
ಧಾರವಾಡ, ಜು.೫: ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಬೆಳೆ ಹಾನಿ ಆದ ಬಗ್ಗೆ ಸರಿಯಾದ ಮಾಹಿತಿ ಪಡೆದು, ವರದಿ ಸಲ್ಲಿಸಬೇಕು ಎಂದು ಲೋಕೋಪಯೋಗಿ ಹಾಗೂ ಧಾರವಾಡ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಮೇಲುಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಧಾರವಾಡ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಮಾತನಾಡಿದರು.
ಧಾರವಾಡ ಜಿಲ್ಲೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ಮಳೆಯ ಕೊರತೆಯಿಂದ ತೊಂದರೆಯಾಗುವ ಸಾಧ್ಯತೆ ಇದ್ದು, ಅಧಿಕಾರಿಗಳು ಬೆಳೆ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಿದ ಮೇಲೆ ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದAತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಮಳೆಯ ಕೊರತೆ ಮುಂದುವರೆದ್ದಲ್ಲಿ ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಮೋಡ ಬಿತ್ತನೆಗೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ನೀರಿನ ಸಮಸ್ಯೆ ಪರಿಹಾರಕ್ಕೆ ಕೆರೆ ತುಂಬಿಸುವುದು ಬಹಳ ಸೂಕ್ತವಾಗಿದ್ದು, ಈಗ ಮಲಪ್ರಭಾ ನದಿಯಲ್ಲಿ ನೀರು ಬರುತ್ತಿದೆ. ಇಂದಿನಿAದಲೇ ಕೆರೆ ತುಂಬಿಸುವ ಕಾರ್ಯ ಪ್ರಾರಂಭಿಸಬೇಕು. ಕೆರೆಗಳಿಗೆ ನೀರು ತುಂಬಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಹುಬ್ಬಳ್ಳಿ-ಧಾರವಾಡದಲ್ಲಿ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳನ್ನು ಶೀಘ್ರ ಕಾರ್ಯರೂಪಕ್ಕೆ ತರಬೇಕು ಹಾಗೂ ಎಲ್ ಆ್ಯಂಡ್ ಟಿ ಕಂಪನಿಗೆ ಸಂಬAಧಿಸಿದ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಕೇಂದ್ರ ಗ್ರಾಹಕರ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ ಜೋಶಿ ಅವರು ಮಾತನಾಡಿ, ಜಿಲ್ಲೆಯಲ್ಲಿ ರೈತರಿಗೆ ಬೆಳೆ ವಿಮೆ ಮಾಡಿಸುವುದಾಗಿ ಏಜೆಂಟರ್ ಹಾವಳಿ ಬಹಳಷ್ಟು ಹೆಚ್ಚಾಗಿದ್ದು, ರೈತರಿಗೆ ಪೂರ್ಣ ಪ್ರಮಾಣದಲ್ಲಿ ಬೆಳೆ ವಿಮೆಯ ಹಣ ತಲುಪಬೇಕು. ಏಜೆಂಟರಿಗೆ ಆಸ್ಪದ ನೀಡಬಾರದು. ಅಂತಹ ಏಜೆಂಟರ ಮೇಲೆ ಶಿಸ್ತು ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ದವಸ ಧಾನ್ಯ, ಮೇವು ಹಾಗೂ ಕುಡಿಯುವ ನೀರಿನ ಸಂಗ್ರಹಕ್ಕೆ ವಿಶೇಷ ಗಮನ ಹರಿಸಬೇಕು. ಪ್ರತಿ ಗ್ರಾಮಕ್ಕೆ ಕುಡಿಯಲು ಮಲಪ್ರಭಾ ನೀರನ್ನು ಪೂರೈಸಲು ಸಂಬAಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಅವರು ತಿಳಿಸಿದರು.
ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಅಬ್ಬಯ್ಯ ಪ್ರಸಾದ ಅವರು ಮಾತನಾಡಿ, ೨೦೨೬ ನೇ ಸಾಲಿನ ಮುಂಗಾರು ಹಂಗಾಮಿನ ರೈತರ ಬೆಳೆ ಸಮೀಕ್ಷೆ ಮಾಡಿ, ಮಾಹಿತಿ ಪಡೆದು, ರೈತರ ಬೆಳೆ ನಷ್ಟವಾದಲ್ಲಿ ಸಕಾಲದಲ್ಲಿ ಬೆಳೆ ವಿಮೆ ಪಾವತಿಸಬೇಕು. ರೈತರಿಗೆ ಗೊಬ್ಬರ, ಮೇವಿನ ಸಮಸ್ಯೆ ಆಗದಂತೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಹೇಳಿದರು.
ಶಾಸಕರಾದ ಎನ್. ಎಚ್. ಕೋನರಡ್ಡಿ ಅವರು ಮಾತನಾಡಿ, ಬೆಳೆ ವಿಮೆ ಪರಿಹಾರ ಪ್ರಕರಣಗಳಲ್ಲಿ ಬೆಳೆ ಮಿಸ್ ಮ್ಯಾಚ್ನಿಂದ ರೈತರಿಗೆ ಪರಿಹಾರ ವಿಳಂಬವಾಗುತ್ತಿದೆ. ಏಜೆಂಟರು ಬೆಳೆ ವಿಮೆ ನೋಂದಣಿಗೆ ಹೆಚ್ಚಿನ ಪರಿಹಾರ ಕೊಡಿಸುತ್ತೇವೆ ಎಂದು ರೈತರನ್ನು ಮೋಸಗೊಳಿಸುವ ಪ್ರಕರಣಗಳು ಕೇಳಿ ಬರುತ್ತವೆ. ಇನ್ನೂ ಮುಂದೆ ಇಂತಹ ಪ್ರಕರಣಗಳು ಉಂಟಾಗದAತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಕಾಲದಲ್ಲಿ ಮಳೆ ಆಗದಿದ್ದಲ್ಲಿ, ಮೋಡ ಬಿತ್ತನೆ ಮೂಲಕ ರೈತರು ಬೆಳೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಮಾತನಾಡಿ, ಜಿಲ್ಲೆಯಲ್ಲಿ ಪೂರ್ವ ಮುಂಗಾರು ಜೂ.೧ ರಿಂದ ಜೂ.೩೦ ರವರೆಗೆ ೧೨೪.೦೮ ವಾಡಿಕೆ ಮಳೆಗೆ ೯೫.೫ ಮೀ.ಮೀ ಮಳೆಯಾಗಿದ್ದು, ೨೩ ಮಿ.ಮೀ. ಕಡಿಮೆ ಮಳೆಯಾಗಿದೆ. ಮುಂಗಾರು ಹಂಗಾಮಿನ ಜೂನ್ ೧ ರಿಂದ ಜುಲೈ ೪ ವರೆಗೆ ವಾಡಿಕೆ ಮಳೆ ೧೪೨.೫ ಮಿ.ಮಿ ಗೆ ೧೦೩.೯ ಮಿ.ಮಿ ವಾಸ್ತವ ಮಳೆಯಾಗಿದ್ದು, ೨೭ ಮಿ.ಮಿ ಕಡಿಮೆ ಮಳೆಯಾಗಿದೆ.
೨೦೨೬ ರ ನೈರುತ್ಯ ಮುಂಗಾರು ಜೂನ್ ೧ ರಿಂದ ಜುಲೈ ೪ ರ ಅವಧಿಯಲ್ಲಿ, ಧಾರವಾಡ ಜಿಲ್ಲೆಯ ೮ ತಾಲೂಕುಗಳ ಪೈಕಿ, ಕುಂದಗೋಳ ತಾಲೂಕಿನಲ್ಲಿ ಅಧಿಕ ಮಳೆ ಆಗಿದೆ. ಉಳಿದ ೭ ತಾಲೂಕಿನಲ್ಲಿ ಸಾಧಾರಣ ಮಳೆ ಕೊರತೆ ಕಂಡು ಬಂದಿದೆ.




























