
ಬೆಂಗಳೂರು, ಸೆ. ೦೮- ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಸಿರಿಗನ್ನಡ ಫೌಂಡೇಶನ್ ಕರ್ನಾಟಕ ಹಾಗೂ ಬಿ ನ್ಯೂಸ್ ಕನ್ನಡ ಪತ್ರಿಕೆ ಮತ್ತು ಚಾನೆಲ್ ವತಿಯಿಂದ ಆಯೋಜಿಸಿದ್ದ ‘ಶಿಕ್ಷಕರ ಹಬ್ಬ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಶಿಕ್ಷಕ, ಸಾಹಿತಿ ಅಡ್ಕಸ್ಥಳ ಕಬೀರ್‌ಗೆ ಪ್ರತಿಷ್ಠಿತ ‘ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಣ ತಜ್ಞ ಪುರಸ್ಕಾರ’ ಪ್ರದಾನ ಮಾಡಲಾಯಿತು.
ಅಡ್ಕಸ್ಥಳ ಕಬೀರ್ ಅವರ ಶೈಕ್ಷಣಿಕ ಸೇವೆ ಹಾಗೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮಿ ಟಿ.ಎನ್. ಪ್ರಶಸ್ತಿಯನ್ನು ನೀಡಿದರು. ಕಬೀರ್ ಅವರ ಪರವಾಗಿ ಆಗಮಿಸಿದ್ದ ವಿಶ್ರಾಂತ ಮುಖ್ಯ ಶಿಕ್ಷಕ ಬಿ.ಎಸ್. ಕಾರಂತ್ ಹಾಗೂ ಉಪನ್ಯಾಸಕಿ ಹರ್ಷಿತಾ ಎನ್. ಗೌಡ ಅವರು ಉಪಸ್ಥಿತಿ ಆತಿಥ್ಯ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಟಿ.ಎನ್. ಲಕ್ಷ್ಮಿ , ವಿದ್ಯಾರ್ಥಿಯ ಕೈಯಲ್ಲಿ ಪುಸ್ತಕವಷ್ಟೇ ಅಲ್ಲ, ಮೌಲ್ಯ ಮತ್ತು ಸಂಸ್ಕಾರದ ದೀಪವನ್ನೂ ಹಚ್ಚುವವನೇ ನಿಜವಾದ ಶಿಕ್ಷಕ. ಅಂತಹ ಶಿಕ್ಷಕರ ಸೇವೆಯನ್ನು ಗೌರವಿಸುವುದು ಸಮಾಜದ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ಭವಿಷ್ಯದ ಪ್ರಜೆಗಳನ್ನು ರೂಪಿಸುವ ರಾಷ್ಟ್ರ ನಿರ್ಮಾತೃಗಳು.ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಮೌಲ್ಯ, ಮಾನವೀಯತೆ, ಶಿಸ್ತು ಮತ್ತು ಸಂಸ್ಕಾರಗಳನ್ನು ಬೆಳೆಸುವ ಮೂಲಕ ರಾಷ್ಟ್ರಕ್ಕೆ ಅಮೂಲ್ಯ ಕೊಡುಗೆ ನೀಡಬೇಕು ಎಂದರು.
ಕಾರ್ಯಕ್ರಮವನ್ನು ಸಾಹಿತಿ ಮತ್ತು ಸಮಾಜ ಸೇವಾ ಧುರೀಣ ವಿಶ್ವನಾಥ್ ಎಚ್. ಉದ್ಘಾಟಿಸಿದರು.ಸಿರಿಗನ್ನಡ ಫೌಂಡೇಶನ್ ಅಧ್ಯಕ್ಷ ರಾಜೇಂದ್ರ ಕುಮಾರ ಮಠ ಪ್ರಾಸ್ತಾವಿಕ ಭಾಷಣ ಮಾಡಿದರು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಡಾ. ಹರ್ಷ ಆತಿಥ್ಯ ಭಾಷಣ ಮಾಡಿದರು. ನಂದೀಶ್ ಕಾಖಂಡಕಿ ಆಶಯ ನುಡಿ ಸಲ್ಲಿಸಿದರು. ಬ್ರಹ್ಮಕುಮಾರಿ ಭಾರತಿ ಜಿ. ಅವರ ಸಾನ್ನಿಧ್ಯ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಶಿಕ್ಷಕರ ಸೇವೆ, ಸಾಧನೆ ಮತ್ತು ಸಮರ್ಪಣೆಯನ್ನು ಗೌರವಿಸುವ ಮೂಲಕ ನಡೆದ ‘ಶಿಕ್ಷಕರ ಹಬ್ಬ ಗುರುವಿನ ಮಹತ್ವವನ್ನು ಸಾರಿದ ಅರ್ಥಪೂರ್ಣ ವೇದಿಕೆಯಾಗಿ ಗಮನ ಸೆಳೆಯಿತು.
































