Home ಮುಖಪುಟ ಸುದ್ದಿ ತ.ನಾಡಿಗೆ ಕಾವೇರಿ ನೀರು: ಕಾನೂನು ಹೋರಾಟ

ತ.ನಾಡಿಗೆ ಕಾವೇರಿ ನೀರು: ಕಾನೂನು ಹೋರಾಟ

ಬೆಂಗಳೂರು / ಮಂಡ್ಯ, ಆ. ೧೨- ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಗಳಲ್ಲಿ ತಮಿಳುನಾಡಿಗೆ ದಿನಕ್ಕೆ ೧೨,೦೦೦ ಕ್ಯೂಸೆಕ್ ನೀರು ಬಿಡುವಂತೆ ನೀಡಿರುವ ಆದೇಶ ಕನ್ನಡಿಗರಿಗೆ ಹಾಗೂ ರಾಜ್ಯದ ರೈತರಿಗೆ ಸರಿಯಾದ ನಿರ್ಧಾರವಲ್ಲ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಹಾಗೂ ಕಾನೂನು ತಜ್ಞರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರವಾಗಿ ರಾಜ್ಯದ ನಿಲುವು ಮತ್ತು ಮುಂದಿನ ಕಾನೂನು ಹೋರಾಟದ ಬಗ್ಗೆ ವಿವರಣೆ ನೀಡಿದರು.

ಸುಪ್ರೀಂ ಕೋರ್ಟ್ ಆದೇಶದ ಮೇಲೆಯೇ ಮುಂದಿನ ನಡೆ “ತಮಿಳುನಾಡು ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ನಾಳೆ ಈ ಅರ್ಜಿಯ ವಿಚಾರಣೆ ನಡೆಯಲಿದ್ದು, ಸುಪ್ರೀಂ ಕೋರ್ಟ್ ನೀಡುವ ತೀರ್ಪನ್ನು ಗಮನಿಸಿ ನಮ್ಮ ಮುಂದಿನ ಹೆಜ್ಜೆಯನ್ನು ಇಡುತ್ತೇವೆ. ನ್ಯಾಯಾಲಯದ ಆದೇಶದ ಆಧಾರದ ಮೇಲೆ ಕಾನೂನಾತ್ಮಕವಾಗಿ ಮುಂದೆ ಹೋಗಲು ರಾಜ್ಯಕ್ಕೆ ಅವಕಾಶವಿದೆ” ಎಂದು ಸಚಿವರು ತಿಳಿಸಿದರು.

ತಮಿಳುನಾಡಿನಲ್ಲಿ ಉತ್ತಮ ನೀರಿನ ಸಂಗ್ರಹ ತಮಿಳುನಾಡಿನ ಭವಾನಿ ಹಾಗೂ ಮೆಟ್ಟೂರು ಜಲಾಶಯಗಳಲ್ಲಿ ಸಾಕಷ್ಟು ನೀರಿದೆ. ಅಲ್ಲಿ ಅಂತರ್ಜಲ ಮಟ್ಟವೂ ಚೆನ್ನಾಗಿದ್ದು, ಶೀಘ್ರದಲ್ಲೇ ಅವರಿಗೆ ಹಿಂಗಾರು (ಈಶಾನ್ಯ) ಮಳೆಯೂ ಆರಂಭವಾಗಲಿದೆ. ಪ್ರಸ್ತುತ ನಮ್ಮ ಜಲಾಶಯಗಳಲ್ಲಿ ೭೬ ಟಿಎಂಸಿ ನೀರು ಲಭ್ಯವಿರಬಹುದು, ಆದರೆ ಇಂತಹ ಸಂದರ್ಭದಲ್ಲಿ ೧೨,೦೦೦ ಕ್ಯೂಸೆಕ್‌ನಷ್ಟು ಬೃಹತ್ ಪ್ರಮಾಣದ ನೀರನ್ನು ಹರಿಸಲು ನೀಡಿರುವ ಆದೇಶ ನ್ಯಾಯಸಮ್ಮತವಲ್ಲ. ಕಳೆದ ಆಗಸ್ಟ್ ೨೯ ರಿಂದ ಇದುವರೆಗೆ ಈಗಾಗಲೇ ೧೦ ಖಿಒಅ ನೀರು ತಮಿಳುನಾಡಿಗೆ ಹರಿದುಹೋಗಿದೆ ಎಂದು ಅಂಕಿ-ಅಂಶ ನೀಡಿದರು.

ಕುಮಾರಸ್ವಾಮಿಗೆ ಮುಕ್ತ ಚರ್ಚೆಗೆ ಸವಾಲು ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಪಗಳಿಗೆ ತಿರುಗೇಟು ನೀಡಿದ ರಾಮಲಿಂಗಾರೆಡ್ಡಿ, “ನಮ್ಮ ರಾಜ್ಯದ ವಕೀಲರು ಹಾಗೂ ಅಧಿಕಾರಿಗಳ ತಂಡ ಸುಪ್ರೀಂ ಕೋರ್ಟ್ ಮತ್ತು ಪ್ರಾಧಿಕಾರದ ಮುಂದೆ ಪ್ರಬಲವಾಗಿ ವಾದ ಮಂಡಿಸಿದೆ.

ಕೇಂದ್ರ ಸಚಿವ ಎಚ್.ಡಿ. ಕುಮಾರ್‌ಸ್ವಾಮಿ ಬೇಕಿದ್ದರೆ ಚರ್ಚೆಗೆ ಬರಲಿ ಅಥವಾ ಅವರು ಯಾರನ್ನಾದರೂ ಕಳುಹಿಸಲಿ. ನೀರಾವರಿ ಸಚಿವನಾಗಿ ನಾನು ಅವರೊಂದಿಗೆ ನೇರ ಚರ್ಚೆಗೆ ಸಿದ್ಧನಿದ್ದೇನೆ. ನಾವು ರಾಜ್ಯದ ರೈತರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಕಾಯ್ದುಕೊಂಡಿದ್ದೇವೆ. ಅವರು ರಾಜಕೀಯ ಹೇಳಿಕೆಗಳನ್ನು ನೀಡುತ್ತಿದ್ದು, ಅದಕ್ಕೆ ನಾವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅವರು ಕೇಂದ್ರ ಸಚಿವರಾಗಿದ್ದುಕೊಂಡು ರಾಜ್ಯದ ನೀರಾವರಿ ಸಮಸ್ಯೆಯನ್ನು ಬಗೆಹರಿಸಬಹುದಿತ್ತಲ್ಲವೇ” ಎಂದು ಪ್ರಶ್ನಿಸಿದರು.

ಮಂಡ್ಯ ರೈತರ ಪ್ರತಿಭಟನೆಗೆ ಬೆಂಬಲ ಮಂಡ್ಯದಲ್ಲಿ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸಿದ ಸಚಿವರು, “ರೈತರಿಗೆ ಕೋಪ ಬರುವುದು ತೀರಾ ಸಹಜ. ಅಲ್ಪ ಪ್ರಮಾಣದ ನೀರು ಬಿಡಲು ಹೇಳಿದ್ದರೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ. ಆದರೆ, ನೀರಿನ ಲಭ್ಯತೆಯನ್ನು ಸಮತೋಲನ ಮಾಡದೆ ಇಷ್ಟೊಂದು ಪ್ರಮಾಣದ ನೀರು ಬಿಡಿ ಎಂದು ಆದೇಶಿಸಬಾರದಿತ್ತು” ಎಂದರು.ಸಚಿವ ಸಂಪುಟ ಖಾತೆ ಹಂಚಿಕೆಇದೇ ವೇಳೆ ಸಚಿವ ಸಂಪುಟದ ಖಾತೆ ಹಂಚಿಕೆ ಕುರಿತು ಮಾತನಾಡಿದ ಸಚಿವರು, “ಇಂದು ಸಂಜೆಯೊಳಗೆ ಖಾತೆ ಹಂಚಿಕೆಯ ಪಟ್ಟಿ ಅಂತಿಮಗೊಳ್ಳಲಿದೆ. ಹಿಂದೆ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಎರಡು ತಿಂಗಳ ಕಾಲ ಸಂಪುಟ ವಿಸ್ತರಣೆಯೇ ಆಗಿರಲಿಲ್ಲ. ಮುಂಬರುವ ಅಧಿವೇಶನದಲ್ಲಿ ಸರ್ಕಾರದ ಪರವಾಗಿ ಉತ್ತರ ನೀಡಲು ಯಾವುದೇ ತೊಂದರೆಯಾಗುವುದಿಲ್ಲ. ಸಂಪುಟದಲ್ಲಿ ಎಲ್ಲಾ ಹಿರಿಯ ಮತ್ತು ಅನುಭವೀ ಸಚಿವರೇ ಇದ್ದು, ಎಲ್ಲರೂ ಸಮರ್ಥವಾಗಿ ಉತ್ತರ ನೀಡಲಿದ್ದಾರೆ.

ಸುಪ್ರೀಂಗೆ ಮೇಲ್ಮನವಿ ಸಾಧ್ಯತೆ


ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳು ನಾಡಿಗೆ ಪ್ರತಿನಿತ್ಯ ೧೨ ಕ್ಯುಸೆಕ್ಸ್ ನೀರು ಬಿಡುವಂತೆ ನೀಡಿರುವ ಆದೇಶ ವಿರುದ್ಧ ರಾಜ್ಯ ಸರ್ಕಾರ ಸುಪ್ರಿಂಕೋರ್ಟಿಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳಿದೆ.


ಮಳೆ ಕೊರತೆಯಾದಾಗ ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಾದ ಕೆ.ಆರ್.ಎಸ್ , ಕಬಿನಿ, ಹಾರಂಗಿ ಮತ್ತು ಹೇಮಾವತಿ ಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತದೆ. ಈ ಸಂದರ್ಭದಲ್ಲಿ ತಮಿಳುನಾಡಿನ ಕುಡಿಯುವ ನೀರು ಮತ್ತು ಕೃಷಿ ಅಗತ್ಯಕ್ಕಾಗಿ ಬಿಳಿಗುಂಡ್ಲು ಮಾಪನ ಕೇಂದ್ರ ದ ಮೂಲಕ ನಿಗದಿತ ಪ್ರಮಾಣದ ನೀರನ್ನು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶಿಸಿದೆ.

ಆದರೆ ನೀರು ಹರಿಸುವ ಆದೇಶಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಅಥವಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಆದೇಶನ್ವಯ ಮುಂಗಾರು ಮಳೆ ಕೈಕೊಟ್ಟಾಗ ಜಲಾಶಯಗಳಲ್ಲಿ ಸಂಗ್ರಹವಿರುವ ನೀರು ಕುಸಿಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸಿದರೆ ಹಳೆಯ ಮೈಸೂರು ಭಾಗದ ರೈತರಿಗೆ ಮತ್ತು ಬೆಳೆಗಳಿಗೆ ತೀವ್ರ ತೊಂದರೆಯಾಗುತ್ತದೆ. ಬೆಂಗಳೂರು, ಮೈಸೂರು ಸೇರಿದಂತೆ ಜಲಾನಯನ ಪ್ರದೇಶದ ನಗರ-ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರನ್ನು ಕಾಯ್ದಿರಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ.

ತನ್ನ ಜಲಾಶಯಗಳ ನೀರಿನ ಸಂಗ್ರಹಣೆಯನ್ನು ಆಧರಿಸಿ, ನೀರು ಹರಿಸುವ ಪ್ರಮಾಣವನ್ನು ಕಡಿಮೆ ಮಾಡಲು ಅಥವಾ ತಡೆಹಿಡಿಯಲು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಿದೆ.