Home ಮುಖಪುಟ ಸುದ್ದಿ ಐಷಾರಾಮಿ ಹೋಟೆಲ್‌ಗಳ ಕರಾಳ ಮುಖ ಆಹಾರ ಪ್ರಿಯರಿಗೆ ಆತಂಕ

ಐಷಾರಾಮಿ ಹೋಟೆಲ್‌ಗಳ ಕರಾಳ ಮುಖ ಆಹಾರ ಪ್ರಿಯರಿಗೆ ಆತಂಕ

ಬೆಂಗಳೂರು,ಆ.೧೧-ರಾಜಧಾನಿಯ ಪ್ರಸಿದ್ಧ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ನಡೆಸಿದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡುಗೆಮನೆಗಳ ದಾಳಿಯು ನಗರದ ಆಹಾರ ಪ್ರಿಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಹೊರನೋಟಕ್ಕೆ ಕಣ್ಣುಕೋರೈಸುವ ವಿನ್ಯಾಸ, ಶುಚಿತ್ವ ಹೊಂದಿರುವ ಪ್ರಮುಖ ಹೋಟೆಲ್‌ಗಳ ಹಿತ್ತಲಿನಲ್ಲಿ ಮೂಲಭೂತ ಆಹಾರ ಸಂಗ್ರಹಣೆ ಹಾಗೂ ನೈರ್ಮಲ್ಯ ನಿಯಮಗಳನ್ನು ಗಾಳಿಗೆ ತೂರಿರುವುದು ಈ ತಪಾಸಣೆಯಲ್ಲಿ ಸ್ಪಷ್ಟವಾಗಿ ತಿಳಿದುಬಂದಿದೆ.

ಅವಧಿ ಮೀರಿದ ದಾಸ್ತಾನು ಮತ್ತು ಲೇಬಲಿಂಗ್ ಕೊರತೆ: ದಿನಬಳಕೆಯ ವಸ್ತುಗಳು ಹಾಗೂ ಮಾಂಸದ ಪ್ಯಾಕೆಟ್‌ಗಳ ಮೇಲೆ ನಮೂದಿಸಿರುವ ಕಾಲಾವಧಿ ಮುಗಿದಿದ್ದರೂ, ಅವುಗಳನ್ನು ಉಗ್ರಾಣಗಳಲ್ಲಿ ಹಾಗೆಯೇ ಸಂಗ್ರಹಿಸಿಡುವುದು.

ಸಸ್ಯಾಹಾರಿ-ಮಾಂಸಾಹಾರಿ ಮಿಶ್ರಣ: ಸಸ್ಯಾಹಾರಿ ಮತ್ತು ಮಾಂಸಾಹಾರಿ ಪದಾರ್ಥಗಳನ್ನು ಪ್ರತ್ಯೇಕವಾಗಿ ಇಡದೆ ಜೊತೆಯಾಗಿಡುವುದು ಹಾಗೂ ಸೂಕ್ತ ಕೋಲ್ಡ್ ಸ್ಟೋರೇಜ್ ತಾಪಮಾನವನ್ನು ನಿರ್ವಹಿಸದಿರುವುದು. ’ಮೊದಲು ಬಂದ ಸರಕು – ಮೊದಲು ಬಳಕೆ’ ನಿಯಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು.

ಅಧಿಕಾರಿಗಳ ಈ ತಪಾಸಣೆಗೆ ಪ್ರತಿಕ್ರಿಯಿಸಿರುವ ಹೋಟೆಲ್ ಮಾಲೀಕರ ಸಂಘಟನೆಗಳು ಹಾಗೂ ಉದ್ಯಮದ ಹಿರಿಯ ಪ್ರತಿನಿಧಿಗಳು ತಮ್ಮ ವಾದವನ್ನು ಮಂಡಿಸಿದ್ದಾರೆ:

ತೀವ್ರ ಶೀತಲೀಕರಿಸಿದ (-೧೮ ಡಿಗ್ರಿ ಸೆಲ್ಸಿಯಸ್) ಆಮದು ಮಾಡಿದ ಮಾಂಸ ಮತ್ತು ಸಾಗರ ಉತ್ಪನ್ನಗಳು ತಯಾರಕರ ಪ್ರಮಾಣಪತ್ರದ ಪ್ರಕಾರ ೬ ತಿಂಗಳಿಂದ ೧ ವರ್ಷದವರೆಗೆ ಬಾಳಿಕೆ ಬರುತ್ತವೆ. ಆದರೆ ಸ್ಥಳೀಯ ತಪಾಸಣಾ ಮಾನದಂಡಗಳು ಹಾಗೂ ಪ್ಯಾಕೆಟ್ ಮೇಲಿನ ದಿನಾಂಕಗಳ ನಡುವಿನ ವ್ಯತ್ಯಾಸದಿಂದಾಗಿ ಇಲಾಖೆ ಅಧಿಕಾರಿಗಳು ಇದನ್ನು “ಹಾಳಾದ/ಅವಧಿ ಮೀರಿದ” ಆಹಾರವೆಂದು ಪರಿಗಣಿಸುತ್ತಿದ್ದಾರೆ.

“ಹಾಳಾದ ಮಾಂಸವನ್ನು ಆಹಾರವಾಗಿ ನೀಡಲು ಸಾಧ್ಯವಿಲ್ಲ, ಅದನ್ನು ಕಣ್ಣು ಮತ್ತು ವಾಸನೆಯಿಂದ ತಕ್ಷಣವೇ ಗುರುತಿಸಬಹುದು” ಎಂದು ಉದ್ಯಮದ ಪ್ರತಿನಿಧಿಯೊಬ್ಬರು ಹೇಳಿದ್ದಾರೆ.

ಆದಾಗ್ಯೂ, ದೀರ್ಘಕಾಲದವರೆಗೆ ಹಾಳಾಗುವ ವಸ್ತುಗಳನ್ನು ಸಂಗ್ರಹಿಸಿಡುವುದು ಮತ್ತು ಸರಿಯಾದ ಮೇಲ್ವಿಚಾರಣೆ ಇಲ್ಲದಿರುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಉದ್ಯಮದ ಪ್ರಮುಖರು ಒಪ್ಪಿಕೊಂಡಿದ್ದಾರೆ.

ಉಗ್ರಾಣ ನಿರ್ವಾಹಕರು ಮತ್ತು ಖರೀದಿ ಅಧಿಕಾರಿಗಳನ್ನು ಅವರ ಕಂಪ್ಯೂಟರ್ ಜ್ಞಾನ ಅಥವಾ ಭಾಷಾ ಚಾತುರ್ಯ ನೋಡಿ ನೇಮಿಸಿಕೊಳ್ಳಲಾಗುತ್ತಿದೆಯೇ ಹೊರತು, ವೈಜ್ಞಾನಿಕ ದಾಸ್ತಾನು ನಿಯಮಗಳಾದ ಈIಈಔ ಅಥವಾ ಸ್ಟೋರ್ ಲೇಔಟ್ ವಿನ್ಯಾಸದ ತರಬೇತಿ ಅವರಿಗೆ ಇರುವುದಿಲ್ಲ. ಇತ್ತೀಚೆಗೆ ಆನ್‌ಲೈನ್ ಡೆಲಿವರಿ ಆಪ್‌ಗಳು ಹಾಗೂ ತಕ್ಷಣದ ಪೂರೈಕೆ ಜಾಲಗಳು ಹೆಚ್ಚಾಗಿರುವುದರಿಂದ ಯೋಜಿತ ದಾಸ್ತಾನು ಅಭ್ಯಾಸ ಮರೆಯಾಗಿದೆ.

ನಗರದ ಹೋಟೆಲ್‌ಗಳು ಬಳಸುವ ಶೇ. ೩೦ ರಿಂದ ೪೦ ರಷ್ಟು ಹಾಲು, ಕೋಳಿ ಮತ್ತು ಸಮುದ್ರಾಹಾರವನ್ನು ಯಾವುದೇ ನೋಂದಣಿ ಇಲ್ಲದ ಅಸಂಘಟಿತ ಪೂರೈಕೆದಾರರಿಂದಲೇ ಖರೀದಿಸಲಾಗುತ್ತಿದೆ.

ಆಂತರಿಕ ಅನುಮೋದನೆ ವಿಳಂಬ: ಹಾಳಾದ ಅಥವಾ ಅವಧಿ ಮೀರಿದ ವಸ್ತುಗಳನ್ನು ವಿಲೇವಾರಿ ಮಾಡಲು ಆಡಳಿತ ಮಂಡಳಿಯ ಹಣಕಾಸು ಅನುಮೋದನೆ ತಡವಾಗುವುದರಿಂದ, ಅಂತಹ ವಸ್ತುಗಳು ಫ್ರೀಜರ್‌ಗಳಲ್ಲೇ ತಿಂಗಳುಗಟ್ಟಲೆ ಉಳಿದುಕೊಳ್ಳುತ್ತಿವೆ.

ವರ್ಷಕ್ಕೊಮ್ಮೆ ದಿಢೀರ್ ದಾಳಿ ನಡೆಸಿ ದಂಡ ವಿಧಿಸುವುದಕ್ಕಿಂತ, ಆಹಾರ ಸುರಕ್ಷತೆ ಮತ್ತು ಮಾನಕ ಪ್ರಾಧಿಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ನಿಯಮಿತವಾಗಿ ಭೇಟಿ ನೀಡಿ ಜಾಗೃತಿ ಮೂಡಿಸಬೇಕು ಮತ್ತು ಸಿಬ್ಬಂದಿಗೆ ತರಬೇತಿ ನೀಡುವ ಕೆಲಸ ಮಾಡಬೇಕು ಎಂದು ಹೋಟೆಲ್ ಮಾಲೀಕರು ವಿನಂತಿಸಿದ್ದಾರೆ.

ಉದ್ಯಮವು ಈಗಾಗಲೇ ಕೆಲವು ಉತ್ತಮ ಅಭ್ಯಾಸಗಳನ್ನು ಅನುಸರಿಸುತ್ತಿದ್ದು, ಉದಾಹರಣೆಗೆ ಬಳಸಿದ ಅಡುಗೆ ಎಣ್ಣೆಯನ್ನು ಬ್ರ್ಯಾಂಡ್‌ಗಳು ನಂತಹ ಸಂಸ್ಥೆಗಳಿಗೆ ಲೀಟರ್‌ಗೆ ೭೦೭೫ ರಂತೆ ಬಯೋಡೀಸೆಲ್ ತಯಾರಿಕೆಗಾಗಿ ಮಾರಾಟ ಮಾಡುತ್ತಿವೆ.

ಐಷಾರಾಮಿ ೫-ಸ್ಟಾರ್ ಹೋಟೆಲ್‌ಗಳು ಆಂತರಿಕ ನೈರ್ಮಲ್ಯ ತಪಾಸಕರನ್ನು ಇಟ್ಟುಕೊಂಡಿದ್ದರೂ, ಸಣ್ಣ ಮತ್ತು ಮಧ್ಯಮ ರೆಸ್ಟೋರೆಂಟ್‌ಗಳಲ್ಲಿ ನಿರಂತರ ಮೇಲ್ವಿಚಾರಣೆ ಹಾಗೂ ತರಬೇತಿಯ ಅಗತ್ಯವಿದೆ ಎಂಬುದನ್ನು ಈ ತಪಾಸಣೆಗಳು ಎತ್ತಿ ತೋರಿಸಿವೆ.