹಿಳೆಯಿಂದ ಅಸಾಮಾನ್ಯ ಸಾಧನೆ
ರಾಜವಂಶದಲ್ಲಿ ಜನಿಸಿ ರಾಜ್ಯದ ರಕ್ಷಣೆಗಾಗಿ ಶೌರ್ಯ ಪ್ರದರ್ಶಿಸುವ ಅವಕಾಶ ಪಡೆದವರು ಇತಿಹಾಸದಲ್ಲಿ ಅನೇಕರು ಇದ್ದಾರೆ. ಆದರೆ ಸಾಮಾನ್ಯ ಕಾವಲುಗಾರನ ಪತ್ನಿಯಾಗಿದ್ದ ಒನಕೆ ಓಬವ್ವ ಅವರು ತಮಗೆ ದೊರೆತ ಅಲ್ಪ ಅವಕಾಶವನ್ನೇ ಅತ್ಯಂತ ಚಾಕಚಕ್ಯತೆಯಿಂದ ಬಳಸಿಕೊಂಡು, ಒನಕೆಯನ್ನು ಆಯುಧವನ್ನಾಗಿ ಮಾಡಿಕೊಂಡು ಕೋಟೆಯ ರಕ್ಷಣೆಗೆ ನಿಂತಿದ್ದು ಅವರ ವಿಶೇಷ ಸಾಧನೆಯಾಗಿದೆ. ಯಾವುದೇ ದೊಡ್ಡ ಅಧಿಕಾರ ಅಥವಾ ಸೌಲಭ್ಯವಿಲ್ಲದಿದ್ದರೂ ಧೈರ್ಯ, ಸಮಯಪ್ರಜ್ಞೆ ಮತ್ತು ಕರ್ತವ್ಯನಿಷ್ಠೆಯಿಂದ ಇತಿಹಾಸದಲ್ಲಿ ಅಚ್ಚಳಿಯದ ಛಾಪು ಮೂಡಿಸಬಹುದು ಎಂಬುದಕ್ಕೆ ಒನಕೆ ಓಬವ್ವ ಅವರ ಜೀವನವೇ ಸಾಕ್ಷಿಯಾಗಿದೆ ಎಂದರು.
ಇಂದು ಮಹಿಳೆಯರು ಶಿಕ್ಷಣ, ಕೃಷಿ, ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಗಗನಯಾನದಂತಹ ಉನ್ನತ ಕ್ಷೇತ್ರಗಳಲ್ಲಿಯೂ ಮಹಿಳೆಯರು ಸಾಧನೆಯ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದ್ದಾರೆ. ಇದಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಕಲ್ಪಿಸಿರುವ ಸಮಾನತೆ, ಶೈಕ್ಷಣಿಕ ಮತ್ತು ಔದ್ಯೋಗಿಕ ಅವಕಾಶಗಳು ಪ್ರಮುಖ ಆಧಾರವಾಗಿವೆ. ಮಹಿಳೆಯರಿಗೆ ಸಮಾನ ಅವಕಾಶಗಳು ದೊರೆತಾಗ ಅವರು ಸಮಾಜದ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಲು ಸಾಧ್ಯವಾಗುತ್ತದೆ. ಒನಕೆ ಓಬವ್ವ ಸೇರಿದಂತೆ ಇತಿಹಾಸದಲ್ಲಿ ಸಾಹಸ ಮತ್ತು ಸಾಧನೆ ಮೆರೆದ ಮಹಿಳೆಯರ ಜೀವನಗಾಥೆಗಳು ಇಂದಿನ ಪೀಳಿಗೆಯ ಮಹಿಳೆಯರಿಗೆ ಆತ್ಮವಿಶ್ವಾಸ ಹಾಗೂ ಸಾಧನೆಯ ಸ್ಫೂರ್ತಿಯಾಗಬೇಕು ಎಂದು ಹೇಳಿದರು.
ಈ ವೇಳೆ ಕನ್ನಡ ಉಪನ್ಯಾಸಕರು ಹಾಗೂ ವರದಿಗಾರರಾದ ಮುನಿರಾಜು ಎಂ. ಹರಿಕೆರೆ ರವರು ಉಪನ್ಯಾಸ ನೀಡಿದರು.
ಜಾನಪದ ಕಲಾತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ
ಕಾರ್ಯಕ್ರಮಕ್ಕೂ ಮುನ್ನ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಮುಂಭಾಗದಿಂದ ಕನ್ನಡ ಭವನದವರೆಗೆ ವೀರವನಿತೆ ಒನಕೆ ಓಬವ್ವ ಜಯಂತಿಯ ಅಂಗವಾಗಿ ಜಾನಪದ ಕಲಾತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು. ಜಿಲ್ಲಾಧಿಕಾರಿ ಜಿ. ಪ್ರಭು ಅವರು ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಜಾನಪದ ಕಲಾತಂಡಗಳ ಕಲಾಪ್ರದರ್ಶನ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ಸಾರ್ವಜನಿಕರು ಹಾಗೂ ಸಮುದಾಯದ ಮುಖಂಡರು ಉತ್ಸಾಹದಿಂದ ಭಾಗವಹಿಸಿ ವೀರವನಿತೆಯ ಸಾಹಸವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎಸ್. ಸಂದೀಪ ಚಕ್ರವರ್ತಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್. ವೆಂಕಟೇಶರೆಡ್ಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮುನಿರತ್ನಮ್ಮ, ತಹಶೀಲ್ದಾರ್ ರಶ್ಮಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ರೀನಾಥಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಮುದಾಯಗಳ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.























